ಬೆಂಗಳೂರು,ಜು.28- ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಬುಡಕಟ್ಟು ಉಪಯೋಜನೆ(ಎಸ್‌ಸಿ,ಎಸ್‌ಪಿ/ಪಿಎಸ್‌ಪಿ)ಯಡಿ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಕೆಂಡಕಾರಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಿಎಂ ಸಿದ್ದರಾಮಯ್ಯನವರಿಗೆ ಕಿಂಚಿತ್ತಾರೂ ಆತಸಾಕ್ಷಿ ಇದ್ದರೆ ಇನ್ನಾದರೂ ಅಹಿಂದ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ಬಿಡಲಿ ಎಂದು ಸವಾಲು ಹಾಕಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಸರ್ಕಾರದ ವಿರುದ್ಧ ಸಾಲು ಸಾಲು ಪೋಸ್ಟ್ ಮಾಡಿರುವ ಅವರು, ಒಂದು ಕಡೆ ಬಿಡುಗಡೆ ಮಾಡಿರುವ ಅಲ್ಪಸ್ವಲ್ಪ ಅನುದಾನವನ್ನು ಭ್ರಷ್ಟಾಚಾರದ ಮೂಲಕ ಲೂಟಿ ಹೊಡೆಯುತ್ತೀರಿ, ಮತ್ತೊಂದು ಕಡೆ ಘೋಷಣೆ ಮಾಡಿದ ಅನುದಾನವನ್ನು ಹಂಚಿಕೆ ಮಾಡದೆ ಬಾಕಿ ಉಳಿಸಿಕೊಳ್ಳುತ್ತೀರಿ. ನಾಚಿಕೆಯಾಗಬೇಕು ನಿಮ ಕಾಂಗ್ರೆಸ್ ಸರ್ಕಾರಕ್ಕೆ. ತಮಗೆ ಕಿಂಚಿತ್ತಾದರೂ ಆತಸಾಕ್ಷಿ ಇದ್ದರೆ ಇನ್ನೆಂದೂ ಅಹಿಂದ ಹೆಸರಿನಲ್ಲಿ ರಾಜಕೀಯ ಮಾಡಬೇಡಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಸಕ್ತ ಸಾಲಿನ (2025-26) ಬಜೆಟ್‌ನಲ್ಲಿ ಎಸ್‌ಸಿ,ಎಸ್‌ಪಿ/ಪಿಎಸ್‌ಪಿ ಅಡಿ ಪರಿಶಿಷ್ಟ ಸಮುದಾಯಗಳಿಗೆ ಒದಗಿಸಿ ಒಟ್ಟು 42,017.51 ಕೋಟಿ ಅನುದಾನದಲ್ಲಿ 11,896.84 ಕೋಟಿ ರೂ.ಗಳನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಳ್ಳಲು ಮುಂದಾಗಿರುವ ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರ ಮತ್ತೊಮೆ ಪರಿಶಿಷ್ಟ ಸಮುದಾಯಗಳಿಗೆ ದ್ರೋಹ ಬಗೆಯಲು ಹೊರಟಿದೆ ಎಂದು ಕಿಡಿಕಾರಿದ್ದಾರೆ.
ಸ್ವಾಮಿ ಸಿದ್ದರಾಮಯ್ಯನವರೇ, ಅನುದಾನ ಹಂಚಿಕೆ ಮಾಡಲು ಹಣವಿಲ್ಲದ ಮೇಲೆ ಸುಮನೆ ಕಾಟಾಚಾರಕ್ಕೆ ಬಜೆಟ್‌ನಲ್ಲಿ ಘೋಷಣೆ ಮಾಡುವುದಾದರೂ ಯಾತಕ್ಕೆ? ಬಜೆಟ್‌ನಲ್ಲಿ ಅವಾಸ್ತವಿಕ ಘೋಷಣೆಗಳನ್ನು ಮಾಡಿ, ಪರಿಶಿಷ್ಟರ ಮೂಗಿಗೆ ತುಪ್ಪ ಸವರಿ, ಬಿಟ್ಟಿ ಪ್ರಚಾರ ಪಡೆದುಕೊಂಡರೆ ಪರಿಶಿಷ್ಟ ಸಮುದಾಯಗಳ ಕಲ್ಯಾಣ ಆಗುತ್ತಾ? ಇದೇನಾ ತಮಗೆ ಪರಿಶಿಷ್ಟ ಸಮುದಾಯಗಳ ಬಗ್ಗೆ ಇರುವ ಬದ್ಧತೆ? ಇದೇನಾ ತಾವು ಭಾಷಣ ಬಿಗಿಯುವ ಸಾಮಾಜಿಕ ನ್ಯಾಯ? ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ ಅಂತೂ ಇಂತೂ ದಲಿತ ವಿರೋಧಿ ಪಕ್ಷದಲ್ಲಿ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ. 5 ವರ್ಷ ಸಿಎಲ್‌ಪಿ ನಾಯಕರಾಗಿ ಸೇವೆ ಸಲ್ಲಿಸಿದರೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಮಾಡಲಿಲ್ಲ ಎಂದು ಆರೋಪಿಸಿದ್ದಾರೆ.
