Thursday, December 19, 2024
Homeರಾಜ್ಯಹೊಸ ವರ್ಷಾಚರಣೆಗೆ ಪೊಲೀಸ್ ಸರ್ಪಗಾವಲು, ಸಿಸಿ ಕ್ಯಾಮೆರಾ ಕಣ್ಗಾವಲು

ಹೊಸ ವರ್ಷಾಚರಣೆಗೆ ಪೊಲೀಸ್ ಸರ್ಪಗಾವಲು, ಸಿಸಿ ಕ್ಯಾಮೆರಾ ಕಣ್ಗಾವಲು

Police Security for New Year's Celebrations, CCTV camera surveillance for CCTV Surveillance

ಬೆಂಗಳೂರು, ಡಿ.6– ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಗರದಲ್ಲಿ ನಡೆಯದಂತೆ ಇಂದಿನಿಂದ ಸೂಕ್ತ ಬಂದೋಬಸ್ತ್ ಯೋಜನೆ ರೂಪಿಸಿ ಎಂದು ನಗರ ಪೊಲೀಸ್ ಆಯುಕ್ತರಾದ ದಯಾನಂದ ಅವರು ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಆದೇಶಿಸಿದ್ದಾರೆ.

ಆಡುಗೋಡಿಯ ನಗರ ಶಸ್ತ್ರಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ನಡೆದ ಮಾಸಿಕ ಕವಾಯತಿನಲ್ಲಿ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಹೊಸ ವರ್ಷ ಬರುತ್ತಿದೆ. ಹಾಗಾಗಿ ಈಗಿನಿಂದಲೇ ಬಂದೋಬಸ್ತ್ ಸೇರಿದಂತೆ ವಿವಿಧ ಕಾರ್ಯಗಳನ್ನು ಕೈಗೊಳ್ಳಬೇಕಿದೆ.
ಕಳೆದ ವರ್ಷವೂ ಸಹ ಸುಸೂತ್ರವಾಗಿ ಹೊಸ ವರ್ಷಾಚರಣೆಗೆ ಸಿದ್ದತೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಆದಂತಹ ಸಣ್ಣ-ಪುಟ್ಟ ವೈಫಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ವರ್ಷ ಅಂತಹ ಯಾವುದೇ ಸಮಸ್ಯೆಗಳಾಗದಂತೆ ಸುಸೂತ್ರವಾಗಿ ನಿಭಾಯಿಸಬೇಕೆಂದು ಅವರು ಸಲಹೆ ಮಾಡಿದರು.

ನಗರದ ಯಾವ ಯಾವ ಸ್ಥಳಗಳಲ್ಲಿ ಹೊಸ ವರ್ಷಾಚರಣೆಗೆ ಜನದಟ್ಟಣೆ ಇರುತ್ತದೆಯೋ ಅಂತಹ ಕಡೆಗಳಲ್ಲಿ ಸಿಸಿ ಕ್ಯಾಮೆರಾ ಹಾಗೂ ಲೈಟ್ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಲು ಅಧಿಕಾರಿ ಮತ್ತು ಸಿಬ್ಬಂದಿಗಳು ಚರ್ಚಿಸಿ ಯೋಜನೆ ರೂಪಿಸಬೇಕು. ಆ ಮೂಲಕ ಅಪರಾಧಗಳನ್ನು ತಡೆಗಟ್ಟಬಹುದಾಗಿದೆ. ಬಾರ್ ಅಂಡ್ ರೆಸ್ಟೋರೆಂಟ್, ಪಬ್ ಮಾಲೀಕರ ಜೊತೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಚರ್ಚಿಸಿ ಸಲಹೆ-ಸೂಚನೆ ನೀಡಬೇಕೆಂದು ತಿಳಿಸಿದರು.

ಪೊಲೀಸರಿಗೆ ಪ್ರಶಂಸೆ:
ನಗರದ ಅಧಿಕಾರಿ ಮತ್ತು ಸಿಬ್ಬಂದಿಗಳು ತಮ ಕರ್ತವ್ಯದಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಸಾರ್ವಜನಿಕರ ಮೆಚ್ಚುಗೆಗೆ ಭಾಜನರಾಗಿದ್ದು, ಲೋಕಸ್ಪಂದನೆ ಉತ್ತಮವಾಗಿದೆ. ಅದೇ ರೀತಿ ಠಾಣೆಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಸಮಸ್ಯೆ ಆಲಿಸಿರುವುದಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ ಎಂದು ಅವರು ಹೇಳಿದರು.

