ಬೆಂಗಳೂರು, ಸೆ.17- ಕೇಂದ್ರದ ಮಾಜಿಸಚಿವ ಹಾಗೂ ಬಿಜೆಪಿಯ ವಿಜಯಪುರ ಜಿಲ್ಲೆಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿರವರ ವಿರುದ್ಧ ಅತ್ಯಂತ ಕೀಳು ಹಾಗೂ ವಯಕ್ತಿಕ ನಿಂಧನೆ ಮಾಡಿರುವ ಹಿನ್ನೆಲೆಯಲ್ಲಿ ಕೂಡಲೇ ಅವರ ವಿರುದ್ಧ ತನಿಖೆ ನಡೆಸಿ ಬಂಧಿಸಬೇಕೆಂದು ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಎಸ್. ಮನೋಹರ್ ನೇತೃತ್ವದ ನಿಯೋಗ ಪೊಲೀಸರಿಗೆ ದೂರು ನೀಡಿದೆ.
ಬಸವನಗೌಡ ಪಾಟೀಲ್ ಯತ್ನಾಳ್ ಪ್ರತಿ ಬಾರಿಯೂ ಕೇವಲ ತನ್ನ ರಾಜಕೀಯಕ್ಕಾಗಿ ಹಾಗೂ ಪ್ರಚಾರಕ್ಕೋಸ್ಕರ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಟೀಕೆ ನಡೆಸುತ್ತಿರುತ್ತಾರೆ. ರಾಹುಲ್ ಗಾಂಧಿರವರ ಬಗ್ಗೆ ಈಗಾಗಲೆ ಅನೇಕ ಬಾರಿ ಇಂತಹ ಟೀಕೆಗಳನ್ನು ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಈಗಾಗಲೇ ತಮಗೆ ದೂರನ್ನು ಸಲ್ಲಿಸಿದ್ದೇವೆ.
ಆದರೂ ಸಹ ಪೊಲೀಸ್ ಇಲಾಖೆ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಆದ್ದರಿಂದ ವೈಯಕ್ತಿಕವಾಗಿ ರಾಹುಲ್‌ಗಾಂದಿರವರ ವಿರುದ್ಧ ನಿಂದನೆ ಹಾಗೂ ಟೀಕೆಯನ್ನು ಮಾಡುತ್ತಿದ್ದಾರೆ.
ಇದು ಕಾನೂನು ಸುವ್ಯವಸ್ಥೆಗೆ ವಿರುದ್ಧವಾದ ಹೇಳಿಕೆ ಆಗಿರುವುದರಿಂದ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ತೀವ್ರ ನೋವು ತರುವಂತಹ ಹೇಳಿಕೆ ನೀಡಿರುವ ಇವರ ವಿರುದ್ಧ ತುರ್ತಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಈ ನಿಯೋಗದ ಮೂಲಕ ಮನವಿಯಲ್ಲಿ ಉಲ್ಲೇಖಿಸಲಾಗಿದೆ.