Sunday, September 8, 2024
Homeಜಿಲ್ಲಾ ಸುದ್ದಿಗಳು | District Newsಹುಬ್ಬಳ್ಳಿಯಲ್ಲಿ ಸದ್ದು ಮಾಡಿದ ಪೊಲೀಸ್‌‍ ರಿವಾಲ್ವರ್‌, ಕಳ್ಳನ ಕಾಲಿಗೆ ಗುಂಡೇಟು

ಹುಬ್ಬಳ್ಳಿಯಲ್ಲಿ ಸದ್ದು ಮಾಡಿದ ಪೊಲೀಸ್‌‍ ರಿವಾಲ್ವರ್‌, ಕಳ್ಳನ ಕಾಲಿಗೆ ಗುಂಡೇಟು

ಹುಬ್ಬಳ್ಳಿ,ಜು.26– ಜ್ಯುವೆಲ್ಲರಿ ಮಳಿಗೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ ಉಳಿದ ಆರೋಪಿಗಳನ್ನು ಬಂಧಿಸಲು ಪ್ರಮುಖ ಆರೋಪಿಯನ್ನು ಕರೆದೊಯ್ದಾಗ ಪೊಲೀಸರ ಮೇಲೆಯೇ ಆತ ಹಲ್ಲೆ ನಡೆಸಿದಾಗ ಪೊಲೀಸರು ಹಾರಿಸಿದ ಗುಂಡು ಆರೋಪಿ ಕಾಲಿಗೆ ತಗುಲಿ ಗಾಯಗೊಂಡಿದ್ದಾನೆ.

ಇಲ್ಲಿನ ಕೇಶ್ವಾಪುರದ ರಮೇಶ ಭವನ ಬಳಿ ಚಿನ್ನಾಭರಣ ಮಳಿಗೆಯಲ್ಲಿ ಕಳ್ಳತನ ಮಾಡಿದ್ದ ಅಂತಾರಾಜ್ಯ ದರೋಡೆಕೋರನನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು.

ಗಾಮನಗಟ್ಟಿ ರಸ್ತೆ ತಾರಿಹಾಳ ಕ್ರಾಸ್‌‍ ಬಳಿ ದರೋಡೆಕೋರ ಇರುವ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಸಿಬ್ಬಂದಿಗಳೊಂದಿಗೆ ತೆರಳಿದ್ದಾಗ ಪೊಲೀಸರನ್ನು ಕಂಡು ಅವರ ಮೇಲೆಯೇ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಆ ವೇಳೆ ಪೊಲೀಸರು ಶರಣಾಗುವಂತೆ ಸೂಚಿಸಿ ಒಂದು ಸುತ್ತು ಗುಂಡು ಹಾರಿಸಿದರಾದರೂ ಪೊಲೀಸರ ಮಾತನ್ನು ಲೆಕ್ಕಿಸದೆ ಮತ್ತೆ ಹಲ್ಲೆಗೆ ಯತ್ನಿಸಿದಾಗ ಪೊಲೀಸರು ಹಾರಿಸಿದ ಗುಂಡು ಆರೋಪಿ ಕಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ. ಆರೋಪಿ ಮುಂಬೈ ಮೂಲದ ರ್ಹಾನ್‌ ಶೇಖ್‌ನನ್ನು ಸುತ್ತುವರೆದು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೇಶ್ವಾಪುರದ ರಮೇಶ ಭವನದ ಬಳಿಯಿರುವ ಭುವನೇಶ್ವರಿ ಜ್ಯುವೆಲ್ಲರಿ ಮಳಿಗೆಯಲ್ಲಿನ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾತ್ರಿ ಕೇಶ್ವಾಪುರ ಠಾಣೆ ಪೊಲೀಸರು ಆರೋಪಿ ರ್ಹಾನ್‌ ಶೇಖ್‌ನನ್ನು ವಶಕ್ಕೆ ಪಡೆದಿದ್ದರು.

ಇನ್ನುಳಿದ ಆರೋಪಿಗಳನ್ನು ವಶಕ್ಕೆ ಪಡೆಯುವ ಸಲುವಾಗಿ ಆರೋಪಿ ಜೊತೆಗೆ ಪೊಲೀಸರು ಇಂದು ಬೆಳಿಗ್ಗೆ ಗಾಮನಗಟ್ಟಿ ರಸ್ತೆ ತಾರಿಹಾಳ ಕ್ರಾಸ್‌‍ ಬಳಿ ತಪಾಸಣೆ ನಡೆಸುತ್ತಿದ್ದಾಗ ಉಳಿದ ಆರೋಪಿಗಳು ಬರುತ್ತಿದ್ದಂತೆ ರ್ಹಾನ್‌ ಶೇಖ್‌ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆ ವೇಳೆ ಗೋಕುಲ ಠಾಣೆಯ ಪಿಎಸ್‌‍ಐ ಕವಿತಾ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ, ನಂತರ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.

ಗಾಯಗೊಂಡ ರ್ಹಾನ್‌ನನ್ನು ಬಂಧಿಸಿ ಕಿಮ್ಸ್‌‍ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈತನ ವಿರುದ್ಧ ಹೈದರಾಬಾದ್‌, ಕಲಬುರಗಿ, ಅಹದ್‌ನಗರ, ಸೂರತ್‌ ಮತ್ತು ಮುಂಬೈನಲ್ಲಿ ಕೊಲೆ, ಡಕಾಯಿತಿ, ದರೋಡೆ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ.

RELATED ARTICLES

Latest News