White Cobra : ಹಾಸನ,ಮಾ.19- ನಾಯಿ ನಿಯತ್ತಿನ ಪ್ರಾಣಿ ಎಂದು ಪದೇ ಪದೇ ಸಾಬಿತಾಗುತ್ತಿದೆ. ಶ್ವಾನಗಳೆರಡು ಬೃಹತ್ ಕಾಳಿಂಗ ಸರ್ಪದೊಂದಿಗೆ ಕಾದಾಡಿ ಮಕ್ಕಳು ಹಾಗೂ ಕೂಲಿ ಕಾರ್ಮಿಕರನ್ನು ಕಾಪಾಡಿದ್ದು, ನೆಚ್ಚಿನ ಶ್ವಾನವೊಂದು ಜೀವತೆತ್ತಿವೆ.
ತಾಲೂಕಿನ ಕಟ್ಟಾಯ ಗ್ರಾಮದ ಶ್ರಮಂತ್ ಎಂಬುವರು ತಮ್ಮ ತೋಟದಲ್ಲಿ ಪಿಟ್ ಬುಲ್ ಹಾಗೂ ಡಾಬರ್ ಮನ್‌ನಾಯಿಗಳನ್ನು ಸಾಕಿದ್ದರು. ಬಿಟ್‌ಬುಲ್ ಶ್ವಾನಕ್ಕೆ ಪ್ರಿತಿಯಿಂದ ಮಾಲೀಕ ಭೀಮ ಎಂದು ಹೆಸರಿಟ್ಟಿದ್ದರು.
ನಿನ್ನೆ ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಶಬ್ದ ಆಲಿಸಿದ ಸುಮಾರು 12 ಅಡಿ ಉದ್ದದ ಬಿಳಿಬಣ್ಣದ ಕಾಳಿಂಗ ಸರ್ಪ ಮನೆ ಬಳಿ ಆಟವಾಡುತ್ತಿದ್ದ ಮಕ್ಕಳ ಬಳಿಗೆ ಬಂದು, ಸರ್ಪ ತೆಂಗಿನ ಗರಿಯ ಕೆಳಗೆ ಅವಿತು ಕುಳಿತಿತ್ತು. ಇದನ್ನು ಗಮನಿಸಿದ ಶ್ವಾನಗಳು ಏಕಾಏಕಿ ಕಾಳಿಂಗ ಸರ್ಪದ ಮೇಲೆ ಏರಗಿವೆ. ಮಾಲೀಕ ಕರೆದರೂ ಬಾರದೆ ಸುಮಾರು 15 ನಿಮಿಷಗಳಿಗೂ ಹೆಚ್ಚು ಕಾಲಿ ವೈಟ್ ಕೊಬ್ರಾ ಜೊತೆ ಸೆಣಸಾಡಿವೆ.
ಈ ವೇಳೆ ಹಾವು ಪಿಟ್ ಬುಲ್ ನಾಯಿಯ ಮುಖಕ್ಕೆ ಕಚ್ಚಿದೆ. ಆದರೂ ಹಠಬಿಡದ ಶ್ವಾನ ನಿರಂತರವಾಗಿ ಹಾವಿನೊಂದಿಗೆ ಸೆಣಸಾಡಿ 12 ಉದ್ದದ ಸರ್ಪವನ್ನು 10 ತುಂಡುಗಳಾಗಿ ಮಾಡಿ ಸಾಯಿಸಿ ಬಿಟ್ಟಿವೆ. ಆದರೆ ವಿಷ ವೇರಿ ಬಿಟ್ ಬುಲ್ ಶ್ವಾನ ಪ್ರಾಣಬಿಟ್ಟಿದೆ. ಒಂದು ವೇಳೆ ಶ್ವಾನಗಳು ಬಾರದಿದ್ದರೆ ಕೂಲಿ ಕಾರ್ಮಿಕರು ಅಥವಾ ಮಕ್ಕಳ ಮೇಲೆ ವೈಟ್ ಕೊಬ್ರಾ ದಾಳಿ ಮಾಡುತಿತ್ತು . ಶ್ವಾನಗಳ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾದ ದುರಂತವೊಂದು ತಪ್ಪಿದಂತಾಗಿದೆ.
ಪಿಟ್ ಬುಲ್ ಹಲವಾರು ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಂಡು ಬಹುಮಾನಗಳನ್ನೂ ಕೂಡ ಪಡೆದಿತ್ತು. ಮನೆಯ ಮಗನಂತ್ತಿದ್ದ ಭೀಮಾ ನನ್ನು ಕಳೆದು ಕೊಂಡ ಶಮಂತ್ ಅವರ ಕುಟುಂಬ ಹಾಗೂ ಕೂಲಿ ಕಾರ್ಮಿಕರು ಕಣ್ಣಿರಿಟ್ಟಿದ್ದಾರೆ. ಮತ್ತೊಮ್ಮೆ ಹುಟ್ಟಿ ಬಾ ಭೀಮ ಎಂದು ಸಮಾಧಿ ಬಳಿ ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಜೊತೆಗಾರನನ್ನು ಕಳೆದುಕೊಂಡ ಡಾಬರ ಮನ್ ಕೂಡ ಮೂಕರೋಧನೆ ಪಡುತ್ತಿದ್ದ ದೃಶ್ಯ ಕಂಡು ಬಂತು.