ಬೆಂಗಳೂರು,ಮೇ 15- ಚುನಾವಣಾ ಪ್ರಚಾರದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅವರ ತಾಯಿ ಇರುವ ಭಾವಚಿತ್ರ ನೀಡಿದ್ದ ಬಾಗಲಕೋಟೆ ಯುವತಿ ನಾಗರತ್ನಾ ಬಸವರಾಜ ಮೇಟಿಯವರಿಗೆ ಮೋದಿ ಅವರು ಧನ್ಯವಾದ ತಿಳಿಸಿ, ಪತ್ರ ಬರೆದಿದ್ದಾರೆ.
ಪ್ರಧಾನಿ ಮೋದಿ ಅವರು ಬಾಗಲಕೋಟೆಯಲ್ಲಿ ಭಾಷಣ ಮಾಡುವ ವೇಳೆ ನಾಗರತ್ನಾ ಅವರು ಫೋಟೋ ಹಿಡಿದು ನಿಂತಿದ್ದರು. ಇದನ್ನು ಗಮನಿಸಿದ ಮೋದಿಯವರು ತಮ ಅಂಗರಕ್ಷಕ ಅಧಿಕಾರಿಗಳಿಂದ ಫೋಟೋ ತರಿಸಿಕೊಂಡು, ಪತ್ರ ಬರೆಯುವುದಾಗಿ ತಿಳಿಸಿದ್ದರು. ಇದೀಗ ಕೊಟ್ಟ ಮಾತಿನಂತೆ ಪ್ರಧಾನಿ ಮೋದಿ ಯುವತಿಗೆ ಪತ್ರ ಬರೆದಿದ್ದಾರೆ.
ಏಪ್ರಿಲ್ 29ರಂದು ಬಾಗಲಕೋಟೆಗೆ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಮೋದಿ ಅವರಿಗೆ ನಾಗರತ್ನಾ ಅವರು ಚಿತ್ರವನ್ನು ದೂರದಿಂದ ತೋರಿಸಿದ್ದರು. ಆಗ ಮೋದಿ ಅವರು ವಿಶೇಷ ಭದ್ರತಾ ಸಿಬ್ಬಂದಿಗೆ ಚಿತ್ರವನ್ನು ಸಂಗ್ರಹಿಸಿಕೊಳ್ಳುವಂತೆ ತಿಳಿಸಿದ್ದಲ್ಲದೇ, ನಿನ್ನ ಹೆಸರು, ವಿಳಾಸ ಬರೆದು ಕಳುಹಿಸು ಮಗಳೇ, ನಾನು ನಿನಗೆ ಖಂಡಿತವಾಗಿಯೂ ಪತ್ರ ಕಳುಹಿಸುತ್ತೇನೆಂದು ಹೇಳಿದ್ದರು.
ಈ ಕಲಾತಕ ಚಿತ್ರವು ಮಾನವನ ಭಾವನೆಗಳ ಪ್ರಾಮುಖ್ಯ ತೋರಿಸುತ್ತದೆ. ಹೊಸ ಭಾರತ ಮತ್ತು ಯುವಶಕ್ತಿಯ ಭವಿಷ್ಯ ನಿರ್ಮಾಣಕ್ಕೆ ನನ್ನನ್ನು ಪ್ರೇರೇಪಿಸುತ್ತದೆ. ಕೌಶಲ ಹಾಗೂ ರಚನಾತಕ ಚಟುವಟಿಕೆಯನ್ನು ನಿಮ ಕೆಲಸದಲ್ಲಿ ಅಳವಡಿಸಿಕೊಳ್ಳಿ. ಶುಭವಾಗಲಿ ಎಂದು ಮೋದಿ ಹಾರೈಸಿದ್ದಾರೆ.
ಮೋದಿಯವರ ಪತ್ರಕ್ಕೆ ನಾಗರತ್ನಾ ಅವರು ಬಹಳ ಸಂತಸ ವ್ಯಕ್ತಪಡಿಸಿದ್ದು, ಇದು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ ಎಂದು ಹೇಳಿದ್ದಾರೆ.