ನವದೆಹಲಿ,ಫೆ.10- ಜೀವನದಲ್ಲಿ ಅಂಕ ಗಳಿಸುವುದೇ ಮಹಾನ್ ಸಾಧನೆಯಾಗುವುದಿಲ್ಲ. ಅದಕ್ಕಿಂತಲೂ ಜ್ಞಾನ ಸಂಪಾದನೆ ಮಾಡುವುದು ಮುಖ್ಯ. ಸಮಯ ನಿರ್ವಹಣೆ, ಕಾರ್ಯತಂತ್ರ, ಸ್ಪರ್ಧಾತಕ ಯುಗಕ್ಕೆ ತಕ್ಕಂತೆ ಸಿದ್ದರಾಗಬೇಕೆಂದು ಪ್ರಧಾನಿ ನರೇಂದ್ರಮೋದಿ ಅವರು ವಿದ್ಯಾರ್ಥಿಗಳಿಗೆ ಕರೆ ಕೊಟ್ಟಿದ್ದಾರೆ. ಪ್ರತಿ ವರ್ಷದಂತೆ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ಜೊತೆ ನಡೆಸುವ ಪರೀಕ್ಷಾ ಪೇ ಚರ್ಚಾದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಹಲವಾರು ವಿಷಯಗಳನ್ನು ಒತ್ತಿ ಹೇಳಿದರು.
ನೀವು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವುದು, ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾಗುವುದೇ ನಿಮ ಗುರಿಯಾಗಿರಬಾರದು. ಯಶಸ್ಸು ಸಾಧಿಸುವವರು ನಿಮಗೆ ಆದರ್ಶರಾಗಬೇಕು. ಒಲಿಂಪಿಕ್ ವಿಜೇತೆ ಮೇರಿ ಕೋಮ್, ಪ್ಯಾರ ಒಲಿಂಪಿಕ್ ಚಿನ್ನದ ವಿಜೇತೆ ಅವಾನಿ ಲೇಕಾರ, ಆಧ್ಯಾತಿಕ ನಾಯಕ ಸದ್ಗುರು, ಚಿತ್ರನಟಿ ದೀಪಿಕಾ ಪಡುಕೋಣೆ, ವಿಕ್ರಮ್ ಮಸ್ಸಿ ಮತ್ತಿತರರು ನಿಮಗೆ ಆದರ್ಶಪ್ರಾಯರಾಗಬೇಕೆಂದು ಕಿವಿಮಾತು ಹೇಳಿದರು.
ಪ್ರತಿಯೊಬ್ಬ ವಿದ್ಯಾರ್ಥಿಗಳು ಸಮಯ ಪಾಲನೆ ಮಾಡುವುದು ಅತ್ಯಗತ್ಯ. ಶಿಕ್ಷಕರು ನೀಡುವ ಪಠ ಚಟುವಟಿಕೆಗಳನ್ನು ಅಂದೆಯೇ ಕಲಿಯಬೇಕು. ತಂದೆತಾಯಿಗಳು ಒತ್ತಾಯ ಮಾಡುವ ಯಾವುದೇ ವಿಷಯಗಳ ಬಗ್ಗೆ ಗಮನ ನೀಡಬೇಡಿ. ನಿಮಗೆ ನೀವು ಮನಸಾರೆ ಇಷ್ಟಪಡುವ ವಿಷಯಗಳ ಮೇಲೆ ಹೆಚ್ಚು ಗಮನಹರಿಸಬೇಕು. ಯಾವ ವಿಷಯಗಳನ್ನು ಎಷ್ಟು ಸಮಯದಲ್ಲಿ ಓದಬೇಕು ಎಂಬುದನ್ನು ಮೊದಲೇ ಖಾತ್ರಿಪಡಿಸಿಕೊಂಡು ಸಮಯ ನಿಗದಿಪಡಿಸಿಕೊಳ್ಳಿ ಎಂದು ಸಲಹೆ ಮಾಡಿದರು.
