ನವದೆಹಲಿ,ಜೂ.14- ಪ್ರಧಾನಿ ನರೇಂದ್ರ ಮೋದಿ ಮುಂದಿನ ವಾರದ ಕೊನೆಯಲ್ಲಿ ಜಿ 7 ಶೃಂಗಸಭೆಯಲ್ಲಿ ಭಾಗವಹಿಸಲು ಕೆನಡಾಕ್ಕೆ ಪ್ರಯಾಣಿಸಲಿದ್ದಾರೆ. ಭಾನುವಾರದಿಂದ ಪ್ರಾರಂಭವಾಗುವ ಮೂರು ರಾಷ್ಟ್ರಗಳ ಪ್ರವಾಸದ ಭಾಗವಾಗಿ, ಪ್ರಧಾನಿ ಸೈಪ್ರಸ್ ಮತ್ತು ಕ್ರೊಯೇಷಿಯಾಕ್ಕೂ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಕೆನಾಡದಿಂದ ಆಹ್ವಾನವನ್ನು ಸರ್ಕಾರ ಸ್ವೀಕರಿಸಿದ ನಂತರ ಪ್ರಧಾನಿಯವರು ಅಲ್ಲಿಗೆ ತೆರಳುತ್ತಿರುವುದು ವಿಶೇಷವಾಗಿದೆ. ಭಾರತವು ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ್ ಕಾರ್ಯಾಚಾರಣೆ ನಡೆಸಿದ ನಂತರ ಮೋದಿಯವರ ಮೊದಲ ವಿದೇಶ ಪ್ರವಾಸ ಇದಾಗಿದೆ.
ಖಲಿಸ್ತಾನಿ ವಿಷಯದ ಬಗ್ಗೆ ನವದೆಹಲಿ ಮತ್ತು ಒಟ್ಟಾವಾ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟ ನಂತರ ಕೆನಡಾಕ್ಕೆ ಅವರ ಮೊದಲ ಭೇಟಿ ಇದಾಗಿರುವುದರಿಂದ ಈ ವಿದೇಶಿ ಪ್ರವಾಸ, ವಿಶೇಷವಾಗಿ ಹೆಚ್ಚಿನ ಮಹತ್ವದ್ದಾಗಿದೆ.
ಪ್ರವಾಸದ ಎರಡನೇ ಹಂತದಲ್ಲಿ, ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರ ಆಹ್ವಾನದ ಮೇರೆಗೆ, ಮೋದಿ ಅವರು ಜೂನ್ 16-17 ರಂದು ಕೆನಡಾದ ಕನನಾಸ್ಕಿಸ್‌ಗೆ ಭೇಟಿ ನೀಡಿ ಜಿ 7 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಶೃಂಗಸಭೆಯ ಸಂದರ್ಭದಲ್ಲಿ, ಇಂಧನ ಭದ್ರತೆ, ತಂತ್ರಜ್ಞಾನ ಮತ್ತು ನಾವೀನ್ಯತೆ ಸೇರಿದಂತೆ ಪ್ರಮುಖ ಜಾಗತಿಕ ವಿಷಯಗಳ ಕುರಿತು ಭಾರತದ ನಿಲುವನ್ನು ಪ್ರಧಾನಿ ಮಂಡಿಸಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಜೂನ್ 15 ರಿಂದ 16 ರವರೆಗೆ ಸೈಪ್ರಸ್ ಭೇಟಿಯೊಂದಿಗೆ ವಿದೇಶ ಪ್ರವಾಸ ಆರಂಭವಾಗಲಿದ್ದು, ನಂತರ ಜೂನ್ 16 ರಿಂದ 17 ರವರೆಗೆ ಜಿ 7 ಶೃಂಗಸಭೆಯಲ್ಲಿ ಭಾಗವಹಿಸಲಿದ್ದು, ಜೂನ್ 18 ರಂದು ಕ್ರೊಯೇಷಿಯಾಕ್ಕೆ ಅಧಿಕೃತ ಭೇಟಿಯೊಂದಿಗೆ ಮುಕ್ತಾಯಗೊಳ್ಳಲಿದೆ.