ನವದೆಹಲಿ,ಜ.5- ರಾಷ್ಟ್ರ ರಾಜಧಾನಿ ದೆಹಲಿಗೆ ಸಂಪರ್ಕ ಕಲ್ಪಿಸುವ ವೆಚ್ಚದ ದೆಹಲಿ-ಘಾಜಿಯಾಬಾದ್ ಮೀರತ್ ನಮೋ ಭಾರತ್ ಕಾರಿಡಾರ್ 4,600 ಕೋಟಿ ರೂ. ಮೌಲ್ಯದ ಯೋಜನೆಗೆ ಪ್ರಧಾನಿ ನರೇಂದ್ರಮೋದಿ ಅವರು ಇಂದು ಚಾಲನೆ ನೀಡಿದರು.
ಇದೇ ವೇಳೆ ರಿಥಿಲ-ಕುಂಡ್ಲಿ ನಡುವಿನ ಮೆಟ್ರೋ ರೈಲು ಸಂಚಾರಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಮೂಲಕ ಭಾರತ ಚೀನಾ ಮತ್ತು ಅಮೆರಿಕಾ ನಂತರ 1000 ಕಿ.ಮೀ ಮೆಟ್ರೋ ರೈಲು ಮಾರ್ಗ ಹೊಂದಿದ ವಿಶ್ವದ ಮೂರನೇ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಖ್ಯಾತಿಯಾಗಿದೆ.
ಇದು ಒಟ್ಟು 4ನೇ ಹಂತದ 26.5 ಕಿ.ಮೀ ಮಾರ್ಗವಾಗಿದೆ. ಅಂದಾಜು 6230 ಕೋಟಿ ವೆಚ್ಚವಾಗಲಿದ್ದು, ದೆಹಲಿಯ ರಿಥಿಲವನ್ನು ಹರಿಯಾಣದ ನಾಥ್‌ಪುರಗೆ ಸಂಪರ್ಕ ಕಲ್ಪಿಸಲಿದೆ. ಸಾಹೀಬಾಬಾದ್ ಹಾಗೂ ನ್ಯೂ ಅಶೋಕನಗರ ನಡುವೆ ಸಂಪರ್ಕ ಕಲ್ಪಿಸುವ 13 ಕಿಮೀ ಸಂಚರಿಸುವ ನೂತನ ಮೆಟ್ರೋ ರೈಲು ಸಂಪರ್ಕಕ್ಕೂ ಪ್ರಧಾನಿಯವರು ಚಾಲನೆ ಕೊಟ್ಟರು.
ಮುಂದಿನ ತಿಂಗಳು ದೆಹಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಆಡಳಿತಾರೂಢ ಆಮ್ ಆದಿ, ಪ್ರತಿಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಶತಾಯಗತಾಯ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಪಣ ತೊಟ್ಟಿರುವ ಬಿಜೆಪಿ, ಮತದಾರರನ್ನು ಓಲೈಕೆ ಮಾಡಲು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದೆ.
ರಾಜಧಾನಿಯಲ್ಲಿ ಮೂಲಸೌಕರ್ಯ ಮತ್ತು ಸಂಪರ್ಕವನ್ನು ಸುಧಾರಿಸುವ ಹೆಗ್ಗುರಿಯೊಂದಿಗೆ ಇಂದು ಒಟ್ಟು 12,200 ಕೋಟಿ ರೂ. ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ಕೊಟ್ಟಿದ್ದಾರೆ. ಇದರಲ್ಲಿ ಕೆಲವು ಶಂಕಸ್ಥಾಪನೆ ಮತ್ತು ಉದ್ಘಾಟನೆಯೂ ಸೇರಿದೆ.
ಮೆಟ್ರೋ ರೈಲು ಹಸಿರು ನಿಶಾನೆ ತೋರುವ ಮೊದಲು ಮೋದಿಯವರು ನವಭಾರತ ನಿರ್ಮಾಣವನ್ನು ಪ್ರದರ್ಶಿಸುವ ಕೈಗಳಿಂದ ತಯಾರಿಸಿದ ಭಾವಚಿತ್ರಗಳನ್ನು ಶಾಲಾ ಮಕ್ಕಳಿಗೆ ನೀಡಿದರು. ನಂತರ ಸಾಹೀಬಾಬಾದ್ ಆರ್‌ಆರ್‌ಟಿಎಸ್ ನಿಲ್ದಾಣದಿಂದ ಅಶೋಕನಗರ ಆರ್‌ಆರ್‌ಟಿಎಸ್ ರೈಲ್ವೆ ನಿಲ್ದಾಣಕ್ಕೆ ಮೋದಿಯವರು ನಮೋ ಭಾರತ್ ರೈಲಿನಲ್ಲಿ ಸಂಚರಿಸುವ ಮೂಲಕ ಎಲ್ಲರ ಗಮನಸೆಳೆದರು.
ಈ ಮೊದಲು ಕೆಲವು ಯೋಜನೆಗಳಿಗೆ ಚಾಲನೆ ಕೊಟ್ಟಿದ್ದ ಮೋದಿಯವರು ರಾಷ್ಟ್ರ ರಾಜಧಾನಿಯಲ್ಲಿ ಮೂಲಭೂತ ಸೌಕರ್ಯಗಳು ಹಾಗೂ ವಸತಿ ನಿರ್ಮಾಣಕ್ಕೆ ಬಿಜೆಪಿ ಕಂಕಣಬದ್ದವಾಗಿದೆ. ಆದರೆ ಆಡಳಿತಾರೂಢ ಆಮ್ ಆದಿ ಕೇಂದ್ರದ ಕೆಲವು ಯೋಜನೆಗಳಿಗೆ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದ್ದರು.
ನಾನು ದೇಶದ ಜನರಿಗೆ ಮನೆಗಳನ್ನು ನಿರ್ಮಿಸಿಕೊಟ್ಟಿದ್ದೇನೆ. ನನ್ನ ಸ್ವಂತಕ್ಕಾಗಿ ಒಂದೇ ಒಂದು ಮನೆಯನ್ನೂ ನಿರ್ಮಾಣ ಮಾಡಿಲ್ಲ. ಆದರೆ ಕೆಲವರು ಶೀಶಮಹಲ್ ನಿರ್ಮಿಸಿಕೊಂಡಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೆಸರು ಉಲ್ಲೇಖ ಮಾಡದೆ ವಾಗ್ದಾಳಿ ಮಾಡಿದ್ದರು.
ದೆಹಲಿಯ ಜನತೆ ಸರ್ವತೋಮುಖ ಅಭಿವೃದ್ಧಿ ಹಾಗೂ ಕಲ್ಯಾಣಕ್ಕಾಗಿ ಬದಲಾವಣೆ ಬಯಸುತ್ತಿದ್ದಾರೆ. ಅಭಿವೃದ್ಧಿಯ ವಿರೋಧಿಯಾಗಿರುವ ಆಪ್ಡಾ(ವಿನಾಶ) ಪಕ್ಷವನ್ನು ಅಧಿಕಾರದಿಂದ ಕಿತ್ತೆಸೆಯುವಂತೆ ಆಪ್ ವಿರುದ್ಧ ಮೋದಿ ಕಿಡಿಕಾರಿದರು.