ಬೆಳಗಾವಿ,ಡಿ.5- ಚೈನಾ ವೈರಸ್ ಮತ್ತು ನ್ಯುಮೋನಿಯಾ ಹೆಚ್ಚಳದ ಬಗ್ಗೆ ಭಯ ಪಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್‍ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಆದರೆ ಚೈನಾದಲ್ಲಿ ಕಂಡುಬಂದಿರುವ ನ್ಯುಮೋನಿಯಾದ ಬಗ್ಗೆ ಆತಂಕ ಪಡುವುದು ಅನಗತ್ಯ ಎಂದರು.
ಈಗಾಗಲೇ ಈ ಸಂಬಂಧ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಲು ಸೂಚಿಸಲಾಗಿದೆ. ಆಸ್ಪತ್ರೆಗಳಲ್ಲಿ ತೀವ್ರ ನಿಗಾಘಟಕ, ವೆಂಟಿಲೇಟರ್, ಆಕ್ಸಿಜನ್, ಮಾಸ್ಕ್, ಪಿಪಿ ಇ ಕಿಟ್‍ಗಳನ್ನು ಸದಾ ಸನ್ನದ್ಧ ಸ್ಥಿತಿಯಲ್ಲಿ ಇಟ್ಟುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಸೋಂಕಿನ ಹಾವಳಿ ತೀವ್ರಗೊಂಡಾಗ ಅದನ್ನು ನಿಯಂತ್ರಿಸಲು ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಮುಸ್ಲಿಮರಿಗೆ ಸಂಪತ್ತು ಹಂಚುತ್ತೇನೆ ಎಂದ ಸಿಎಂಗೆ ತಿರುಗೇಟು ಕೊಟ್ಟ ಅಶೋಕ್
ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕೇಂದ್ರ ಸರ್ಕಾರ ಕೂಡ ಚೀನಾ ನ್ಯುಮೋನಿಯಾ ವೈರಸ್ ಬಗ್ಗೆ ಗಾಬರಿ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿವೆ. ಹೀಗಾಗಿ ಜನರು ಅನಗತ್ಯವಾಗಿ ಗೊಂದಲಕ್ಕೆ ಒಳಗಾಗಬಾರದು. ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ತಿಳಿಸಿದರು.