ಬೆಂಗಳೂರು,ಫೆ.11- ಮೈಸೂರು ಉದಯಗಿರಿಯಲ್ಲಿ ನಡೆದಿರುವ ಕಲ್ಲುತೂರಾಟ ಪ್ರಕರಣದಲ್ಲಿ ಪೊಲೀಸರು ಕರ್ತವ್ಯಲೋಪ ಮಾಡಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ ಪೊಲೀಸರಿಗೆ ಏನಾಗಿದೆ? ಕನಿಷ್ಠ ಸಾಮಾನ್ಯ ಪ್ರಜ್ಞೆ ಬೇಡವೇ?, ಯಾರೋ ಆರ್ಎಸ್ಎಸ್ನ ವ್ಯಕ್ತಿ ಧಾರ್ಮಿಕ ನಿಂದನೆಯ ಕೃತ್ಯವೆಸಗಿದ್ದಾನೆ. ಆತನ ಮೇಲೆ ಪ್ರಕರಣ ದಾಖಲಾಗಿ ಬಂಧಿಸಲಾಗಿದೆ.
ಆರೋಪಿಯನ್ನು ಮುಸ್ಲಿಂ ಜನಸಂಖ್ಯೆ ಶೇ.99 ರಷ್ಟಿರುವ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ಸಹಜವಾಗಿಯೇ ಜನ ಒಟ್ಟಾಗಿ ಸೇರಿದ್ದಾರೆ, ಗಲಾಟೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರಿಗೆ ಬುದ್ಧಿ ಬೇಡವೇ? ಥೂ… ಆಡಳಿತ ನಡೆಸುವುದು ಸಚಿವರ ಜವಾಬ್ದಾರಿಯಷ್ಟೇ ಅಲ್ಲ, ಅಧಿಕಾರಿಗಳಿಗೂ ಹೊಣೆಗಾರಿಕೆ ಇದೆ. ಸ್ಥಳೀಯವಾಗಿ ಕೆಲಸ ಮಾಡುವ ಪೊಲೀಸರಿಗೆ ತಲೆಯಲ್ಲಿ ಬುದ್ಧಿ ಬೇಡವೇ?, ರಸ್ತೆಯಲ್ಲಿ ಹೋಗುವ ಕೆಲಸಕ್ಕೆ ಬಾರದ ಅನಾಮಧೇಯನಿಗಿರುವ ಸಾಮಾನ್ಯ ಜ್ಞಾನ ದೊಡ್ಡ ಬ್ಯಾಡ್‌್ಜಗಳನ್ನು ಹಾಕಿಕೊಂಡು ತಿರುಗುವ ಅಧಿಕಾರಿಗಳಿಗೆ ಇಲ್ಲವೇ?, ಬಂಧನದ ನಂತರ ನಡೆದ ಗಲಭೆ ಪ್ರಕರಣಗಳಿಗೆ ಸ್ಥಳೀಯ ಪೊಲೀಸರೇ ಕಾರಣ ಎಂದು ತರಾಟೆಗೆ ತೆಗೆದುಕೊಂಡರು.
ಭದ್ರಾವತಿಯ ಕಾಂಗ್ರೆಸ್ ಶಾಸಕ ಸಂಗಮೇಶ್ರ ಪುತ್ರ ಮಹಿಳಾ ಅಧಿಕಾರಿಯ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿ ದರ್ಪ ಪ್ರದರ್ಶಿಸಿರುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಯಾರೇ ಇರಲಿ, ಸಚಿವರಿರಲಿ, ಶಾಸಕರಿರಲಿ ಅಥವಾ ಅವರ ಮಕ್ಕಳೇ ಇರಲಿ ಅಧಿಕಾರಿಗಳನ್ನು ಅವಹೇಳನಕಾರಿಯಾಗಿ ನಿಂದಿಸುವುದು ಶಿಕ್ಷಾರ್ಹ ಅಪರಾಧ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯವಿದೆ ಎಂದರು.
