ಬೆಂಗಳೂರು,ಡಿ.21- ಯಾವುದೇ ತನಿಖಾ ಸಂಸ್ಥೆಗಳಾಗಲೀ, ಪೊಲೀಸರಾಗಲೀ ಡಿಜಿಟಲ್ ಅರೆಸ್ಟ್ ಮಾಡುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕರಲ್ಲಿ ಸೈಬರ್ ಕ್ರೈಂ ಅರಿವು ಮೂಡಿಸುವ ಬಗ್ಗೆ ಮಾತನಾಡಿರುವ ಅವರು, ತನಿಖಾ ಸಂಸ್ಥೆಗಳಾದ ಸಿಬಿಐ, ಇ.ಡಿ ಹಾಗೂ ಮುಂಬೈ, ದೆಹಲಿ ಸೇರಿದಂತೆ ಯಾವುದೇ ಪೊಲೀಸರು ಡಿಜಿಟಲ್ ಅರೆಸ್ಟ್ ಮಾಡವುದಿಲ್ಲ, ಅಂತಹ ಯಾವುದೇ ಕಾನೂನು ಇಲ್ಲ ಎಂದು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು ನಿಮ ಖಾಸಗಿ ಮಾಹಿತಿಗಳನ್ನು ಬೇರೆ ಬೇರೆ ಮೂಲಗಳಿಂದ ಪಡೆದುಕೊಂಡು ನಿಮಗೆ ಕರೆ ಮಾಡಿ ಹೆದರಿಸುತ್ತಾರೆ. ನೀವು ಅದನ್ನು ನಿಜವೆಂದು ಹೆದರಿ ನಿಮ ಹಣವನ್ನು ಅವರು ಹೇಳುವ ಖಾತೆಗೆ ಹಾಕಿ ಮೋಸ ಹೋಗುತ್ತೀರ, ಈ ಬಗ್ಗೆ ಎಚ್ಚರದಿಂದಿರಿ ಎಂದು ಅವರು ಸಲಹೆ ಮಾಡಿದ್ದಾರೆ.
ವಂಚಕರು ನಿಮಗೆ ಮೊಬೈಲ್ ಕರೆ ಮಾಡಿ ಡ್ರಗ್ಸ್ ಅಥವಾ ಕಾನೂನು ಬಾಹಿರ ಚಟುವಟಿಕೆ, ಇಲ್ಲವೇ ಮನಿ ಲ್ಯಾಂಡ್ರಿಂಗ್ನಲ್ಲಿ ತೊಡಗಿದ್ದೀರೆಂದು ಹೆದರಿಸಿ ಡಿಜಿಟಲ್ ಅರೆಸ್ಟ್ ಆಗಬೇಕೆಂದು ಬೆದರಿಕೆ ಹಾಕ್ತುತಾರೆ. ನಂತರ ಬೇರೆ ಬೇರೆ ಅಕೌಂಟ್ಗಳಿಗೆ ಹಣ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿವೆೆ.
ಅಂತಹ ಕರೆಗಳು ಏನಾದರೂ ಬಂದರೆ ಸಂಪರ್ಕವನ್ನು ಕಡಿತಗೊಳಿಸಿ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.1930ಗೆ ಮಾಹಿತಿ ನೀಡಿ: ಒಂದು ವೇಳೆ ಅಂತಹ ಕರೆಗಳು ಬಂದರೆ ತಕ್ಷಣವೇ ಕರೆ ಕಟ್ಮಾಡಿ 1930ಗೆ ನೇರವಾಗಿ ಕರೆಮಾಡಿ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದು ಎಂದು ಅವರು ಸಲಹೆ ಮಾಡಿದರು.
ಡಿಜಿಟಲ್ ಅರೆಸ್ಟ್ ಮಾಡುವ ವಿಧಾನ: ಮೊದಲು ಸೈಬರ್ ವಂಚಕರು ನಿಮ ಮೊಬೈಲ್ಗೆ ಕರೆಮಾಡುತ್ತಾರೆ, ನೀವು ಕರೆ ಸ್ವೀಕರಿಸಿದ ತಕ್ಷಣ ನಿಮ ಹೆಸರು ಹೇಳುತ್ತಾರೆ. ನೀವು ಹೌದು ಎನ್ನುತ್ತಿದ್ದಂತೆ ನೀವು ಕಳುಹಿಸಿರುವ ಕೊರಿಯರ್ ಪಾರ್ಸಲ್ನಲ್ಲಿ ಡ್ರಗ್‌್ಸ ಇದೆ ಎಂದು ಹೇಳುತ್ತಾರೆ. ಆಗ ನೀವು ನಾನು ಯಾವುದೇ ಪಾರ್ಸಲ್ ಕಳುಹಿಸಿಲ್ಲ ಎಂದು ಹೇಳಿದರೂ ನಿಮ ಹೆಸರು, ವಿಳಾಸ ಪಾರ್ಸಲ್ ಮೇಲೆ ಇದೆ ಎಂದು ಹೆದರಿಸುತ್ತಾರೆ.
