Friday, September 20, 2024
Homeರಾಜ್ಯಬೆಳ್ಳಂಬೆಳಗ್ಗೆ ಘರ್ಜಿಸಿದ ಪೊಲೀಸರ ರಿವಾಲ್ವರ್‌, ಗುಂಡು ಹಾರಿಸಿ ರೌಡಿ ಶೀಟರ್‌ಗಳ ಸೆರೆ

ಬೆಳ್ಳಂಬೆಳಗ್ಗೆ ಘರ್ಜಿಸಿದ ಪೊಲೀಸರ ರಿವಾಲ್ವರ್‌, ಗುಂಡು ಹಾರಿಸಿ ರೌಡಿ ಶೀಟರ್‌ಗಳ ಸೆರೆ

ಕನಕಪುರ, ಜು.28- ಇಂದು ಬೆಳ್ಳಂಬೆಳಗ್ಗೆ ಪೊಲೀಸರ ರಿವಾಲ್ವರ್‌ ಗರ್ಜಿಸಿದ್ದು, ತಲೆಮರೆಸಿಕೊಂಡು ಆರ್ಭಟಿಸುತ್ತಿದ್ದ ಇಬ್ಬರು ರೌಡಿ ಶೀಟರ್‌ಗಳಿಗೆ ಗುಂಡು ಹಾರಿಸಿ ಸೆರೆ ಹಿಡಿಯಲಾಗಿದೆ.ಕಳೆದ ಜುಲೈ 22ರಂದು ಕನಕಪುರ ಪಟ್ಟಣದ ಮುಳಗಲ ಪ್ರದೇಶದಲ್ಲಿ ಜಿಪಂ ಮಾಜಿ ಅಧ್ಯಕ್ಷನ ಮನೆಗೆ ನುಗ್ಗಿ ದಾಂಧಲೆ ನಡೆಸಿ ಯುವಕನ ಕೈ ಕತ್ತರಿಸಿ ಮನೆಯವರ ಮೇಲೆ ಹಲ್ಲೆ ನಡೆಸಿದ್ದ ಕುಖ್ಯಾತ ರೌಡಿ ಶೀಟರ್‌ ಹಾಗೂ ಗಡಿ ಪಾರಾಗಿದ್ದ ಹರ್ಷ ಅಲಿಯಾಸ್‌‍ ಕೈಮಾ ಮತ್ತು ಕರುಣೇಶ್‌ ಅಲಿಯಾಸ್‌‍ ಕಣ್ಣನನ್ನು ಕಗ್ಗಲಿಪುರದ ಸಮೀಪ ಕಾರ್ಯಾಚರಣೆಯಲ್ಲಿ ಸೆರೆ ಹಿಡಿಯಲಾಗಿದೆ.

ಘಟನೆ ವಿವರ: ತಡರಾತ್ರಿ ಮನೆಗೆ ನುಗ್ಗಿದ್ದ ಆರು ಮಂದಿ ದಾಂಧಲೆ ನಡೆಸಿದ್ದರು. ಇದನ್ನು ನೋಡಿ ಜನರು ಭೀತಿಗೊಂಡಿದ್ದರು. ಸ್ಥಳಕ್ಕೆ ಬಂದಿದ್ದ ಐಜಿಪಿ ಪರಿಶೀಲನೆ ನಡೆಸಿ ಮೂರು ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿತ್ತು.

ಕೇವಲ 24 ಗಂಟೆಗಳಲ್ಲೇ ನಾಲ್ವರು ಆರೋಪಿಗಳನ್ನು ಸೆರೆ ಹಿಡಿದರು. ಇವರಲ್ಲಿ ಪ್ರಮುಖ ಆರೋಪಿಗಳಾದ ಹರ್ಷ ಮತ್ತು ಕರುಣೇಶ್‌ ತಲೆಮರೆಸಿಕೊಂಡಿದ್ದರು. ಇವರಿಗೆ ಅಕ್ಕಪಕ್ಕದ ಜಿಲ್ಲೆಗಳಲ್ಲೂ ಹುಡುಕಾಟ ನಡೆಸಲಾಗಿತ್ತು. ಆದರೆ, ಸಿಕ್ಕಿರಲಿಲ್ಲ. ಪೊಲೀಸರ ಬಗ್ಗೆ ಮಾಹಿತಿ ಪಡೆದು ಒಂದೇ ಪ್ರದೇಶದಲ್ಲಿರದೆ ಹಲವಾರು ಹಳ್ಳಿಗಳಿಗೆ ಸಂಚರಿಸಿ ತಲೆಮರೆಸಿಕೊಂಡಿದ್ದರು.

