ಬೆಂಗಳೂರು,ಸೆ.25– ನಗರದಲ್ಲಿ ನಡೆದ ಮಹಾಲಕ್ಷ್ಮಿ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಮೂರ್ನಾಲ್ಕು ಮಂದಿ ವಿಚಾರಣೆ ಬಳಿಕ ಮಹತ್ವದ ಮಾಹಿತಿಗಳು ದೊರೆತಿದ್ದು, ಆರೋಪಿಯ ಬಂಧನಕ್ಕೆ ಒಡಿಸ್ಸಾ ಸೇರಿದಂತೆ ಹಲವು ಕಡೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾದ ವ್ಯಕ್ತಿ ಒಡಿಸ್ಸಾದಲ್ಲಿರುವ ಮಾಹಿತಿ ಇದ್ದು, ಆತನನ್ನು ಬಂಧಿಸಲು ನಾಲ್ಕು ತಂಡಗಳನ್ನು ಕಳುಹಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಎರಡು-ಮೂರು ಮಂದಿಯನ್ನು ವಶಕ್ಕೆ ಪಡೆಯಲು ವಿಚಾರಣೆ ನಡೆಸಲಾಗಿತ್ತು. ಅವರು ನೀಡಿದ ಮಾಹಿತಿಯ ಆಧಾರದ ಮೇಲೆ ಒಡಿಸ್ಸಾದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾದ ವ್ಯಕ್ತಿಯೇ ಕೊಲೆ ಮಾಡಿರಬಹುದು ಎಂಬ ಅನುಮಾನ ಬಂದಿದೆ. ಹೀಗಾಗಿ ಆತನನ್ನು ಬಂಧಿಸಲು ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ ಎಂದು ತಿಳಿಸಿದರು.