ಕಳೆದ ಒಂದೂವರೆ ವರ್ಷದಿಂದಲೂ ನಗರ ಪೊಲೀಸರು ಅಪರಾಧ ತಡೆ, ಪ್ರಕರಣಗಳ ಪತ್ತೆ, ಸಂಚಾರ ನಿಯಂತ್ರಣ ಸೇರಿದಂತೆ ಎಲ್ಲಾ ಘಟಕಗಳ ಸಿಬ್ಬಂದಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಚುನಾವಣೆ ಹಾಗೂ ಇತರೆ ಬಂದೋಬಸ್ತ್ ಕಾರ್ಯದಲ್ಲಿ ನಗರ ಪೊಲೀಸರು ಜವಾಬ್ದಾರಿಯುತವಾಗಿ ಕರ್ತವ್ಯ ನಿಭಾಯಿಸಿರುವುದರಿಂದ ಜನಮನ್ನಣೆಗೆ ಪಾತ್ರರಾಗಿದ್ದಾರೆ ಎಂದರು. ಇತ್ತೀಚೆಗೆ ದೆಹಲಿಯಲ್ಲಿ ಪ್ರಧಾನಿಯವರ ನೇತೃತ್ವದಲ್ಲಿ ನಡೆದ ಡಿಜಿಪಿ ಅಂಡ್ ಐಜಿ ಅವರ ಸಭೆಯಲ್ಲಿ ನಗರ ಪೊಲೀಸರ ಕಾರ್ಯ ವೈಖರಿ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.

ನಾವು ಅಳವಡಿಸಿಕೊಂಡಿರುವ ತಂತ್ರಜ್ಞಾನ ಹಾಗೂ ಸಂಚಾರ ನಿರ್ವಹಣೆ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿರುವುದು ಪ್ರಶಂಸನೀಯ ಎಂದು ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಶ್ಲಾಘಿಸಿದರು.
ಉತ್ತಮ ಕರ್ತವ್ಯ ನಿರ್ವಹಿಸಿ ಪ್ರಶಂಸೆಗೆ ಪಾತ್ರರಾದ ಅಧಿಕಾರಿ ಹಾಗೂ ಸಿಬ್ಬಂದಿ ಬೇರೆಯವರಿಗೂ ಸ್ಪೂರ್ತಿಯಾಗಬೇಕು.

ವೈಯಕ್ತಿಕ ಕೆಲಸಕಾರ್ಯಗಳ ಶ್ರದ್ಧೆ ನಿಷ್ಠೆಯಿಂದ ನಿಭಾಯಿಸಬೇಕು. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳ ಬಗ್ಗೆ ಉತ್ತಮ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅವರ ಕರ್ತವ್ಯವನ್ನು ಕೊಂಡಾಡಿದ್ದಾರೆ. ಹಾಗೆಯೇ ಎಲ್ಲಾ ಸಿಬ್ಬಂದಿಯೂ ಸಹ ಅದೇ ರೀತಿ ಉತ್ತಮ ಹೆಸರು ಗಳಿಸಬೇಕೆಂದು ಆಯುಕ್ತರು ಕಿವಿಮಾತು ಹೇಳಿದರು.

ಹಳೆಯ ಡ್ರಗ್ ಪೆಡ್ಲರ್ಗಳು, ರೌಡಿ ಚಟುವಟಿಕೆವುಳ್ಳವರನ್ನು ಠಾಣೆಗೆ ಕರೆದು ವಿಚಾರಣೆ ಮಾಡುವಂತೆ ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಚಿಸಿದ್ದಾರೆ. ಇಂದಿನ ಪೊಲೀಸ್ ಆಯುಕ್ತರ ಸೇವಾ ಕವಾಯತಿನಲ್ಲಿ ಪೆರಡ್ ಕಮಾಂಡರ್ ಆಗಿ ಈಶಾನ್ಯ ವಿಭಾಗದ ಡಿಸಿಪಿ ಸಜಿತ್ ಅವರು ಕರ್ತವ್ಯ ನಿರ್ವಹಿಸಿದರು.

RELATED ARTICLES

Latest News