ಕೆಪಿಸಿಸಿಗೆ ಪೂರ್ಣ ಪ್ರಮಾಣದ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಕೆಲಸ ನಿರ್ವಹಿಸುತ್ತಿದ್ದಾರೆ. ಪಕ್ಷದ ಅಧ್ಯಕ್ಷರ ಬದಲಾವಣೆ ಬಗ್ಗೆ ಯಾರೂ ಚರ್ಚೆ ಮಾಡಬಾರದು ಎಂದು ಎಐಸಿಸಿ ಅಧ್ಯಕ್ಷರು ಸೂಚನೆ ನೀಡಿದ್ದಾರೆ. ಉಳಿದ ನಿರ್ಧಾರಗಳನ್ನು ಹೈಕಮಾಂಡ್ ಸೂಕ್ತ ಕಾಲಕ್ಕೆ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ನಾವು ಪಕ್ಷ ಸಂಘಟನೆಗೆ ಒತ್ತು ನೀಡುತ್ತೇವೆ. ಗುಂಪುಗಾರಿಕೆಗೆ ಬೆಂಬಲ ನೀಡುವುದಿಲ್ಲ. ಜಾತಿಯ ಸಮಾವೇಶಗಳಾದರೆ ಅದು ಪಕ್ಷಕ್ಕೆ ಬಲ ತಂದುಕೊಡುತ್ತದೆ. ಎಸ್ಸಿ/ಎಸ್ಟಿ, ಓಬಿಸಿ ಯಾವುದೇ ಕಾರ್ಯಕ್ರಮಗಳಾದರೂ ಪಕ್ಷದ ವೇದಿಕೆಯಲ್ಲೇ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾವು ಇಂದು ದೆಹಲಿಗೆ ಭೇಟಿ ನೀಡಿದ್ದು, ಕೇಂದ್ರ ಸಚಿವ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ವಿ.ಸೋಮಣ್ಣ ಅವರನ್ನು ಭೇಟಿ ಮಾಡುತ್ತೇನೆ. ಸಣ್ಣ ನೀರಾವರಿಗೆ ಸಂಬಂಧಪಟ್ಟಂತೆ ಒಂದಷ್ಟು ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ. ವಿ.ಸೋಮಣ್ಣ ಕೇಂದ್ರ ಸಣ್ಣ ನೀರಾವರಿ ಸಚಿವರಾಗಿರುವುದರಿಂದ ಅವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.
ನಬಾರ್ಡ್ನಿಂದ ರಾಜ್ಯಕ್ಕೆ ನೀಡುವ ಕೃಷಿ ಸಾಲದಲ್ಲಿ ಶೇ.58 ರಷ್ಟು ಕಡಿತವಾಗಿದೆ. ಇದರಿಂದ ರೈತರಿಗೆ ತೊಂದರೆಯಾಗಿದೆ. ತಪ್ಪುಗ್ರಹಿಕೆಯಿಂದ ಈ ಲೋಪವಾಗಿದ್ದು, ಅದನ್ನು ಕೇಂದ್ರ ಸಹಕಾರಿ ಸಚಿವ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡುತ್ತೇನೆ ಎಂದರು.
ಆರ್ಬಿಐ ನಿಯಮಾವಳಿ ಪ್ರಕಾರ ವಾಣಿಜ್ಯ ಬ್ಯಾಂಕ್ಗಳು ಆದ್ಯತೆಯ ವಲಯಕ್ಕೆ ಶೇ.17ರಷ್ಟು ಸಾಲ ನೀಡಬೇಕು. ಆದರೆ ಅಷ್ಟು ಅನುಷ್ಠಾನವಾಗುತ್ತಿಲ್ಲ.
