ಬೆಂಗಳೂರು, ಜೂ.16- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಕರಾಳತೆ ಬಗೆದಷ್ಟೂ ಬಯಲಾಗುತ್ತಿದೆ. ರೇಣುಕಾಸ್ವಾಮಿಯನ್ನು ಭೀಕರವಾಗಿ ಹತ್ಯೆ ಮಾಡಿರುವುದಲ್ಲದೆ, ಕರೆಂಟ್ ಶಾಕ್ ಕೊಟ್ಟು ಚಿತ್ರವಿಚಿತ್ರವಾಗಿ ಹಿಂಸೆ ಕೊಟ್ಟಿರುವ ಎಲೆಕ್ಟ್ರಾನಿಕ್ ಉಪಕರಣಕ್ಕಾಗಿ ವಿಜಯನಗರ ಉಪವಿಭಾಗದ ಪೊಲೀಸರು ಬೆಂಗಳೂರು-ಮೈಸೂರು ರಸ್ತೆಯಲ್ಲಿ ಶೋಧ ನಡೆಸುತ್ತಿದ್ದಾರೆ.
ಹತ್ಯೆ ಮಾಡಿದ ನಂತರ ರೇಣುಕಾಸ್ವಾಮಿಯ ಶವ ಸಾಗಿಸುವ ಮುನ್ನ ನಟ ದರ್ಶನ್ ಭೇಟಿಗೆ ಹೋಗಿದ್ದ ಆರೋಪಿಗಳು ಈ ಸಂದರ್ಭದಲ್ಲಿ ಕರೆಂಟ್ ಶಾಕ್ ಕೊಡಲು ಬಳಸಿದ್ದ ಎಲೆಕ್ಟ್ರಾನಿಕ್ ಮೆಗ್ಗರ್ ಅನ್ನು ಬೆಂಗಳೂರು-ಮೈಸೂರು ರಸ್ತೆಯಲ್ಲಿ ಬಿಸಾಡಿದರೆಂದು ತನಿಖೆಯಿಂದ ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಆ ಹೆದ್ದಾರಿಯಲ್ಲಿ ಪೊಲೀಸರು ಎಲೆಕ್ಟ್ರಾನಿಕ್ ಉಪಕರಣಕ್ಕಾಗಿ ಶೋಧ ನಡೆಸುತ್ತಿದ್ದಾರೆ.ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆತಂದು ಮನಬಂದಂತೆ ಥಳಿಸಿ, ಮರ್ಮಾಂಗಕ್ಕೂ ಕಾಲಿನಿಂದ ಒದ್ದಿರುವುದಲ್ಲದೆ, ಕರೆಂಟ್ ಶಾಕ್ ಕೊಡಲಾಗಿದೆ. ಅಲ್ಲದೆ, ದೇಹದ ಐದಾರು ಭಾಗಗಳಿಗೂ ಸಹ ಕರೆಂಟ್ ಶಾಕ್ ಕೊಟ್ಟು ಹಿಂಸೆ ನೀಡಲಾಗಿದೆ.
ರೇಣುಕಾಸ್ವಾಮಿ ಮೈಮೇಲಿದ್ದ ಚಿನ್ನಾಭರಣ ಕಾಣೆಯಾಗಿದ್ದು, ಆರೋಪಿಗಳು ಅದನ್ನು ದೋಚಿರುವ ಶಂಕೆ ಇದೆ.ಶವದ ಮೇಲಿದ್ದ ಬಟ್ಟೆ ತೆಗೆದು, ಬೇರೆ ಬಟ್ಟೆ ಹಾಕಿ ಶವವನ್ನು ಬಿಸಾಡಿ ಕೆಲವು ಆರೋಪಿಗಳು ಚಿತ್ರದುರ್ಗಕ್ಕೆ, ಮತ್ತೆ ಕೆಲವು ಆರೋಪಿಗಳು ಮೈಸೂರಿಗೆ ತೆರಳಿದ್ದರು ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಈ ಪ್ರಕರಣ ಸಂಬಂಧ ಈಗಾಗಲೇ ನಟ ದರ್ಶನ್ ಸೇರಿದಂತೆ 16 ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ.