ಬೆಂಗಳೂರು,ಜೂ.17- ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಗೃಹಸಚಿವ ಡಾ.ಜಿ.ಪರಮೇಶ್ವರ್ ಅಭಿವೃದ್ಧಿ ಕಾರ್ಯಗಳಿಗೆ ಸಂಪನೂಲ ಕ್ರೂಢೀಕರಣ ಅನಿವಾರ್ಯ. ಹಾಗಾಗಿ ತೈಲಬೆಲೆ ಹೆಚ್ಚಿಸಿದ್ದೇವೆ. ಇದರಿಂದ ಸಹಜವಾಗಿ ಅಡ್ಡಪರಿಣಾಮ ಆಗೇ ಆಗುತ್ತದೆ ಎಂದು ವಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಸರ್ಕಾರ ದೇಶದಲ್ಲಿ 14 ಬಾರಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಹೆಚ್ಚಿಸಿದೆ. ಆಗ ಪ್ರತೀ ಬ್ಯಾರೆಲ್ ಬೆಲೆ ಕಡಿಮೆ ಇತ್ತು. ನಾವು ದರ ಏರಿಕೆಯನ್ನು ವಿರೋಧಿಸಿ ಪ್ರತಿಭಟನೆ ಮಾಡಿದ್ದೆವು. ಬಿಜೆಪಿಯವರು ಬೆಲೆ ಇಳಿಸಿರಲಿಲ್ಲ ಎಂದರು.
ನೆರೆರಾಜ್ಯಗಳಾದ ತಮಿಳುನಾಡು, ಕೇರಳ ಸೇರಿದಂತೆ ಎಲ್ಲಾ ರಾಜ್ಯಗಳಿಗೆ ಹೋಲಿಸಿದರೆ ನಮಲ್ಲಿನ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಇದೆ. ಮಾರಾಟ ತೆರಿಗೆ ಹೆಚ್ಚಿಸಬೇಕೆಂಬ ಪ್ರಸ್ತಾಪ ಬಹಳ ವರ್ಷಗಳಿಂದಲೂ ಇತ್ತು. ಆದರೆ ಕ್ರಮ ಕೈಗೊಂಡಿರಲಿಲ್ಲ. ಈಗ ಇಷ್ಟು ಪ್ರಮಾಣದ ಹೆಚ್ಚಳದ ನಂತರವೂ ನಮಲ್ಲಿ ನೆರೆರಾಜ್ಯಕ್ಕಿಂತಲೂ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಇದೆ. ಹೀಗಾಗಿ ಜನರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ರಾಜ್ಯದಲ್ಲಿ ಯೋಜನೆಗಳು ಜಾರಿಯಾಗಬೇಕು. ವಿವಿಧ ಅಭಿವೃದ್ಧಿ ಕೆಲಸಗಳಾಗಬೇಕು. ಇದಕ್ಕೆಲ್ಲಾ ಸಂಪನೂಲ ಕ್ರೂಢೀಕರಣಗೊಳ್ಳಬೇಕಿದೆ. ಗ್ಯಾರಂಟಿ ಯೋಜನೆಗಳಿಗಾಗಿ ದರ ಹೆಚ್ಚಿಸಲಾಗಿದೆ ಎಂಬ ವ್ಯಾಖ್ಯಾನ ಸರಿಯಲ್ಲ ಎಂದರು.
ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಕಡಿಮೆ ಮಾಡಲಾಗುವುದು ಎಂದು ಹೇಳಿದ್ದರು. ಈಗ ವ್ಯತಿರಿಕ್ತವಾಗಿ ದರ ಹೆಚ್ಚಿಸಲಾಗಿದೆ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ನಾವು ಯಾವುದೋ ಮಾತುಗಳನ್ನು ಹೇಳಿದ್ದರೆ ಅದೇ ಶಾಶ್ವತವಾಗಿ ನಿಲ್ಲುವುದಿಲ್ಲ.
ಸಂದರ್ಭಾನುಸಾರ ಪರಿಸ್ಥಿತಿಗನುಗುಣವಾಗಿ ಆಡಳಿತ ನಡೆಸಬೇಕಿದೆ ಎಂದು ಸ್ಪಷ್ಟನೆ ನೀಡಿದರು.
