ಬೆಂಗಳೂರು, ಮಾ.24 – ಹನಿಟ್ರ್ಯಾಪ್‌ನ ಸಂಕಷ್ಟದ ನಡುವೆಯೇ ಕಾಂಗ್ರೆಸ್ ಸರ್ಕಾರದಲ್ಲಿ ಫೋನ್ ಕದ್ದಾಲಿಕೆ ಎಂಬ ಮತ್ತೊಂದು ಬಿರುಗಾಳಿ ಸುನಾಮಿ ಸೃಷ್ಟಿಸುತ್ತಿದೆ. ಹನಿಟ್ರ್ಯಾಪ್ ವಿಚಾರದಲ್ಲಿ ಬೊಟ್ಟು ಮಾಡಲಾದ ನಾಯಕರ ಕಡೆಯೇ ಫೋನ್ ಕದ್ದಾಲಿಕೆಯ ಬೆರಳುಗಳೂ ಚಾಚಿರುವುದು ಕಾಂಗ್ರೆಸ್‌ನಲ್ಲಿ ಒಳಗೊಳಗೇ ಷಡ್ಯಂತ್ರ, ಕುತಂತ್ರ ಹಾಗೂ ಹಾವು-ಏಣಿ ಆಟದ ವಿಜೃಂಭಣೆ ಜೋರಾಗಿದೆ.
ಇತ್ತೀಚೆಗೆ ಕಾಂಗ್ರೆಸ್‌ನಲ್ಲಿ ಅಧಿಪತ್ಯ ಸಾಧಿಸಲು ಹಲವು ನಾಯಕರು ಅಧಿಕಾರ ಬಳಕೆ ಮಾಡಿಕೊಂಡು ಮನಸೋ ಇಚ್ಛೆ ವರ್ತಿಸುತ್ತಿದ್ದಾರೆ ಎಂಬ ಆರೋಪಗಳಿವೆ. ಸ್ವಪಕ್ಷೀಯರ ವಿರುದ್ಧವೇ ಹನಿಟ್ರ್ಯಾಪ್ ಸಂಚು ನಡೆಸಿರುವುದು, ಫೋನ್ ಕದ್ದಾಲಿಕೆ ಮಾಡುವುದು, ಅನುದಾನ ಹಂಚಿಕೆಯಲ್ಲಿ ತಾರತಮ್ಯ, ಸರ್ಕಾರಿ ಯೋಜನೆಗಳಲ್ಲಿ ಪಕ್ಷಪಾತ ಹೀಗೆ ಹಲವಾರು ವ್ಯತ್ಯಾಸಗಳ ಮೂಲಕ ರಾಜ್ಯ ನಾಯಕರು ಮತ್ತು ದೆಹಲಿಯ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂಬ ಆರೋಪಗಳಿವೆ.
ನಿನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆರೋಗ್ಯ ವಿಚಾರಿಸಲು ತೆರಳಿದ್ದರು. ಈ ಸಂದರ್ಭದಲ್ಲಿ ಫೋನ್ ಕದ್ದಾಲಿಕೆಯ ಬಗ್ಗೆ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ.
ಕೆಲವು ನಾಯಕರು ಸ್ವಪಕ್ಷೀಯರ ವಿರುದ್ಧ ಮತ್ತು ಕೇಂದ್ರದ ನಾಯಕರ ವಿರುದ್ಧ ಅಧಿಕಾರ ದುರುಪಯೋಗಪಡಿಸಿಕೊಂಡು ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಇದು ಧರ್ಮ ಸಂಕಟ ನಿರ್ಧಾರ ಎಂದು ತಾನು ಅಸಹಾಯಕರಾಗಿದ್ದೇನೆ ಎಂದು ಹೈಕಮಾಂಡ್ ಎದುರು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಇದು ಅತ್ಯಂತ ಗಂಭೀರ ವಿಚಾರ ಆಗಿರುವುದರಿಂದ ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವಂತೆ ದೆಹಲಿ ವರಿಷ್ಠರು ಸಲಹೆ ನೀಡಿರುವುದಾಗಿ ತಿಳಿದುಬಂದಿದೆ.
ನಿಯಮ ಬಾಹಿರವಾಗಿ ಯಾರು, ಯಾವುದೇ ತಪ್ಪುಗಳನ್ನು ಮಾಡಬಾರದು. ಅದನ್ನು ಸಹಿಸಲಾಗುವುದಿಲ್ಲ. ಅಂತಹ ಯಾವುದೇ ಸಂದರ್ಭಗಳು ಕಂಡುಬಂದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೈಕಮಾಂಡ್ ಎಚ್ಚರಿಕೆ ನೀಡಿದೆ ಎನ್ನಲಾಗಿದೆ.
ಹನಿಟ್ರ್ಯಾಪ್ ಬಗ್ಗೆ ಕಾಂಗ್ರೆಸ್‌ನಲ್ಲಿ ನಾನಾ ರೀತಿಯ ಚರ್ಚೆಗಳು ಶುರುವಾಗಿವೆ. ಒಳಗೊಳಗೇ ಒಂದು ಬಣ ಕುದಿಯಲಾರಂಭಿಸಿದೆ. ಈ ಸಂದರ್ಭದಲ್ಲಿ ಫೋನ್ ಕದ್ದಾಲಿಕೆಯ ವಿಚಾರವು ಪ್ರಸ್ತಾಪವಾಗಿರುವುದು ಪಕ್ಷಕ್ಕೆ ಮತ್ತಷ್ಟು ಮುಜುಗರ ಉಂಟುಮಾಡಿದೆ.