ಶಿಕ್ಷಕರು ಕೂಡ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಇಂತಿಷ್ಟೇ ಅಂಕಗಳನ್ನು ತೆಗೆಯಬೇಕೆಂದು ಒತ್ತಡ ಹಾಕಬಾರದು. ನೀವು ಪ್ರತಿಯೊಂದು ವಿಷಯಕ್ಕೂ ಶಿಕ್ಷಣ ತಜ್ಞರ ಸಲಹೆ ಕೇಳುವುದನ್ನು ಮೊದಲು ನಿಲ್ಲಿಸಿ ಅದನ್ನು ಮೀರಿ ಹೋದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಉತ್ತಮವಾದ ಪರಿಸರವನ್ನು ಸೃಷ್ಟಿಸಬೇಕು. ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಒತ್ತು ನೀಡಬೇಕು. ಹಿರಿಯ ಆದರ್ಶಗಳನ್ನು ಪ್ರತಿದಿನ ತಿಳಿ ಹೇಳಬೇಕು. ಮೌಲ್ಯಯುತ ಜೀವನ ಏನೆಂಬುದನ್ನು ತಿಳಿ ಹೇಳಬೇಕು ಎಂದು ತಿಳಿಸಿದರು.ವಿದ್ಯಾರ್ಥಿಗಳು ಶೈಕ್ಷಣಿಕ ಪರೀಕ್ಷೆಗಳನ್ನೇ ನಿಜವಾದ ಕಲಿಕೆ ಎಂದು ತಪ್ಪಾಗಿ ಗ್ರಹಿಸಿದ್ದಾರೆ. ಪರೀಕ್ಷೆಯಲ್ಲಿ ಅಂಕ ಗಳಿಸುವುದಕ್ಕಷ್ಟೇ ತಯಾರಿ ಮಾಡಿಕೊಂಡರೆ ಸಾಲದು. ಜ್ಞಾನ ಗಳಿಸುವತ್ತಲೂ ಗಮನಹರಿಸಬೇಕು. ಇದಕ್ಕೆ ಕೇವಲ ಶಿಕ್ಷಕರು ಮಾತ್ರವಷ್ಟೇ ಅಲ್ಲ ಪೋಷಕರು ಕೂಡ ಕೈಜೋಡಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳ ಒತ್ತಡ ನಿಭಾಯಿಸುವುದನ್ನು ಕಲಿಯಬೇಕು. ಕ್ರಿಕೆಟ್ ಆಡುವಾಗ ಬ್ಯಾಟ್ಸಮನ್ಗಳಿಗೆ ಅನೇಕ ಒತ್ತಡ ಇರುತ್ತದೆ. ಒಂದು ಕಡೆ ಹೆಚ್ಚು ರನ್ ಗಳಿಸಬೇಕು ಮತ್ತೊಂದು ಕಡೆ ಎದುರಾಳಿ ಬೌಲರ್ಗಳನ್ನು ಎದುರಿಸಬೇಕು. ಇದರ ನಡುವೆ ಕ್ರೀಡಾಂಗಣದಲ್ಲಿ ಕುಳಿತಿರುವ ಪ್ರೇಕ್ಷಕರ ಗದ್ದಲವೂ ಏಕಾಗ್ರತೆಗೆ ಭಂಗವಾಗುತ್ತದೆ. ಇಷ್ಟೆಲ್ಲದರ ನಡುವೆಯೂ ಬ್ಯಾಟ್ಸಮನ್ ಬೌಲರ್ ಹಾಕುವ ಬಾಲ್ನ್ನು ಕೇಂದ್ರೀಕರಿಸಿ ರನ್ ಗಳಿಸುತ್ತಾನೆ. ಇದು ನಿಜವಾದ ಏಕಾಗ್ರತೆ ಎಂದರು.
