ಬೆಂಗಳೂರು,ಸೆ.20- ಬೀದಿಗಳಲ್ಲಿ ಬೀಡಿ, ಸಿಗರೇಟ್ ಸೇದುವವರಿಗೆ ಹಾಗೂ ಬಾರ್‌ಗಳಲ್ಲಿ ಎಣ್ಣೆ ಹೊಡೆಯುವವರಿಗೆ ಪೊಲೀಸರು ಬೆಂಡೆತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದು ಹಾಗೂ ಬಾರ್‌ಗಳಲ್ಲಿ ಮದ್ಯಪಾನಕ್ಕೆ ಅವಕಾಶವಿಲ್ಲ ಎಂಬ ನಿಯಮವಿದ್ದರೂ ಕಾನೂನು ಉಲ್ಲಂಘನೆ ಮಾಡಿರುವ ಮದ್ಯಪಾನಿ-ಧೂಮಪಾನಿಗಳಿಗೆ ಪೊಲೀಸರು ಶಾಕ್ ನೀಡಿದ್ದಾರೆ.
ರಾತ್ರೋರಾತ್ರಿ ರೌಡಿಗಳ ಮನೆಗಳ ಮೇಲೆ ಮುಗಿಬಿದ್ದು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಬಸವೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಶೋಭಾ ವೈನ್‌್ಸ ಒಳಗೆ ಕೆಲವರು ಮದ್ಯಪಾನ ಮಾಡುತ್ತಿರುವುದು ಕಂಡು ಬಂದಿದ್ದು, ಪಿಎಸ್‌ಐ ನಾಗಭೂಷಣ್ ನೀಡಿರುವ ದೂರಿನ ಆಧಾರದ ಮೇರೆಗೆ ಬಾರ್ ಕ್ಯಾಷಿಯರ್ ದಿನೇಶ್ (38) ಎಂಬುವವರ ಮೇಲೆ ಎಫ್‌ಐಆರ್ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಮೋದಿ ರಸ್ತೆಯಲ್ಲಿರುವ ಸಂತೋಷ್ ಪಾನ್ ಅಂಗಡಿ ಬಳಿ ಜನ ಗುಂಪುಗೂಡಿ ಧೂಮಪಾನ ಹಾಗೂ ಪಾನ್ ಸೇವಿಸುತ್ತಿರುವುದನ್ನು ಗಮನಿಸಿ ಇದೇ ಠಾಣೆ ಪೊಲೀಸರು ಪಾನ್ ಅಂಗಡಿ ಮಾಲೀಕ ರಾಜು ರವರ ವಿರುದ್ಧ ಕ್ರಮಕೈಗೊಂಡು ಪಾನ್, ಬೀಡ, ಸಿಗರೇಟ್ ಮತ್ತಿತರರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.