ಬೆಳ್ತಂಗಡಿ,ಸೆ.19-ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಉಜಿರೆಯ ಅವರ ಮನೆಗೆ ಪೊಲೀಸರು ನೋಟೀಸ್ ಅಂಟಿಸಿದ್ದಾರೆ. ತಿಮರೋಡಿ ಅವರ ಮನೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಶೋಧ ನಡೆಸಿದ ವೇಳೆ ಮಾರಕಾಸ್ತ್ರಗಳು ಹಾಗೂ ಬಂಧೂಕು ಪತ್ತೆಯಾಗಿದ್ದವು. ಹಾಗಾಗಿ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸರು ನಿನ್ನೆ ತಿಮರೋಡಿ ಅವರ ಮನೆಗೆ ಮಹಜರು ನಡೆಸಲು ಹೋಗಿದ್ದರು.ಆದರೆ ಅವರು ಮನೆಯಲ್ಲಿ ಇರಲಿಲ್ಲ. ಹಾಗಾಗಿ ಇಂದು ಬೆಳಗ್ಗೆ 6 ಗಂಟೆ ಸುಮಾರಿನಲ್ಲಿ ಬೆಳ್ತಂಗಡಿ ಠಾಣೆ ಪೊಲೀಸರು ಮತ್ತೆ ಹೋದಾಗ ಅವರ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ, ಸೆ.21 ರಂದು ವಿಚಾರಣೆಗೆ ಹಾಜರಾಗಲು ತಿಮರೋಡಿ ಮನೆಯ ಗೋಡೆಗೆ ನೋಟೀಸ್ ಅಂಟಿಸಿ ತೆರಳಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ನ್ಯಾಯಾಲಯದಿಂದ ಶೋಧನಾ ವಾರೆಂಟ್ ಪಡೆದು ಸಿಬ್ಬಂದಿ ಹಾಗೂ ಸೋಕೋ ಅಧಿಕಾರಿಗಳು, ಎಸ್‌ಐಟಿ ತಂಡದ ಜೊತೆಗೆ ಉಜಿರೆ ಗ್ರಾಮದಲ್ಲಿರುವ ಮಹೇಶ್‌ಶೆಟ್ಟಿ ತಿಮರೋಡಿ ಮನೆಯಲ್ಲಿ ಆ. 26ರಂದು ಶೋಧ ನಡೆಸಿದ್ದರು.
ಆ ಸಂದರ್ಭದಲ್ಲಿ ತಿಮರೋಡಿ ಮನೆಯವರಿಗೆ ಸೇರಿದ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಹಾಗೂ 2 ತಲವಾರುಗಳು, 1 ಬಂದೂಕು ಸೇರಿ 44 ವಸ್ತುಗಳನ್ನು ಮಹಜರು ನಡೆಸಿ ಎಸ್‌ಐಟಿ ವಶಪಡಿಸಿಕೊಂಡಿದೆ.
ಈ ಬಗ್ಗೆ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಈ ಸಬಂಧ ಎಸ್‌ಐಟಿ ತನಿಖಾಧಿಕಾರಿ ಎಸ್‌ಪಿ ಸೈಮನ್ ಅವರು ಮುಂದಿನ ತನಿಖೆ ನಡೆಸಲು ತಿಮರೋಡಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಹೇಶ್ ತಿಮರೋಡಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣದ ವಿಚಾರಣೆಗಾಗಿ ಸೆ.21 ರಂದು ಹಾಜರಾಗಲು ಇದೀಗ ಪೊಲೀಸರು ಅವರಿಗೆ ನೋಟೀಸ್ ನೀಡಿದ್ದಾರೆ.