ದರ ಏರಿಕೆಯನ್ನು ಮನಸ್ಸಿಗೆ ಬಂದ ಹಾಗೆ ಸುಮನೆ ಹೆಚ್ಚಿಸಿಲ್ಲ. ಯಾವ ಕಾರಣಕ್ಕೆ ಹೆಚ್ಚಳ ಆಗಿದೆ ಎಂಬುದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು. ಈ ಸಂದರ್ಭಕ್ಕೆ ಸಂಪನೂಲ ಕ್ರೂಢೀಕರಣ ಅಗತ್ಯವಿದೆ. ನಾವು ಈಗಲೂ ನೆರೆರಾಜ್ಯಗಳಿಗೆ ಸರಿಸಮನಾದ ದರ ಪರಿಷ್ಕರಣೆ ಮಾಡಲಾಗಿಲ್ಲ. ಬಿಜೆಪಿಯವರು ಹಳೆಯದನ್ನು ನೆನಪಿಸಿಕೊಳ್ಳಬೇಕು ಎಂದರು.
ತೈಲಬೆಲೆ ಏರಿಕೆಯಿಂದಾಗಿ ಸಹಜವಾಗಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ. ಇದನ್ನು ಸ್ಪಿನ್ ಆಫ್ ಎಫೆಕ್ಟ್ ಎಂದು ಕರೆಯಲಾಗುತ್ತದೆ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾದಾಗ ಸಾರಿಗೆ, ಆಟೋ, ಬಸ್ ಪ್ರಯಾಣ ದರ ಎಲ್ಲವೂ ಹೆಚ್ಚಾಗುತ್ತದೆ. ಹೆಚ್ಚಾಗಲೇಬೇಕು. ಈ ಹಿಂದೆಯೂ ಇದೇ ಆಗಿತ್ತು ಎಂದಿದ್ದಾರೆ.
ನಟ ದರ್ಶನ್ ಪ್ರಕರಣದಲ್ಲಿ ಯಾವುದೇ ಮೃದುಧೋರಣೆ ತೋರದೆ ಮುಲಾಜಿಲ್ಲದೆ ತನಿಖೆ ನಡೆಸಲಾಗುತ್ತಿದೆ. ಮೃತಪಟ್ಟ ವ್ಯಕ್ತಿಗೆ ಕರೆಂಟ್ ಶಾಕ್ ನೀಡಲಾಗಿದೆ ಎಂಬುದು ಸೇರಿದಂತೆ ನಾನಾ ರೀತಿಯ ವದಂತಿಗಳಿವೆ. ತನಿಖೆ ಪೂರ್ಣಗೊಳ್ಳುವವರೆಗೂ ಸಾರ್ವಜನಿಕವಾಗಿ ಯಾವುದೇ ವಿಚಾರಗಳು ಬಹಿರಂಗಗೊಳ್ಳುವುದಿಲ್ಲ. ತನಿಖೆ ಪೂರ್ಣಗೊಂಡ ಬಳಿಕ ವರದಿ ಬರುತ್ತದೆ. ನ್ಯಾಯಾಲಯ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.
ಜಿಲ್ಲಾಪಂಚಾಯತ್, ತಾಲ್ಲೂಕು ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಯಾರಿ ನಡೆಸಿಕೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸಹಜವಾಗಿಯೇ ಮೀಸಲಾತಿ ನಿಗದಿ ಸೇರಿದಂತೆ ವಿವಿಧ ಸಿದ್ಧತೆಗಳನ್ನು ನಡೆಸಲಾಗುತ್ತದೆ. ಮೀಸಲಾತಿಯಿಂದ ಅನ್ಯಾಯವಾಗಿದೆ ಎಂದು ಯಾರೂ ಕೋರ್ಟ್‌ಗೆ ಹೋಗದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದರು.
ಮಧುಗಿರಿಯ ಚಿನ್ನೇನಹಳ್ಳಿ ಕಲುಷಿತ ನೀರಿನ ಪ್ರಕರಣದಲ್ಲಿ ಮೇಲ್ನೋಟಕ್ಕೆ ತಪ್ಪಿತಸ್ಥರು ಎಂದು ಕಂಡುಬಂದವರ ವಿರುದ್ಧ ಕ್ರಮ ಜರುಗಿಸಲಾಗಿದೆ, ತನಿಖೆ ಮುಂದುವರೆದಿದೆ. ಹಿರಿಯ ಅಧಿಕಾರಿಗಳ ಲೋಪ ಕಂಡುಬಂದರೆ ಜಿಲ್ಲಾಧಿಕಾರಿ, ಸಿಇಒ ಸೇರಿದಂತೆ ಮತ್ತಿತರರನ್ನು ಹೊಣೆ ಮಾಡಲಾಗುವುದು ಎಂದು ಹೇಳಿದರು.