ಕಳೆದ ರಾತ್ರಿ ಕಗ್ಗಲಿಪುರದ ವ್ಯಾಲಿ ಶಾಲೆ ಬಳಿ ಇವರಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಕನಕಪುರ ಟೌನ್‌ ಸರ್ಕಲ್‌ ಇನ್‌್ಸಪೆಕ್ಟರ್‌ ಮಿಥುನ್‌ ಶಿಲ್ಪಿ ಹಾಗೂ ಪಿಎಸ್‌‍ಐ ಮನೋಹರ್‌ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು.

ಇಂದು ಮುಂಜಾನೆ ಅವರಿರುವ ಸ್ಥಳಕ್ಕೆ ತಲುಪಿ ಮೊದಲು ಇಬ್ಬರು ಕಾನ್‌್ಸಟೆಬಲ್‌ಗಳು ಅವರನ್ನು ಹಿಡಿಯಲು ಹೋಗಿದ್ದಾರೆ. ಈ ವೇಳೆ ಈ ಇಬ್ಬರು ಲಾಂಗ್‌ ಮತ್ತು ಡ್ರ್ಯಾಗರ್‌ನಿಂದ ಅವರ ಮೇಲೆಯೇ ಎರಗಿ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ.

ತಕ್ಷಣ ಎಚ್ಚೆತ್ತ ಪೊಲೀಸರು ಅವರನ್ನು ಸುತ್ತುವರೆದು ಶರಣಾಗುವಂತೆ ಸೂಚಿಸಿ ಗಾಳಿಯಲ್ಲಿ ಗುಂಡು ಹಾರಿಸಿದರೂ ಅದನ್ನು ಲೆಕ್ಕಿಸದೆ ಅವರ ಮೇಲೆಯೇ ದಾಳಿ ಮುಂದಾದಾಗ ಆತರಕ್ಷಣೆಗಾಗಿ ಇನ್‌್ಸಪೆಕ್ಟರ್‌ ಮತ್ತು ಸಬ್‌ಇನ್‌್ಸಪೆಕ್ಟರ್‌ ಹಾರಿಸಿದ ಗುಂಡುಗಳು ಹರ್ಷನ ಬಲಗಾಲು ಮತ್ತು ಎಡಗಾಲಿಗೆ ಗುಂಡು ತಗುಲಿದ್ದರೆ, ಮತ್ತೊಬ್ಬ ಆರೋಪಿ ಕಣ್ಣನಿಗೆ ಎಡಗಾಲಿಗೆ ಗುಂಡು ಬಿದ್ದು ಕುಸಿದು ಬಿದ್ದರು.

ತಕ್ಷಣ ಅವರನ್ನು ವಶಕ್ಕೆ ಪಡೆದು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ನಡುವೆ ಗಾಯಗೊಂಡಿರುವ ಇಬ್ಬರು ಕಾನ್‌್ಸಟೆಬಲ್‌ಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಟ್ಟಾರೆ, ಕಳೆದ ಆರು ದಿನಗಳಿಂದ ತಲೆಮರೆಸಿಕೊಂಡಿದ್ದ ರೌಡಿ ಶೀಟರ್‌ ಹರ್ಷನನ್ನು ಸೆರೆಹಿಡಿಯಲಾಗಿದೆ. ಈತನ ಮೇಲೆ ಸುಮಾರು ಐದಕ್ಕೂ ಹೆಚ್ಚು ಗಂಭೀರ ಪ್ರಕರಣಗಳಿದ್ದು, ಗಡೀಪಾರು ಮಾಡಲಾಗಿತ್ತು. ಆದರೆ, ಆತ ಕನಕಪುರಕ್ಕೆ ಬಂದು ಈ ದಾಂಧಲೆಯಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಎಸ್‌‍ಪಿ, ಡಿವೈಎಸ್‌‍ಪಿ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಚುರುಕುಗೊಂಡಿದೆ.

RELATED ARTICLES

Latest News