ಬೆಂಗಳೂರು, ಸೆ.16- ರಾಷ್ಟ್ರ ರಾಜಧಾನಿ ದೆಹಲಿ ಮಾದರಿಯಲ್ಲೇ ರಾಜ್ಯದಲ್ಲೂ ಹೆಚ್ಚು ಹೊಗೆ ಹೊರಸೂಸುವ ಹಳೆ ವಾಹನಗಳನ್ನು ಗುಜರಿಗೆ ಹಾಕುವ ಪ್ಲಾನ್ ರೆಡಿಯಾಗುತ್ತಿದೆ. ಪರಿಸರಕ್ಕೆ ಮಾರಕವಾಗುವಂತಹ 15 ವರ್ಷಗಳು ಮೇಲ್ಪಟ್ಟ ವಾಹನಗಳನ್ನು ಗುಜರಿಗೆ ಹಾಕುವ ನಿರ್ಧಾರವನ್ನು ಈಗಾಗಲೇ ಕೇಂದ್ರ ಸರ್ಕಾರ ಕೈಗೊಂಡಿದೆ.
ದೇಶದಲ್ಲೇ ಅತಿ ಹೆಚ್ಚು ಪರಿಸರ ಮಾಲಿನ್ಯವಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಸ್ಕ್ರ್ಯಾಪ್ ಪಾಲಿಸಿಯನ್ನು ಜಾರಿಗೊಳಿಸಲಾಗಿದೆ. ಇದೀಗ ದೆಹಲಿ ಮಾದರಿಯಲ್ಲೇ ರಾಜ್ಯದಲ್ಲ್ಲೂ 15 ವರ್ಷ ಮೇಲ್ಪಟ್ಟ ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ನೀತಿಯನ್ನು ಜಾರಿಗೊಳಿಸಲಾಗುತ್ತಿದೆ.
ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯದಲ್ಲೂ ಸ್ಕ್ರ್ಯಾಪ್ ಪಾಲಿಸಿಯನ್ನು ಸಾರಿಗೆ ಇಲಾಖೆ ಜಾರಿಗೊಳಿಸಿದೆ. 15 ವರ್ಷ ಮೇಲ್ಪಟ್ಟ ವಾಹನಗಳನ್ನು ಗುಜರಿಗೆ ಹಾಕುವಂತೆ ಈಗಾಗಲೇ ನೋಟೀಸ್ ನೀಡಲಾಗಿದೆ.
ಟೂ ಸ್ಟ್ರೋಕ್ ಆಟೋಗಳ ಜತೆಗೆ 15 ವರ್ಷ ತುಂಬಿರೋ ಲಾರಿಗಳನ್ನೂ ಸ್ಕ್ರ್ಯಾಪ್ ಮಾಡುವಂತೆ ಸೂಚಿಸಲಾಗಿದೆ. ಸ್ಕ್ರ್ಯಾಪ್ ಪಾಲಿಸಿಗೆ ವಾಹನದ ಮಾದರಿ ಆಧರಿಸಿ ಸಾರಿಗೆ ಇಲಾಖೆ ಪರಿಹಾರ ನೀಡುತ್ತಿದೆ.
ಮೊದಲ ಹಂತದಲ್ಲಿ ಸರ್ಕಾರಿ ವಾಹನಗಳ ಸ್ಕ್ರ್ಯಾಪ್ ಮಾಡಲು ತೀರ್ಮಾನ ಮಾಡಿರುವ ಸರ್ಕಾರ ನಂತರ ಅಧೀನ ಸಂಸ್ಥೆಗಳಿಗೆ ಸೇರಿದ ವಾಹನಗಳನ್ನು ಗುಜರಿಗೆ ಹಾಕಲು ತೀರ್ಮಾನಿಸಿದೆ. ನಂತರ ಹಂತ ಹಂತವಾಗಿ 15 ವರ್ಷ ಮೀರಿದ ಖಾಸಗಿ ವಾಹನಗಳನ್ನು ಗುಜರಿಗೆ ಹಾಕುವ ಮಹತ್ವದ ತೀರ್ಮಾನ ಕೈಗೊಳ್ಳಲಿದೆ.
15 ವರ್ಷ ಮೇಲ್ಟಟ್ಟ ಭಾರಿ ವಾಹನಗಳು ಹೊರಸೂಸುವ ಮಾಲಿನ್ಯದಿಂದ ಭವಿಷ್ಯದಲ್ಲಿ ಜನ ಉಸಿರಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬ ಪರಿಸರ ತಜ್ಞರ ಎಚ್ಚರಿಕೆ ಮೇರೆಗೆ ಇಂತಹ ನಿರ್ಧಾರ ಕೈಗೊಳ್ಳಲಾಗುತ್ತಿದೆಯಂತೆ.