ಬೆಂಗಳೂರು,ಜ.18- ರಾಜ್ಯದ ಮೂರು ಗಡಿ ಜಿಲ್ಲೆಗಳಲ್ಲಿ ನಡೆದಿರುವ ದರೋಡೆ ಪ್ರಕರಣಗಳಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಪೊಲೀಸರು ಎಲ್ಲಾ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ.ಈ ಮೂರು ದರೋಡೆ ಘಟನೆಗಳ ಹಿನ್ನೆಲೆಯಲ್ಲಿ ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಎಲ್ಲಾ ನಗರದ ಪೊಲೀಸ್ ಆಯುಕ್ತರು, ವಲಯದ ಐಜಿಪಿಗಳು ಹಾಗೂ ಎಲ್ಲಾ ಎಸ್ಪಿಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ.
ಪ್ರಮುಖವಾಗಿ ಬ್ಯಾಂಕ್ಗಳು, ಸಹಕಾರ ಸಂಘಗಳು, ಎಟಿಎಮ್ಗಳು ಸೇರಿದಂತೆ ಹಣಕಾಸು ವಹಿವಾಟು ನಡೆಸುವ ಸಂಸ್ಥೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಡಿಜಿಪಿ ಅಂಡ್ ಐಜಿ ಸೂಚಿಸಿದ್ದಾರೆ. ಹಣಕಾಸು ವಹಿವಾಟು ನಡೆಸುವ ಸಂಸ್ಥೆಗಳು, ಬ್ಯಾಂಕ್ಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಿರಬೇಕು ಅಲ್ಲದೆ ಶಸ್ತ್ರಸಜ್ಜಿತ ಸೆಕ್ಯೂರಿಟಿ ಗಾರ್ಡ್ಗಳನ್ನು ನೇಮಿಸಿರಬೇಕೆಂದು ತಾಕೀತು ಮಾಡಿದ್ದಾರೆ.
ಮುಖ್ಯವಾಗಿ ಎಟಿಎಮ್ಗಳಿಗೆ ಹಣ ತುಂಬಲು ಬರುವ ಏಜೆನ್ಸಿ ವಾಹನಗಳಲ್ಲಿ ಕಡ್ಡಾಯ ಶಸ್ತ್ರದಾರಿ ಸೆಕ್ಯೂರಿಟಿ ಗಾರ್ಡ್ಗಳನ್ನು ನಿಯೋಜಿಸಿರಬೇಕು, ಬ್ಯಾಂಕ್ಗಳ ಮುಂದೆ ಸೆಕ್ಯೂರಿಟಿ ಗಾರ್ಡ್ಗಳನ್ನು ನೇಮಿಸಿ ಮುಂದಾಗುವ ಘಟನೆಗಳಿಂದ ಎಚ್ಚೆತ್ತುಕೊಳ್ಳಬೇಕೆಂದು ಸೂಚಿಸಿದ್ದಾರೆ.
ಹೊರಗಿನಿಂದ ಬರುವ ವ್ಯಕ್ತಿಗಳ ಮೇಲೆ ನಿಗಾ ಇಡಬೇಕು, ಇಂತಹ ದರೋಡೆ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಎಸ್ಪಿಗಳು, ನಗರಗಳ ಆಯುಕ್ತರಗಳು, ಹಣಕಾಸು ವಹಿವಾಟು ನಡೆಸುವ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಚರ್ಚಿಸಬೇಕೆಂದು ಹೇಳಿದ್ದಾರೆ.
ಬೀದರ್ನಲ್ಲಿ ಮೊನ್ನೆ ಎಸ್ಬಿಐ ಕಚೇರಿ ಎದುರು ಎಟಿಎಮ್ಗೆ ಹಣ ತುಂಬಲು ಬಂದಿದ್ದ ಏಜೆನ್ಸಿ ವಾಹನದ ಸಿಬ್ಬಂದಿ ಮೇಲೆ ಹಾಡುಹಗಲೇ ದರೋಡೆಕೋರರು ಗುಂಡಿನ ದಾಳಿ ನಡೆಸಿ ಒಬ್ಬರನ್ನು ಹತ್ಯೆಮಾಡಿ, ಸಾರ್ವಜನಿಕರು ಹೆದರಿಕೊಳ್ಳುವಂತೆ ವಾತಾವರಣ ಸೃಷ್ಟಿಸಿ 93ಲಕ್ಷ ಹಣ ದೋಚಿಕೊಂಡು ಪರಾರಿಯಾಗಿರುವ ದರೋಡೆಕೋರರಿಗೆ ಶೋಧ ಮುಂದುವರೆಸಿದ್ದಾರೆ.
ವಿಜಯಪುರ:
ಇಲ್ಲಿನ ಕನಕದಾಸ ಬಡಾವಣೆಯ ಜೈನಾಪುರ ನಗರದಲ್ಲಿ ಸಂತೋಷ ಎಂಬುವರ ಮನೆಗೆ ನುಗ್ಗಿ ಚಾಕುವಿನಿಂದ ದಾಳಿ ಮಾಡಿ ದರೋಡೆ ನಡೆಸಿ ಪರಾರಿಯಾಗಿದ್ದಾಗ ಒಬ್ಬಾತ ಸಿಕ್ಕಿಬಿದ್ದಿದ್ದು, ಉಳಿದವರಿಗೆ ಶೋಧ ನಡೆಸುತ್ತಿದ್ದಾರೆ.
ಉಲ್ಲಾಳ:
ದಕ್ಷಿಣ ಕನ್ನಡ ಜಿಲ್ಲೆಯ ಉಲ್ಲಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕೋ ಅಪರೇಟಿವ್ ಬ್ಯಾಂಕ್ಬಳಿ ನಿನ್ನೆ ಮಧ್ಯಾಹ್ನ 1.20ರ ಸುಮಾರಿಗೆ ಕಾರಿನಲ್ಲಿ ಬಂದು ಮೂವರು ಒಳನುಗ್ಗಿ ಬಂದೂಕು ತೋರಿಸಿ ಸಿಬ್ಬಂದಿಯನ್ನು ಬೆದರಿಸಿ ನಗದು ಸೇರದಂತೆ 6ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಚೀಲದಲ್ಲಿ ತುಂಬಿಸಿಕೊಂಡು ಯಾವುದೇ ಭಯವಿಲ್ಲದಂತೆ ಪರಾರಿಯಾಗಿದ್ದಾರೆ.
ಹಾಡಹಗಲೇ ಹಣಕಾಸು ವ್ಯವಹಾರ ನಡೆಸುವ ಸಂಸ್ಥೆಗಳಲ್ಲಿ ದರೋಡೆಕೋರರು ನುಗ್ಗಿ ಭಯದ ವಾತಾವರಣ ಸೃಷ್ಟಿಸಿ ಹಣ-ಆಭರಣ ದರೋಡೆ ಮಾಡಿಕೊಂಡು ಹೋಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.