ವಿದ್ಯಾರ್ಥಿಗಳು ಕೇವಲ ಓದುವುದು, ಬರೆಯುವುದಕ್ಕೆ ಮಾತ್ರ ಸೀಮಿತವಾಗಬೇಡಿ. ಉತ್ತಮ ಆರೋಗ್ಯ, ಹಿತಮಿತ ಆಹಾರ, ನಿದ್ರೆಯನ್ನು ಮಾಡುವುದನ್ನು ಮರೆಯಬೇಡಿ. ನಿದ್ರೆ ಮತ್ತು ಸಮತೋಲನ ಆಹಾರ ಸೇವನೆ ನಮ ಉತ್ತಮ ಆರೋಗ್ಯಕ್ಕೆ ಪ್ರಮುಖ ಅಂಶಗಳು. ಪರೀಕ್ಷೆಯನ್ನು ಯಾವುದೇ ಅಂಜುಅಳಕು ಇಲ್ಲದೆ ಸಕಾರಾತಕವಾಗಿ ಎದುರಿಸಿ. ಖಂಡಿತವಾಗಿಯೂ ನಿಮಗೆ ಒಳ್ಳೆಯದಾಗುತ್ತದೆ ಎಂದು ಮೋದಿ ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.
ಪೋಷಕರು ಬೇರೆಯ ಮಕ್ಕಳನ್ನು ನೋಡಿ ತಮ ಮಕ್ಕಳು ಹೀಗೆಯೇ ಇರಬೇಕು, ಬೇರೆಯವರ ಮನೆಯ ಮಕ್ಕಳಂತೆಯೇ ಓದಬೇಕೆಂದು ಬಯಸಬೇಡಿ. ನಿಮ ಮಕ್ಕಳಿಗೆ ಯಾವ ವಿಷಯದ ಬಗ್ಗೆ ಹೆಚ್ಚು ಆಸಕ್ತಿ ಇರುತ್ತದೋ ಅದೇ ವಿಚಾರಗಳನ್ನು ಓದಲು ಅನುವು ಮಾಡಿಕೊಡಿ ಎಂದು ಮನವಿ ಮಾಡಿದರು.
ನಾವು ರೋಬೋಟ್ಗಳಲ್ಲ, ಮನುಷ್ಯರು. ಮಕ್ಕಳನ್ನು ನಾಲ್ಕು ಗೋಡೆಗಳೊಳಗೆ ಬಂಧಿಸಿ ಪುಸ್ತಕಗಳ ಸೆರೆಮನೆಯನ್ನಾಗಿ ಮಾಡಿದರೆ, ಅವರು ಎಂದಿಗೂ ಬೆಳೆಯಲು ಸಾಧ್ಯವಾಗುವುದಿಲ್ಲ, ತೆರೆದ ಆಗಸವನ್ನು ಅವರಿಗಾಗಿ ನೀಡಬೇಕು ಸ್ವಾತಂತ್ರವೂ ಕೂಡ ಅಷ್ಟೇ ಮುಖ್ಯ ಎಂದರು.
ನೀವು ಪ್ರಧಾನಿಯಾಗಿರದಿದ್ದರೆ ಮತ್ತು ಸಚಿವರಾಗಿದ್ದರೆ ನೀವು ಯಾವ ಇಲಾಖೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ, ಕೌಶಲ್ಯ ಬಹಳ ಮುಖ್ಯವಾದ ಕಾರಣ ನಾನು ಕೌಶಲ್ಯ ವಿಭಾಗವನ್ನು ಆಯ್ಕೆ ಮಾಡುತ್ತೇನೆ ಎಂದು ಹೇಳೀದರು. ಈ ಬಾರಿ ಪ್ರಧಾನಿ ನರೇಂದ್ರಮೋದಿ ಅವರ ಪರೀಕ್ಷಾ ಪೇ ಚರ್ಚೆಯಲ್ಲಿ 3.3 ಕೋಟಿ ವಿದ್ಯಾರ್ಥಿಗಳು, 20,71,000 ಶಿಕ್ಷಕರು ಹಾಗೂ 5.51 ಲಕ್ಷ ಪೋಷಕರು ಭಾಗಿಯಾಗಿದ್ದರು.