8 ವರ್ಷ ಸತತವಾಗಿ ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಹಾಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಮಾಡಲಿಲ್ಲ. 7 ಬಾರಿ ಸತತವಾಗಿ ಸಂಸದರಾದರೂ ಹಾಲಿ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಕಾಂಗ್ರೆಸ್ ಪಕ್ಷ ಕನಿಷ್ಠ ಪಕ್ಷ ಕೇಂದ್ರದಲ್ಲಿ ಕ್ಯಾಬಿನೆಟ್ ದರ್ಜೆ ಮಂತ್ರಿಯೂ ಮಾಡಲಿಲ್ಲ ಎಂದು ಅಶೋಕ್ ಸರ್ಕಾರದ ದಲಿತ ವಿರೋಧಿ ನೀತಿಯನ್ನು ವಿರೋಧಿಸಿದ್ದಾರೆ.
ಕಳೆದ ಎರಡು ವರ್ಷದಲ್ಲಿ ಕೊಟ್ಟಿದ್ದು ಏನೂ ಇಲ್ಲ, ಬರೀ ಸುಳ್ಳು ಹೇಳಿದ್ದೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ಅವರ ಸಾಧನೆ ಎಂದು ವ್ಯಂಗ್ಯವಾಡಿದ್ದಾರೆ. 10 ಕೆಜಿ ಅಕ್ಕಿ ಬೇಕೋ ಬೇಡವೋ ಎಂದು ಬಣ್ಣ ಬಣ್ಣದ ಕಾಗೆ ಹಾರಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಈಗ ಹತ್ತು ಕೆಜಿ ಅಕ್ಕಿಯನ್ನೂ ಕೊಡದೆ, ಹಣವನ್ನೂ ನೀಡದೆ ಕನ್ನಡಿಗರ ಕೈಗೆ ಚೊಂಬು ಕೊಟ್ಟಿದೆ ಎಂದು ವ್ಯಂಗ್ಯವಾಡಿದ್ದಾರೆ. ಆಹಾರ ಸಚಿವ ಕೆಎಚ್.ಮುನಿಯಪ್ಪ ಅವರೇ, ಅಕ್ಕಿ ಸಾಗಿಸುವ ಲಾರಿ ಮಾಲೀಕರ ಬಿಲ್ ಪಾವತಿ ಮಾಡಲು ದುಡ್ಡಿಲ್ಲ ಎಂದು ಅಶೋಕ್ ಪ್ರಶ್ನಿಸಿದ್ದಾರೆ.
- ಭಾರತದಲ್ಲಿ ಹೆಪಟೈಟಿಸ್ ವಿರುದ್ಧ ಹೋರಾಟ
- ಮಹಿಳಾ ವಿಶ್ವಕಪ್ ಫೈನಲ್ : ಕೊನೆರು ಹಂಪಿ ವಿರುದ್ದ ದಿವ್ಯಗೆ ಜಯ
- BIG NEWS : ಆಪರೇಷನ್ ಮಹದೇವ್ ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಫಿನಿಷ್
- ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ ಬೆನ್ನಲ್ಲೇ ಪೊಲೀಸರ ಕಾರ್ಯಾಚರಣೆ ಚುರುಕು
- ಬೆಂಗಳೂರು : ಹಲಸೂರಿನ ಬಜಾಜ್ ಸ್ಟ್ರೀಟ್ನಲ್ಲಿ ಅಗ್ನಿ ಅವಘಡ, 10 ಬೈಕ್ ಭಸ್ಮ