ಬೆಂಗಳೂರು,ಜೂ.17- ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಿಐಡಿ ತನಿಖಾಧಿಕಾರಿಗಳ ಎದುರು ಇಂದು ವಿಚಾರಣೆಗೆ ಹಾಜರಾದರು.ಇಂದು ವಿಚಾರಣೆಗೆ ಹಾಜರಾದ ಯಡಿಯೂರಪ್ಪ ಅವರಿಗೆ ತನಿಖಾಧಿಕಾರಿಗಳು ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡಿದ್ದಾರೆ.
ದೂರುದಾರರಾಗಿದ್ದ ತಾಯಿ ಮತ್ತು ಅವರ ಮಗಳು ನಿಮ ಬಳಿ ಯಾವಾಗ ಬಂದಿದ್ದರು?, ಏನು ಸಹಾಯ ಕೇಳಿಕೊಂಡು ಬಂದಿದ್ದರು?, ಅಂದು ಏನು ಘಟನೆ ನಡೆಯಿತು? ಎಂಬಿತ್ಯಾದಿ ಪ್ರಶ್ನೆಗಳನ್ನು ಅಧಿಕಾರಿಗಳು ಕೇಳಿ ಮಾಹಿತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಫೆಬ್ರವರಿ 2 ರಂದು ನಡೆದಿದೆ ಎನ್ನಲಾದ ಘಟನೆ ಬಗ್ಗೆ ಅಪ್ರಾಪ್ತ ಬಾಲಕಿಯ ತಾಯಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಯಡಿಯೂರಪ್ಪನವರ ವಿರುದ್ಧ ದೂರು ಸಲ್ಲಿಸಿದ್ದರು.ದೂರು ಆಧರಿಸಿ ಪೋಕ್ಸೊ ಕಾಯ್ದೆಯಡಿ ಯಡಿಯೂರಪ್ಪ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಪ್ರಕರಣವನ್ನು ಸರ್ಕಾರ ಸಿಐಡಿಗೆ ಹಸ್ತಾಂತರಿಸಿತ್ತು.
ದೂರು ನೀಡಿದ್ದ ಮಹಿಳೆ ಇತ್ತೀಚೆಗೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರನ್ನು ವಿಚಾರಣೆ ನಡೆಸಿದ್ದ ಸಿಐಡಿ ಧ್ವನಿ ಮಾದರಿಯನ್ನುಸಂಗ್ರಹಿಸಿ ಜೂನ್ 12 ರಂದು ವಿಚಾರಣೆಗೆ ಹಾಜರಾಗುವಂತೆ ಎರಡನೇ ಬಾರಿ ನೋಟಿಸ್ ನೀಡಿದ್ದರು, ಯಡಿಯೂರಪ್ಪರವರು ವಿಚಾರಣೆಗೆ ಗೈರು ಆಗಿದ್ದರು. ಜೂನ್ 17 ರಂದು ವಿಚಾರಣೆಗೆ ಹಾಜರಾಗುವುದಾಗಿ ಸಿಐಡಿಗೆ ಪತ್ರ ಬರೆದು ಮನವಿ ಮಾಡಿದ್ದರು.
ಜೂನ್ 13 ರಂದು ಯಡಿಯೂರಪ್ಪ ವಿರುದ್ಧ ಸೆಷನ್ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿತ್ತು. ಅವರ ಬಂಧನಕ್ಕೆ ಸಿಐಡಿ ಶೋಧ ಆರಂಭಿಸಿತ್ತು. ಪ್ರಕರಣವನ್ನು ರದ್ದು ಮಾಡುವಂತೆ ಹಾಗೂ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಬಿಎಸ್‌ವೈರವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮುಂದಿನ ವಿಚಾರಣೆವರೆಗೆ ಯಡಿಯೂರಪ್ಪ ಅವರನ್ನು ಬಂಧಿಸದಂತೆ ಹಾಗೂ ಬಲವಂತದ ಕ್ರಮ ಕೈಗೊಳ್ಳದಂತೆ ಸಿಐಡಿಗೆ ಸೂಚನೆ ನೀಡಿತ್ತು ಹಾಗೂ ಜೂನ್ 17 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಯಡಿಯೂರಪ್ಪರವರು ಸಿಐಡಿ ಎದುರು ವಿಚಾರಣೆಗೆ ಹಾಜರಾದರು.