ಬೆಂಗಳೂರು, ಮೇ 15-ಹದಿನಾಲ್ಕು ವರ್ಷದ ಮೂಕ-ಕಿವುಡ ಬಾಲಕಿಯನ್ನು ಅಪಹರಿಸಿ ಭೀಕರವಾಗಿ ಕೊಲೆಮಾಡಿ ಪರಾರಿಯಗಿರುವ ಆರೋಪಿಗಳಿಗಾಗಿ ವಿಶೇಷ ತಂಡಗಳು ತೀವ್ರ ಶೋಧ ನಡೆಸುತ್ತಿವೆ.
ಹಂತಕರು ಇದುವರೆಗೂ ಪತ್ತೆಯಾಗಿಲ್ಲ, ಯಾರನ್ನೂ ಬಂಧಿಸಿಲ್ಲ, ಕೆಲವುಶಂಕಿತರನ್ನು ಕರೆತಂದು ವಿಚಾರಣೆ ನಡೆಸುತ್ತಿದ್ದೇವೆ. ಆರೋಪಿಗಳ ಬಂಧನಕ್ಕಾಗಿ ಐದು ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಸಂಜೆಗೆ ತಿಳಿಸಿದ್ದಾರೆ.
ಒಂದು ತಂಡ ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮರಾ ಪರಿಶೀಲಿಸುತ್ತಿದೆ, ಇನ್ನೊಂದು ತಂಡ ಹಳೆ ಆರೋಪಿಗಳ ಬಗ್ಗೆ ಮಾಹಿತಿಗಳನ್ನು ಪಡೆಯುತ್ತಿದೆ. ಮತ್ತೊಂದು ತಂಡ ರೌಡಿಗಳ ಬಗ್ಗೆ ಶಂಕೆ ವ್ಯಕ್ತಪಡಿಸಿ ತನಿಖೆ ಮುಂದುವರೆಸಿದೆ.
ಬಾಲಕಿ ಮನೆಗೆ ಭೇಟಿ: ಅಪ್ರಾಪ್ತ ಬಾಲಕಿ ಕೊಲೆಯಾಗಿರುವ ಸುದ್ದಿ ತಿಳಿದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಶಾಸಕ ಬಾಲಕೃಷ್ಣ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಹಾಗೂ ಇನ್ನಿತರ ಅಧಿಕಾರಿಗಳು ಬಾಲಕಿ ಮನೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿ ಧೈರ್ಯತುಂಬಿ ಬಂದಿದ್ದಾರೆ. ತಮ್ಮ ಮಗಳನ್ನು ದುಷ್ಕರ್ಮಿಗಳು ಅಪಹರಿಸಿ ಅತ್ಯಾಚಾರ ವೆಸಗಿ ಭೀಕರವಾಗಿ ಕೊಲೆಮಾಡಿದ್ದಾರೆಂದು ಬಾಲಕಿಯ ತಾಯಿ ಆರೋಪಿಸಿ ಕಣ್ಣೀರು ಹಾಕಿದ್ದಾರೆ.