Wednesday, April 2, 2025
Homeರಾಜ್ಯನ್ಯಾಮತಿ ಬ್ಯಾಂಕ್ ದರೋಡೆ ಪ್ರಕರಣ ಬೇಧಿಸಿದ ಪೊಲೀಸರು, ಸಹೋದರರಿಬ್ಬರು ಸೇರಿ 6 ಮಂದಿ ಅರೆಸ್ಟ್

ನ್ಯಾಮತಿ ಬ್ಯಾಂಕ್ ದರೋಡೆ ಪ್ರಕರಣ ಬೇಧಿಸಿದ ಪೊಲೀಸರು, ಸಹೋದರರಿಬ್ಬರು ಸೇರಿ 6 ಮಂದಿ ಅರೆಸ್ಟ್

Police crack Nyamati bank robbery case, arrest six including two brothers,

ದಾವಣಗೆರೆ, ಮಾ.31- ನ್ಯಾಮತಿಯ ಎಸ್‌ಬಿಐ ಬ್ಯಾಂಕ್‌ನಲ್ಲಿ ಕಳೆದ ಆರು ತಿಂಗಳ ಹಿಂದೆ ನಡೆದಿದ್ದದರೋಡೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಆರು ಮಂದಿಯನ್ನು ಬಂಧಿಸಿ 15 ಕೋಟಿ ರೂ. ಮೌಲ್ಯದ 17 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ತಮಿಳುನಾಡು ಮೂಲದ ವಿಜಯಕುಮಾರ್(30), ಈತನ ಸಹೋದರ ಅಜಯಕುಮಾರ್ (28), ಇವರ ಭಾವ ಪರಮಾನಂದ(30) ಹಾಗೂ ಸಹಚರರಾದ ಅಭಿಷೇಕ್ (23), ಚಂದ್ರು (23), ಮಂಜುನಾಥ್ (32) ಬಂಧಿತ ಆರೋಪಿಗಳು.

ಕಳೆದ ಅಕ್ಟೋಬರ್ 28 ರಂದು ದಾವಣಗೆರೆ ನ್ಯಾಮತಿ ಎಸ್‌ಬಿಐ ಬ್ಯಾಂಕ್‌ನ ಕಬ್ಬಿಣದ ಕಿಟಕಿಯ ಗ್ರಿಲ್ ಅನ್ನು ಕತ್ತರಿಸಿ ಒಳನುಗ್ಗಿ ಅಲ್ಲಿದ್ದ ಸಿಸಿಟಿವಿ, ಅಲರಾಂ ಮತ್ತು ಎಲ್ಲಾ ವೈರ್ ಗಳನ್ನು ಕತ್ತರಿಸಿ ಕನೆಕ್ಷನ್ ತಪ್ಪಿಸಿದ್ದಾರೆ. ನಂತರ ಅಲ್ಲಿನ ಸ್ಟ್ರಾಂಗ್ ರೂಂನ ಗ್ರಿಲ್ ಡೋರ್‌ಗೆ ಅಳವಡಿಸಿದ್ದ ಬೀಗವನ್ನು ಮುರಿದು ಒಳನುಗ್ಗಿ ನಾಲ್ಕು ಕರೆನ್ಸಿ ಚೆಸ್ಟ್‌ಗಳ ಪೈಕಿ ಒಂದನ್ನು ಗ್ಯಾಸ್ ಕಟ್ಟರ್‌ನಿಂದ ಕೊರೆದು ಲಾಕರ್ ಬಾಗಿಲು ತೆಗೆದು ಅದರಲ್ಲಿ ಸಾರ್ವಜನಿಕರು ಅಡವಿಟ್ಟಿದ್ದ ಸುಮಾರು 17 ಕೆಜಿ ಚಿನ್ನಾಭರಣವನ್ನು ದರೋಡೆ ಮಾಡಿ ಸಾಕ್ಷಿ ನಾಶಪಡಿಸಲು ಎಲ್ಲಾ ಕಡೆ ಖಾರದಪುಡಿಯನ್ನು ಚೆಲ್ಲಿ ಪರಾರಿಯಾಗಿದ್ದರು.

ಈ ಪ್ರಕರಣ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ದರೋಡೆಕೋರರ ಪತ್ತೆಗಾಗಿ 5 ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ಎಲ್ಲಾ ರೀತಿಯ ತಾಂತ್ರಿಕ ಮತ್ತು ಭೌತಿಕ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದರಾದರೂ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ.

