ಪ್ರಯಾಗ್ರಾಜ್ (ಉತ್ತರಪ್ರದೇಶ) ,ಜ.29 ಪ್ರಯಾಗ್ರಾಜ್ ನಲ್ಲಿ ಉಂಟಾದ ಕಾಲ್ತುಳಿತಕ್ಕೆ ತೀವ್ರ ದಿಗ್ರ್ಬಾಂತಿ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕರೆ ಮಾಡಿ ಪರಿಸ್ಥಿತಿ ಅವಲೋಕಿಸಿ,ಅಗತ್ಯವಿರುವ ಎಲ್ಲ ನೆರವು ನೀಡುವುದಾಗಿ ತಿಳಿಸಿದ್ದಾರೆ.
ಬೆಳಗ್ಗೆಯೇ ಯೋಗಿ ಆದಿತ್ಯನಾಥ್ ಅವರಿಗೆ ದೂರವಾಣಿ ಕರೆ ಮಾಡಿದ ಉಭಯ ನಾಯಕರು ಪರಿಸ್ಥಿತಿ ಅವಲೋಕಿಸಿ, ಅಗತ್ಯವಿರುವ ಎಲ್ಲ ನೆರವು ನೀಡುವುದಾಗಿ ತಿಳಿಸಿದ್ದಾರೆ.ಮಹಾಕುಂಭಮೇಳದಲ್ಲಿ ಇದುವರೆಗೆ ನಡೆದಿರುವ ಬೆಳವಣಿಗೆಗಳನ್ನು ಪರಿಶೀಲಿಸಿದ ಪ್ರಧಾನಿ, ತಕ್ಷಣದ ಕ್ರಮಗಳಿಗೆ ಸೂಚನೆ ನೀಡಿದರು.
ಮೌನಿ ಅಮಾವಾಸ್ಯೆಯಂದು ಮುಂಜಾನೆ ಡ್ರೋನ್ ದೃಶ್ಯಗಳಲ್ಲಿ ಸಂಗಮ ಘಾಟ್ನಲ್ಲಿ ಅಪಾರ ಸಂಖ್ಯೆಯ ಭಕ್ತರು ಜಮಾಯಿಸಿದ್ದು ಕಂಡುಬಂದಿತು. ಸಂಗಮದಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಎಂ ಯೋಗಿ ಆದಿತ್ಯನಾಥ್ ಅವರೊಂದಿಗೆ ಮಾತನಾಡಿದ್ದಾರೆ. ಕೇಂದ್ರ ಸರ್ಕಾರದಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ಗೃಹ ಸಚಿವರು ಭರವಸೆ ನೀಡಿದರು.
ಮೌನಿ ಅಮಾವಾಸ್ಯೆಯಂದು ನಡೆಯುವ ಶಾಹಿ ಸ್ನಾನವು ಮಹಾ ಕುಂಭಮೇಳದ ಅತ್ಯಂತ ಮಹತ್ವದ ಆಚರಣೆಯಾಗಿದೆ. ಪ್ರತಿ 144 ವರ್ಷಗಳಿಗೊಮೆ ಸಂಭವಿಸುವ ತ್ರಿವೇಣಿ ಯೋಗ ಎಂದು ಕರೆಯಲ್ಪಡುವ ಅಪರೂಪದ ವಿದ್ಯಾಮಾನ ಈ ಬಾರಿ ಸಂಭವಿಸುತ್ತಿದ್ದು, ಕೋಟ್ಯಂತರ ಸಂಖ್ಯೆಯಲ್ಲಿ ಭಕ್ತರು ಕುಂಭಮೇಳಕ್ಕೆ ಆಗಮಿಸಿದ್ದಾರೆ. ಬುಧವಾರ ಅಂದಾಜು 10 ಕೋಟಿ ಭಕ್ತರು ಆಗಮಿಸಿದ್ದರು.
ಮಹಾ ಕುಂಭಮೇಳ ಆರಂಭವಾದ 17 ದಿನಗಳಲ್ಲಿ ಈಗಾಗಲೇ 15 ಕೋಟಿಗೂ ಹೆಚ್ಚು ಭಕ್ತರು ಸಂಗಮ ಮತ್ತು ಘಾಟ್ಗಳಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ನಿನ್ನೆ ಒಂದೇ ದಿನ 4.8 ಕೋಟಿಗೂ ಹೆಚ್ಚು ಭಕ್ತರು ಸ್ನಾನ ಮಾಡಿದ್ದಾರೆ. ಇದು ಮಕರ ಸಂಕ್ರಾಂತಿಯಂದು 3.5 ಕೋಟಿ ಮಂದಿ ಅಮೃತ ಸ್ನಾನ ಮಾಡಿದ್ದರು. ಇದು ಅದಕ್ಕಿಂತಲೂ ಹೆಚ್ಚು ಎಂದು ವರದಿ ತಿಳಿಸಿದೆ.
ಮಕರ ಸಂಕ್ರಾಂತಿಯಿಂದ ಕುಂಭಮೇಳ ನಡೆಯುವ ಅಷ್ಟೂ ದಿನ ನೀರಿನಲ್ಲಿ ಮಿಂದೇಳುವುದನ್ನು ಪವಿತ್ರ ಎಂದು ಭಾವಿಸಲಾಗುತ್ತದೆ. ಆದರೆ ಅಮೃತ ಸ್ನಾನದ (ಶಾಹಿ ಸ್ನಾನ) ದಿನಗಳನ್ನು ವಿಶೇಷವಾದ ದಿನಗಳೆಂದು ಎಂದು ಪರಿಗಣಿಸಲಾಗುತ್ತದೆ.