ನವದೆಹಲಿ, ಅ.5- ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ದೇಶದ ರೈತರಿಗೆ ನರೇಂದ್ರ ಮೋದಿ ದಸರಾ ಹಬ್ಬದ ಉಡುಗೊರೆ ಎಂಬಂತೆ 18ನೇ ಕಂತಿನ 2000 ರೂಪಾಯಿ ಹಣವನ್ನು ಇಂದು ಬಿಡುಗಡೆ ಮಾಡಿದ್ದಾರೆ.
ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ತಲಾ 2 ಸಾವಿರ ರೂ. ನೇರವಾಗಿ ಜಮೆಯಾಗಿದೆ. ಈ ಕಂತಿನಲ್ಲಿ ಟ್ಟು 20,000 ಕೋಟಿ ರೂ.ಗಳನ್ನು ಸರ್ಕಾರ ರೈತರಿಗೆ ಪಾವತಿಸಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ಪ್ರತಿ ವರ್ಷ 6 ಸಾವಿರ ನೀಡುವುದಾಗಿ ಸರ್ಕಾರ ಘೋಷಿಸಿತ್ತು, ಪ್ರತಿ 4 ತಿಂಗಳಿಗೊಮ್ಮೆ 2 ಸಾವಿರ ರೂಪಾಯಿ ಹಣ ನೀಡುವ ಯೋಜನೆ ಇದಾಗಿದ್ದು, ಈ ಹಿಂದೆ ಕೊನೆಯ ಕಂತು ಜೂನ್‌ನಲ್ಲಿ ಬಿಡುಗಡೆಯಾಗಿತ್ತು.
ರೈತರಿಗೆ 2000 ರೂಪಾಯಿ ಕಂತು ಬಿಡುಗಡೆ ಮಾಡಿದ್ದು, ದೇಶಾದ್ಯಂತ 2.5 ಕೋಟಿ ರೈತರು ವೆಬ್‌ಕಾಸ್ಟ್ ಮೂಲಕ ಯೋಜನೆಗೆ ಸೇರಿದ್ದಾರೆ. ಮೋದಿಯವರು 17ನೇ ಕಂತಿನ ಮೂಲಕ ರೈತರ ಖಾತೆಗಳಿಗೆ ಸುಮಾರು 30 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರು.
17ನೇ ಕಂತಿನಲ್ಲಿ ಸುಮಾರು 9.5 ಕೋಟಿ ರೈತರು ಇದರ ಲಾಭ ಪಡೆದಿದ್ದಾರೆ. ಈ ಹಿಂದೆ ಬಿಡುಗಡೆಯಾದ ಕಂತಿಗೆ ಹೋಲಿಸಿದರೆ ಸುಮಾರು 25 ಲಕ್ಷ ರೈತರು ಹೆಚ್ಚು ಲಾಭ ಪಡೆದಿದ್ದಾರೆ. ಆದರೆ, ಕೆವೈಸಿ ಪೂರ್ಣಗೊಳ್ಳದ ಕಾರಣ ಹೆಚ್ಚಿನ ಸಂಖ್ಯೆಯ ರೈತರು ನಿರಾಶೆಗೊಂಡಿದ್ದರು.
ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಪ್ರಯೋಜನಗಳನ್ನು ನೀಡಲು ಸರ್ಕಾರವು ಸರಿಯಾದ ಮಾನದಂಡಗಳನ್ನು ಮಾಡಿದೆ. ಕೇವಲ 2 ಹೆಕ್ಟೇರ್ ಜಮೀನು ಹೊಂದಿರುವ ರೈತರು ಮಾತ್ರ ಈ ಯೋಜನೆಯ ಲಾಭ ಪಡೆಯುತ್ತಾರೆ. ನೀವು ನಿಮ್ಮ ಅರ್ಹತೆಯನ್ನು ಪರೀಕ್ಷಿಸಲು ಬಯಸಿದರೆ, ಒ ಕಿಸಾನ್ ವೆಬ್‌ಸೈಟ್‌ಗೆ ಹೋಗಿ ಫಲಾನುಭವಿಗಳ ಪಟ್ಟಿಯ ಲಿಂಕ್ ಅನ್ನು ತೆರೆಯಿರಿ. ನಿಮ್ಮ ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಗ್ರಾಮದ ಬಗ್ಗೆ ಮಾಹಿತಿ ನೀಡುವ ಮೂಲಕ ನಿಮ್ಮ ಹೆಸರನ್ನು ಪರಿಶೀಲಿಸಬಹುದು.
ಅರ್ಹತೆ ಇದ್ದರೂ ಕಂತಿನ ಹಣ ಸಿಗದೇ ಇದ್ದಲ್ಲಿ ದೂರು ನೀಡಲು ಸರ್ಕಾರ ಹಲವು ಆಯ್ಕೆಗಳನ್ನು ನೀಡಿದೆ. ಮೊದಲನೆಯದಾಗಿ, ನಿಮ್ಮ ಸಮಸ್ಯೆಯನ್ನು pmkisan-ict@gov.inನಲ್ಲಿ ಬರೆಯುವ ಮೂಲಕ ನೀವು ದೂರು ನೀಡಬಹುದು. ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದರೆ ಸಹಾಯವಾಣಿ ಸಂಖ್ಯೆ 155261 ಅಥವಾ 1800115526 ಅನ್ನು ಸಹ ಸಂಪರ್ಕಿಸಬಹುದು.
ಇದಲ್ಲದೇ 011-23381092 ಈ ಸಂಖ್ಯೆಗೆ ಸಂಪರ್ಕಿಸುವ ಆಯ್ಕೆಯನ್ನೂ ಸರ್ಕಾರ ನೀಡಿದೆ. 2018 ರಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಆರಂಭಿಸಲಾಯಿತು. ಈ ಯೋಜನೆ ಅಡಿಯಲ್ಲಿ ಅರ್ಹ ರೈತರು 3 ಕಂತುಗಳಲ್ಲಿ ತಲಾ 2,000 ರೂ.ಗಳಂತೆ ವಾರ್ಷಿಕ ಒಟ್ಟು 6,000 ರೂ.ಗಳನ್ನು ಪಡೆಯುತ್ತಾರೆ. ಈ ಮೊತ್ತವರು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.