ಬೆಂಗಳೂರು,ನ.1-ನಗರದ ಹೊರವಲಯದ ರೆಸಾರ್ಟ್‌ಗಳಲ್ಲಿ ಆಗಾಗ್ಗೆ ರೇವ್ ಪಾರ್ಟಿಗಳು ನಡೆಯುತ್ತಿದ್ದು, ಇಂದು ಬೆಳಗಿನ ಜಾವ ಕನಕಪುರ ರಸ್ತೆಯ ಖಾಸಗಿ ರೆಸಾರ್ಟ್‌ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಅಡ್ಡೆ ಮೇಲೆ ದಾಳಿ ಮಾಡಿದ ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸರು 115 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಸುಹಾಸ್ ಗೌಡ ಎಂಬುವವರಿಗೆ ಸೇರಿದ ಅಯಾನಾ ರೆಸಾರ್ಟ್‌ನಲ್ಲಿ ಅವಧಿಗೂ ಮೀರಿ ಪಾರ್ಟಿ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಬೆಂಗಳೂರು ದಕ್ಷಿಣ ಜಿಲ್ಲಾ ಎಸ್‌ಪಿ ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಪೊಲೀಸರು ಇಂದು ಬೆಳಗಿನ ಜಾವ 3 ಗಂಟೆ ಸುಮಾರಿನಲ್ಲಿ ರೆಸಾರ್ಟ್ ಮೇಲೆ ದಾಳಿ ಮಾಡಿ 35 ಯುವತಿಯರು ಸೇರಿದಂತೆ ಒಟ್ಟು 115 ಮಂದಿಯನ್ನು ವಶಕ್ಕೆ ಪಡೆದು ಅವರೆಲ್ಲರನ್ನೂ ಬೆಂಗಳೂರು ದಕ್ಷಿಣ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಪೊಲೀಸರ ವಶದಲ್ಲಿರುವವರೆಲ್ಲರೂ ಬೆಂಗಳೂರು ಮೂಲದವರೆಂದು ತಿಳಿದು ಬಂದಿದೆ. ಈ ಪಾರ್ಟಿಯಲ್ಲಿ ಮಾದಕ ವಸ್ತುಗಳ ಬಳಕೆ ಮಾಡಲಾಗಿದೆಯೇ ಎಂಬ ಬಗ್ಗೆ ಪೊಲೀಸರು ರೆಸಾರ್ಟ್‌ನ್ನು ಪರಿಶೀಲಿಸುತ್ತಿದ್ದಾರೆ.ವೈದ್ಯಕೀಯ ಪರೀಕ್ಷೆ ವರದಿ ಬಂದ ನಂತರವಷ್ಟೇ ಈ ಪಾರ್ಟಿಯಲ್ಲಿ ಭಾಗವಹಿಸಿದ್ದವರು ಮಾದಕ ವಸ್ತು ಸೇವಿಸಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಲಿದೆ.
ರೆಸಾರ್ಟ್ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಮಾಧ್ಯಮದವರು ಚಿತ್ರೀಕರಣ ಮಾಡಲು ಯತ್ನಿಸಿದಾಗ ಪೊಲೀಸರು ಚಿತ್ರೀಕರಣ ಮಾಡದಂತೆ ತಡೆ ಹಿಡಿದಿದ್ದಾರೆ. ಈ ಬಗ್ಗೆ ಕಗ್ಗಲೀಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಇತ್ತೀಚೆಗೆ ಆನೇಕಲ್ ಬಳಿಯ ಖಾಸಗಿ ರೆಸಾರ್ಟ್ ಹಾಗೂ ದೇವನಹಳ್ಳಿ ಬಳಿಯ ಫಾರ್ಮ್ ಹೌಸ್‌ನಲ್ಲಿ ರೇವ್ ಪಾರ್ಟಿ ನಡೆಯುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿ ಹಲವರನ್ನು ವಶಕ್ಕೆ ಪಡೆದಿದ್ದರು. ಈ ಘಟನೆ ಮಾಸುವ ಮುನ್ನವೇ ಇಂದು ಬೆಳಗಿನ ಜಾವ ಈ ದಾಳಿ ನಡೆದಿದೆ.
