ಬೆಂಗಳೂರು, ಸೆ.4- ಈಶಾನ್ಯ ವಿಭಾಗದ ಪೊಲೀಸರು ನಗರದ ಒಟ್ಟು ಏಳು ಕಡೆಗಳಲ್ಲಿ ವಿದೇಶಿಯರು ವಾಸವಿರುವ ಸ್ಥಳಗಳ ಮೇಲೆ ದಾಳಿ ಮಾಡಿ, ಒಂಭತ್ತು ಮಂದಿ ವಿದೇಶಿಯರನ್ನು ವಶಕ್ಕೆ ಪಡೆದು 600 ಗ್ರಾಂ ಮಾದಕವಸ್ತು ಕೊಕೈನ್ ಅನ್ನು ವಶಪಡಿಸಿಕೊಂಡಿದ್ದಾರೆ. ಈ ಪೈಕಿ ಇಬ್ಬರು ವಿದೇಶಿಯರನ್ನು ಬಂಧಿಸಿ ಉಳಿದ ಏಳು ಮಂದಿಯನ್ನು ಡಿಟೆಕ್ಷನ್ ಸೆಂಟರ್‌ಗೆ ಕಳುಹಿಸಲಾಗಿದೆ. ಈ ಏಳು ಮಂದಿ ವೀಸಾ ಅವಧಿ ಮುಗಿದಿದ್ದರೂ ಸಹ ತಮ ದೇಶಕ್ಕೆ ಹಿಂದಿರುಗದೇ ಅನಧಿಕೃತವಾಗಿ ನಗರದಲ್ಲಿ ವಾಸವಾಗಿದ್ದರು.
ಇತ್ತೀಚೆಗೆ ಯಲಹಂಕ ಉಪನಗರ ಠಾಣೆ ಪೊಲೀಸರು ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಿ 700 ಗ್ರಾಂ ಎಂಡಿಎಂಎ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಈ ಪ್ರಕರಣದ ತನಿಖೆಯ ಮುಂದುವರಿದ ಭಾಗವಾಗಿ ನಿನ್ನೆ ಬೆಳಿಗ್ಗೆಯಿಂದ ರಾತ್ರಿಯವರೆಗೂ ಈಶಾನ್ಯ ವಿಭಾಗದ ಡಿಸಿಪಿ ಸಜೀತ್ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ಸಂಜಯನಗರ ಹಾಗೂ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ ಒಬ್ಬರು ವಿದೇಶಿ ಪ್ರಜೆಗಳು ವಾಸವಾಗಿದ್ದ ಮನೆಗಳ ಮೇಲೆ ದಾಳಿ ಮಾಡಿ 600 ಗ್ರಾಂ ಕೊಕೈನ್ ವಶಪಡಿಸಿಕೊಂಡು ಅವರನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಳ್ಳಲಾಗಿದೆ.