ಆಗ ನೀವು ಬೇರೆ ಯಾರೋ ನನ್ನ ಹೆಸರು ಬರೆದಿರಬಹುದೆಂದು ಹೇಳಿದಾಗ ಸೈಬರ್ ವಂಚಕರು ಮತ್ತಷ್ಟು ಹೆದರಿಸಿ, ನಿಮಗೆ ಸಿಬಿಐ ನವರು ಬಂದು ಅರೆಸ್ಟ್ ಮಾಡುತ್ತಾರೆ ಎಂದು ಹೇಳಿ ನಿಮ ಆಧಾರ್, ಪ್ಯಾನ್ಕಾರ್ಡ್ ನಂಬರ್, ಕೆಲಸ ಮಾಡೋ ಕಂಪನಿ ಹೆಸರು ಕೇಳುತ್ತಾರೆ. ನೀವು ಅದನ್ನೆಲ್ಲಾ ವಂಚಕರಿಗೆ ಹೇಳಿದರೆ, ಇವೆಲ್ಲವೂ ಮ್ಯಾಚ್ ಆಗುತ್ತಿದೆ, ನಿಮನ್ನು ಅರೆಸ್ಟ್ ಮಾಡಿ 5 ವರ್ಷ ಶಿಕ್ಷೆ, 10ಲಕ್ಷ ದಂಡ ವಿಧಿಸುತ್ತಾರೆ ಎಂದು ಹೇಳಿ, ನೀವು ಬೇರೆ ಯಾರೊಂದಿಗೂ ಈ ವಿಷಯ ಶೇರ್ ಮಾಡಿಕೊಳ್ಳಬಾರದು, ಮತನಾಡ ಬಾರದು, ಕೆಲವೇ ನಿಮಿಷಗಳಲ್ಲಿ ಡಿಸಿಪಿ ನಿಮ ಜೊತೆ ಮಾತನಾಡುತ್ತಾರೆ ಎಂದು ಹೇಳಿ ವಂಚಕರು ಪೋನ್ ಸ್ಥಗಿತಗೊಳಿಸುತ್ತಾರೆ.
ನಂತರ ಮತ್ತೆ ಕಾಲ್ ಮಾಡಿ ನಿಮ ಪಾಸ್ಪೋಟ್ ಸಿಕ್ಕಿದೆ. ನೀವು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದೀರಾ, ನಿಮನ್ನು ಡಿಜಿಟಲ್ ಅರೆಸ್ಟ್ ಬದಲು ಫಿಜಿಕಲ್ ಅರೆಸ್ಟ್ ಮಾಡುತ್ತೇವೆ, ಸ್ಥಳೀಯ ಪೊಲೀಸರು ಬಂದು ಅರೆಸ್ಟ್ ಮಾಡುತ್ತಾರೆ, ನೀವು ಮನೆಯ ಒಂದು ರೂಮ್ನಲ್ಲೇ ಇರಬೇಕು ಎಂದು ಹೇಳುತ್ತಿದ್ದಂತೆ ನೀವು ಹೆದರಿಕೊಂಡು ಮನೆಗೆ ಪೊಲೀಸರು ಬರುವುದು ಬೇಡ ಎಂದು ಹೇಳುತ್ತೀರ.
ಕೆಲ ಸಮಯದ ಬಳಿಕ ಪೊಲೀಸ್ ಡ್ರೆಸ್ನಲ್ಲಿ ವಂಚಕನೊಬ್ಬ ವಿಡಿಯೋ ಕರೆ ಮಾಡಿ ನಾನು ಡಿಸಿಪಿ ಎಂದು ಪರಿಚಯಿಸಿಕೊಳ್ಳುತ್ತಾನೆ. ಆತನ ವೇಷ ನೋಡಿ ಪೊಲೀಸರೆಂದು ಮತ್ತಷ್ಟು ಹೆದರಿಕೊಳ್ಳುತ್ತೀರಿ.ಆ ವ್ಯಕ್ತಿ ಮೊದಲು ನಿಮ ಹೆಸರು ಹೇಳಿ, ಸಂಪೂರ್ಣ ತನಿಖೆಯಾಗಿದೆ. ನೀವು ಇನೋಸೆಂಟ್. ಮನಿ ಲ್ಯಾಂಡ್ರಿಂಗ್ ಫೈನಲೈಸ್ ಆಗಿಲ್ಲ, ಟ್ರ್ಯಾಪ್ ಆಗಿದ್ದೀರಾ, ಒಂದು ಕೆಲಸಮಾಡಿ, ನಾನೊಂದು ಗೌರ್ನಮೆಂಟ್ ಅಕೌಂಟ್ ಕೊಡುತ್ತೇನೆ, ಅದರಲ್ಲಿ ನಿಮ ಎಲ್ಲಾ ಫಂಡ್ಟ್ರಾನ್ಸ್ ಫರ್ ಮಾಡಿ.
ಮನಿ ಲ್ಯಾಂಡಿಂಗ್ ಆಗಿದ್ದರೆ ಅದನ್ನು ಡಿಡೆಕ್ಟ್ ಮಾಡಿ ಉಳಿದ ಹಣ ನಿಮ ಅಕೌಂಟ್ಗೆ ಟ್ರಾನ್‌್ಸಫರ್ ಮಾಡುವುದಾಗಿ ನಿಮನ್ನು ನಯವಾಗಿ ನಂಬಿಸಿ ಹಣವನ್ನೆಲ್ಲಾ ಹಾಕಿಸಿಕೊಂಡು ನಿಮ ಫೋನ್ ಸ್ಥಗಿತಗೊಳಿಸಿ ಮೋಸದ ಜಾಲಕ್ಕೆ ಬೀಳಿಸಿಕೊಳ್ಳುತ್ತಾರೆ.
ಹಾಗಾಗಿ ಇಂತಹ ಕರೆಗಳೇನಾದರೂ ಬಂದರೆ ಸೈಬರ್ ಕ್ರೈಂ ವಂಚಕರ ಬಗ್ಗೆ ಎಚ್ಚೆತ್ತುಕೊಳ್ಳಿ ಎಂಬುದು ಪತ್ರಿಕೆಯ ಆಶಯವಾಗಿದೆ.