ಆರೋಪಿಗಳು ದರೋಡೆ ನಡೆಸಿದ ನಂತರ ಮೊಬೈಲ್ ಫೋನ್ ಗಳನ್ನು ಬಳಸಿಲ್ಲ. ಹಾಗಾಗಿ ದರೋಡೆಕೋರರ ಪತ್ತೆ ಜಟಿಲವಾಗಿತ್ತು. ತದನಂತರದಲ್ಲಿ ಆರೋಪಿಗಳ ಮಹತ್ವದ ಸುಳಿವು ದೊರೆತಿದ್ದು, ಈ ಸುಳಿವಿನ ಆಧಾರದ ಮೇಲೆ ತನಿಖಾ ತಂಡಗಳು ಕಾರ್ಯಾಚರಣೆ ಮುಂದುವರೆಸಿ ತಮಿಳುನಾಡಿನ ಇಬ್ಬರು ಸಹೋದರರು ಸೇರಿದಂತೆ ಆರು ಮಂದಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿವೆ.

ಮಾಲು ಬಚ್ಚಿಟ್ಟು ವಿಲೇವಾರಿಗೆ ಯತ್ನ :
ಈ ದರೋಡೆಕೋರರ ತಂಡ ಈ ಹಿಂದೆ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ. ಬ್ಯಾಂಕಿನಲ್ಲಿ ದರೋಡೆ ಮಾಡಿದ ಚಿನ್ನಾಭರಣಗಳನ್ನು ವಿಜಯಕುಮಾರ್ ಮೊದಲು ತನ್ನ ಮನೆಯಲ್ಲಿದ್ದಂತಹ ಕಾರಿನಲ್ಲಿ ಬಚ್ಚಿಟ್ಟು ನಂತರ ಯಾವ ರೀತಿ ವಿಲೇವಾರಿ ಮಾಡಬೇಕೆಂದು ಸಂಚು ರೂಪಿಸಿದ್ದಾನೆ.

ಕೃತ್ಯಕ್ಕೆ ಬಳಸಿದ್ದ ಮಂಕಿ ಕ್ಯಾಪ್, ಹ್ಯಾಂಡ್‌ಗೌಸ್‌ಗಳನ್ನು ನಾಶಪಡಿಸಿ ಇನ್ನುಳಿದ ಗ್ಯಾಸ್ ಸಿಲಿಂಡ‌ರ್, ಕಟ್ಟರ್ ಇತರ ವಸ್ತುಗಳನ್ನು ಕೆರೆಗೆ ಎಸೆದಿದ್ದಾರೆ. ಅಲ್ಲದೆ, ಎಸ್‌ಬಿಐ ಬ್ಯಾಂಕ್‌ನಿಂದ ತಂದಿದ್ದಂತಹ ಹಾರ್ಡ್ ಡಿಸ್ಕ್, ಡಿವಿಆರ್ ಅನ್ನು ಕಲ್ಲಿನಿಂದ ಜಜ್ಜಿ ಕೆರೆಗೆ ಎಸೆದಿದ್ದಾರೆ. ತದನಂತರ ನವೆಂಬರ್‌ನಲ್ಲಿ ವಿಜಯಕುಮಾರ್ ಆಭರಣ ಬಚ್ಚಿಟ್ಟಿದ್ದ ಕಾರಿನಲ್ಲೇ ತೆರಳಿ ಪೆಟ್ಟಿಗೆಯೊಂದರಲ್ಲಿಟ್ಟು ಲಾಕ್ ಮಾಡಿ ತಮಿಳುನಾಡಿನ ಮಧುರೈನ ತೋಟದ ಮನೆಯ ಪಾಳುಬಾವಿಯಲ್ಲಿ ಬಚ್ಚಿಟ್ಟಿದ್ದನ್ನು ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ದರೋಡೆ ಮಾಡಿದ್ದ ಆಭರಣಗಳ ಪೈಕಿ ಕೆಲವು ಆಭರಣಗಳನ್ನು ಬ್ಯಾಂಕ್ ಹಾಗೂ ಜ್ಯುವೆಲ್ಲರಿ ಅಂಗಡಿಗಳಲ್ಲಿ ಆಡವಿಟ್ಟು ಹಣವನ್ನು ಪಡೆದು ಸ್ವಲ್ಪ ಹಣವನ್ನು ದರೋಡೆಗೆ ಬಳಸಿಕೊಂಡಿದ್ದ ಮೂವರಿಗೆ ತಲಾ ಒಂದು ಲಕ್ಷ ಕೊಟ್ಟಿದ್ದಾನೆ. ಅಲ್ಲದೆ ಊರಿನಲ್ಲಿ ದೊಡ್ಡ ಮನೆ ಕಟ್ಟಿಸಿದ್ದು ಕೆಲವು ನಿವೇಶನಗಳನ್ನು ಖರೀದಿ ಮಾಡಿರುವುದಲ್ಲದೆ ನಮ್ಮ ಸಂಬಂಧಿಕರಿಗೂ ಸ್ವಲ್ಪ ಚಿನ್ನಾಭರಣಗಳನ್ನು ಕೊಟ್ಟಿದ್ದಾಗಿ ವಿಚಾರಣೆ ವೇಲೆ ಬಾಯಿಬಿಟ್ಟಿದ್ದಾನೆ.

RELATED ARTICLES

Latest News