ಮೈಸೂರು,ಮಾ.22- ದರೋಡೆ ಪ್ರಕರಣದಲ್ಲಿ ಸ್ಥಳ ಮಹಜರ್‌ಗೆ ಕರೆದೊಯ್ದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ದರೋಡೆಕೋರ ಇನ್‌ಸ್ಪೆಕ್ಟರ್ ಹಾರಿಸಿದ ಗುಂಡೇಟಿನಿಂದ ಗಾಯಗೊಂಡಿದ್ದಾನೆ.
ಕೇರಳ ಮೂಲದ ಆರೋಪಿ ಆದರ್ಶ ಗುಂಡೇಟಿನಿಂದ ಗಾಯಗೊಂಡಿರುವ ದರೋಡೆಕೋರ. ಈತನನ್ನು ಮೇಟಗಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಕಾರ್ಯಾಚರಣೆ
ವೇಳೆ ಗಾಯಗೊಂಡಿರುವ ಸಬ್‌ಇನ್‌ಸ್ಪೆಕ್ಟರ್ ಪ್ರಕಾಶ ಹಾಗೂ ಸಿಬ್ಬಂದಿ ಹರೀಶ್ ಅವರು ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಾರೋಹಳ್ಳಿ ಬಳಿ ಹಾಡಹಗಲೇ ಕೇರಳ ಮೂಲದ ಉದ್ಯಮಿಯನ್ನು ಅಡ್ಡಗಟ್ಟಿ ದರೋಡೆ ಮಾಡಲಾಗಿತ್ತು.ದರೋಡೆ ನಡೆದ ಸ್ಥಳದಲ್ಲಿ ಕ್ವಾಲಿಸ್ ಕಾರು ದೊರೆತಿತ್ತು. ನಂತರದ ತನಿಖೆಯಲ್ಲಿ ಈ ಕಾರು ಕೇರಳದ ಆದರ್ಶ ಎಂಬಾತನಿಗೆ ಸೇರಿದ್ದು ಎಂಬುದು ಗೊತ್ತಾಯಿತು. ತನಿಖೆ ಮುಂದುವರೆಸಿದ ಪೊಲೀಸರಿಗೆ ದರೋಡೆಕೋರರ ಬಂಧನ ಸವಾಲಾಗೇ ಪರಿಣಮಿಸಿತ್ತು.
ಕೊನೆಗೂ ಆದರ್ಶ ಪೊಲೀಸರ ಬಲೆಗೆ ಸಿಕ್ಕಿಬಿದ್ದನು. ತನಿಖೆಯ ಮುಂದುವರೆದ ಭಾಗವಾಗಿ ಈತನ ಕಾರು ದೊರೆತ ಸ್ಥಳದಲ್ಲಿ ಮೊಹಜರಿಗೆ ಇಂದು ಬೆಳಗ್ಗೆ 7.30ರ ಸುಮಾರಿನಲ್ಲಿ ಜಯಪುರ ಠಾಣೆ ಸಬ್‌ಇನ್‌ಸ್ಪೆಕ್ಟರ್ ಪ್ರಕಾಶ, ಪಿರಿಯಾಪಟ್ಟಣ ಇನ್‌ಸ್ಪೆಕ್ಟರ್ ದೀಪಕ್ ಹಾಗೂ ಸಿಬ್ಬಂದಿ ಕರೆದೊಯ್ದಿದ್ದಾರೆ.
ಕಾರು ಪತ್ತೆಯಾದ ಸ್ಥಳವನ್ನು ಆರೋಪಿ ಗುರುತಿಸಿದ್ದಾನೆ. ಇದೇ ವೇಳೆ ಮೂತ್ರವಿಸರ್ಜನೆ ನೆಪವೊಡ್ಡಿ ರಸ್ತೆ ಬದಿಗೆ ಹೋಗುವ ಹಾಗೆ ನಡೆಸಿ ಅಲ್ಲೇ ಬಿದ್ದಿದ್ದ ಖಾಲಿಬಿಯರ್ ಬಾಟಲಿಯಿಂದ ಸಬ್‌ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.ತಕ್ಷಣ ಸಬ್‌ಇನ್‌ಸ್ಪೆಕ್ಟರ್ ಪ್ರಕಾಶ ಅವರು ಶರಣಾಗುವಂತೆ ಹಲವು ಬಾರಿ ಮನವಿ ಮಾಡಿದರೂ ಕಿವಿಗೊಡದಿದ್ದಾಗ ಇನ್‌ಸ್ಪೆಕ್ಟರ್ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಸಿದ್ದಾರೆ.
ಪೊಲೀಸರ ಎಚ್ಚರಿಕೆಯ ನಡುವೆಯೂ ಹಲ್ಲೆಗೆ ಯತ್ನಿಸಿದಾಗ ಆತರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಹಾರಿಸಿದ ಗುಂಡು ದರೋಡೆಕೋರ ಆದರ್ಶ ಕಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ. ತಕ್ಷಣ ಪೊಲೀಸರು ಆತನನ್ನು ಸುತ್ತುವರಿದು ವಶಕ್ಕೆ ಪಡೆದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ವಿಷ್ಣುವರ್ಧನ್, ಅಡಿಷನಲ್ ಎಸ್ಪಿ ಮಲ್ಲಿಕ್, ಡಿವೆಎಸ್ಪಿ ಕರೇಂರಾವ್‌ತರ್, ಸರ್ಕಲ್ ಇನ್‌ಸ್ಪೆಕ್ಟರ್ ಶೇಖರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.