ಹೆಚ್ಚುವರಿಯನ್ನು ನಬಾರ್ಡ್ಗೆ ನೀಡಲಾಗುತ್ತಿತ್ತು. ಅಲ್ಲಿಂದ ಇತರ ರಾಜ್ಯಗಳಿಗೆ ಸಾಲದ ಹಣ ಹಂಚಿಕೆಯಾಗುತ್ತಿತ್ತು. ಈ ಬಾರಿ ವಾಣಿಜ್ಯ ಬ್ಯಾಂಕ್ಗಳು ಚಿನ್ನಾಭರಣ ಸಾಲವನ್ನು ಕೃಷಿ ಸಾಲ ಎಂದು ತಪ್ಪು ಮಾಹಿತಿ ನೀಡಿವೆ. ಶೇ.17 ರಷ್ಟು ಹಾಗೂ ಶೇ.2.5 ರಷ್ಟು ಸೇರಿ ಕೃಷಿಸಾಲ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯಕ್ಕೆ ತಿಳಿಸಿವೆ. ಈ ತಪ್ಪು ಗ್ರಹಿಕೆಯಿಂದಾಗಿ ನಬಾರ್ಡ್ ರಾಜ್ಯಕ್ಕೆ ನೀಡಬೇಕಾದ ಕೃಷಿ ಸಾಲದ ಮೊತ್ತದಲ್ಲಿ ಕಡಿತ ಮಾಡಿದೆ.
ಅಮಿತ್ ಶಾ ಸಹಕಾರ ಕ್ಷೇತ್ರದಲ್ಲಿದ್ದಾರೆ, ಸಹಕಾರಿ ಸಚಿವರೂ ಆಗಿದ್ದಾರೆ. ಗುಜರಾತಿನ ಹಳ್ಳಿಯೊಂದರ ಸಹಕಾರ ಸಂಘದ ಅಧ್ಯಕ್ಷರು, ಅಹಮದಾಬಾದ್ ಜಿಲ್ಲಾ ಸಹಕಾರ ಬ್ಯಾಂಕ್ ಹಾಗೂ ಗುಜರಾತ್ ಅಫೆಕ್‌್ಸ ಬ್ಯಾಂಕ್ನ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕಿರು ಸಾಲ ಯೋಜನೆಯ ಸಮಸ್ಯೆಯ ಬಗ್ಗೆ ಚೆನ್ನಾಗಿ ಅರಿವಿದೆ. ರಾಜ್ಯಕ್ಕಾಗಿರುವ ಅನ್ಯಾಯದ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟರೆ ರಾಜ್ಯಕ್ಕೆ ಅನುಕೂಲವಾಗಬಹುದು ಎಂಬ ಕಾರಣಕ್ಕೆ ಅವರನ್ನು ಭೇಟಿ ಮಾಡುತ್ತೇನೆ ಎಂದರು.
ದೆಹಲಿಯ ಭೇಟಿ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಲು ಪ್ರಯತ್ನಿಸುತ್ತೇನೆ. ಮುಂದಿನ 2028ರ ವಿಧಾನಸಭಾ ಚುನಾವಣೆಯನ್ನು ನಾವು ಮತ್ತೆ ಗೆಲ್ಲಬೇಕು. ಆ ದೃಷ್ಟಿಯಿಂದ ಹಲವಾರು ಸಲಹೆಗಳನ್ನು ನೀಡಲು ಪ್ರಯತ್ನಿಸುತ್ತೇನೆ.
ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಯ ಸಮುದಾಯವನ್ನು ಬಿಟ್ಟು ಬೇರೆ ಜಾತಿಯ ನಾಯಕರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನನ್ನಾಗಿ ಮಾಡಬೇಕು. ವಿಧಾನಪರಿಷತ್ನ ನಾಮನಿರ್ದೇಶನಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆಯದೇ ಇರುವ ಜಾತಿಗಳಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ ಎಂದರು.
ತಾವು ಲೋಕಸಭೆ ಅಧಿವೇಶನದ ವೇಳೆ ದೆಹಲಿಗೆ ಭೇಟಿ ನೀಡಿದರೆ ಎಲ್ಲಾ ಸಚಿವರೂ ಲಭ್ಯವಾಗುತ್ತಾರೆ ಎಂದು ನಾನು ಮೊದಲೇ ನಿರ್ಧರಿಸಿಕೊಂಡಿದ್ದೆ. ಹೀಗಾಗಿ ಇಂದು ದೆಹಲಿಗೆ ಹೋಗುತ್ತಿದ್ದೇನೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ದೆಹಲಿಯಲ್ಲಿರುವುದು ಕಾಕತಾಳೀಯ ಎಂದು ಹೇಳಿದರು.