ಮೈಸೂರು,ಫೆ.14- ಉದಯಗಿರಿ ಪೊಲೀಸ್ ಠಾಣೆ ಮೇಲಿನ ದಾಳಿ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿಯನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ. ಸೋಮವಾರ ರಾತ್ರಿ ಉದಯಗಿರಿ ಪೊಲೀಸ್ ಠಾಣೆ ಮೇಲೆ ನಡೆದ ಕಲ್ಲುತೂರಾಟ ಪ್ರಕರಣದ ತನಿಖಾಧಿಕಾರಿಯಾಗಿದ್ದ ಸಿಸಿಬಿ ಎಸಿಪಿ ಸಂದೇಶ್ ಕುಮಾರ್ ಅವರನ್ನು ಎತ್ತಂಗಡಿ ಮಾಡಲಾಗಿದೆ.
ಸಂದೇಶ್ ಕುಮಾರ್ ಅವರ ಜಾಗಕ್ಕೆ ಸಿಐಡಿಯಲ್ಲಿದ್ದ ಮೊಹಮ್ಮದ್ ಶರೀಫ್ ರಾವುತರ್ ಅವರನ್ನು ಮೈಸೂರು ನಗರ ಸಿಸಿಬಿ ಎಸಿಪಿಯಾಗಿ ನೇಮಿಸಲಾಗಿದೆ. ಉದಯಗಿರಿ ಠಾಣೆ ಮೇಲಿನ ಕಲ್ಲುತೂರಾಟ ಪ್ರಕರಣದಲ್ಲಿ ಎಸಿಪಿ, ಇನ್ಸ್‌ಪೆಕ್ಟರ್ ಸೇರಿದಂತೆ 14 ಮಂದಿ ಪೊಲೀಸ್ ಸಿಬ್ಬಂದಿ ಸಹ ಗಾಯಗೊಂಡಿದ್ದರು.
ಈ ಪ್ರಕರಣದ ತನಿಖೆಯನ್ನು ಎಸಿಪಿ ಸಂದೇಶ್ ಕುಮಾರ್ ಅವರು ಕೈಗೊಂಡು ಈವರೆಗೂ ಹಲವರನ್ನು ಬಂಧಿಸಿದ್ದರು. ಈ ಪ್ರಕರಣದ ತನಿಖೆ ಇನ್ನು ನಡೆಯುತ್ತಿದ್ದಾಗಲೇ ಸಂದೇಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ವರ್ಗಾವಣೆಗೊಂಡಿರುವ ಎಸಿಪಿ ಸಂದೇಶ್ ಕುಮಾರ್ ಅವರಿಗೆ ಯಾವುದೇ ಸ್ಥಳವನ್ನು ತೋರಿಸಿಲ್ಲ. ಶಾಂತಮಲ್ಲಪ್ಪ ವರ್ಗಾವಣೆ: ಹಾಗೆಯೇ ಮೈಸೂರಿನ ದೇವರಾಜ ಉಪವಿಭಾಗದ ಎಸಿಪಿ ಯಾಗಿದ್ದ ಶಾಂತಮಲ್ಲಪ್ಪ ಅವರನ್ನು ವರ್ಗಾವಣೆಗೊಳಿಸ ಲಾಗಿದ್ದು ಅವರ ಸ್ಥಾನಕ್ಕೆ ರಾಜೇಂದ್ರ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.