ನವದೆಹಲಿ,ಜ.26- ದೇಶಾದ್ಯಂತ 76ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಪ್ರಧಾನಮಂತ್ರಿ ನರೇಂದ್ರಮೋದಿಯವರ ಪೇಟ ಎಲ್ಲರ ಗಮನಸೆಳೆಯಿತು.
ಪ್ರತಿ ಬಾರಿಯೂ ಪ್ರಧಾನಿ ಮೋದಿ ಅವರ ಪೇಟ ಆಕರ್ಷಕವಾಗಿರುತ್ತದೆ. ಈ ಬಾರಿ ಅವರು ಯಾವ ಬಣ್ಣದ ಪೇಟ ತೊಡುತ್ತಾರೆ ಎಂಬ ಕುತೂಹಲ ಜನರಲ್ಲಿ ಇತ್ತು. ಅಂತೆಯೇ ಇಂದು ಗಣರಾಜ್ಯೋತ್ಸವ ಪರೇಡ್‌ಗೂ ಮುನ್ನ ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಯುದ್ಧ ಸಾರಕಕ್ಕೆ ಆಗಮಿಸುತ್ತಿದ್ದಂತೆಯೇ ಅವರು ಧರಿಸಿರುವ ಉಡುಪಿನ ಫಸ್ಟ್ ಲುಕ್ ಬಹಿರಂಗವಾಯಿತು.
ಪ್ರಧಾನಿಯವರು ಈ ಬಾರಿ ಭಾರತದ ವೈವಿಧ್ಯತೆಯನ್ನು ಸಂಕೇತಿಸಲು ಹಳದಿ ಮತ್ತು ಕೆಂಪು ಬಣ್ಣದ ರಾಜಸ್ಥಾನಿ ಬಂಧನಿ ಪೇಟ, ಬಿಳಿ ಕುರ್ತಾದ ಜೊತೆಗೆ ಕಪ್ಪು ಕಂದು ಬಣ್ಣದ ಜಾಕೆಟ್ ಮತ್ತು ಕಪ್ಪು ಬೂಟುಗಳನ್ನು ಧರಿಸಿದ್ದರು.
ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವದ ಎರಡು ಸಂದರ್ಭಗಳಲ್ಲಿ ಪ್ರಧಾನಿಯವರ ಉಡುಗೆಯ ಆಯ್ಕೆಯು ಹೆಚ್ಚಿನ ಗಮನವನ್ನು ಸೆಳೆಯುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಪ್ರಧಾನಿಯವರು ಸಾಂಪ್ರದಾಯಿಕ ಉಡುಪುಗಳನ್ನು ಧರಿಸುತ್ತಾರೆ. ವಾಸ್ತವವಾಗಿ ಪ್ರಧಾನಿಯವರು ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಿದಾಗ ಅಲ್ಲಿನ ಸಂಸ್ಕೃತಿಯ ಬಗ್ಗೆ ಗೌರವವನ್ನು ತೋರಿಸುವ ಪ್ರಯತ್ನ ಮಾಡುತ್ತಾರೆ.