ಬೆಂಗಳೂರು,ಆ.1- ಹಣಕ್ಕಾಗಿ ಸಹಾಯಕ ಪ್ರಾಧ್ಯಾಪಕರೊಬ್ಬರ ಪುತ್ರನನ್ನು ಅಪಹರಿಸಿ ಕುತ್ತಿಗೆ ಕುಯ್ದು ಕೊಲೆ ಮಾಡಿ ಮೃತದೇಹಕ್ಕೆ ಬೆಂಕಿ ಹಚ್ಚಿ ಸುಟ್ಟು ಪರಾರಿಯಾಗಿದ್ದ ಇಬ್ಬರು ಆರೋಪಿಗಳು ಹುಳಿಮಾವು ಠಾಣೆ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಸಿಕ್ಕಿಬಿದ್ದಿದ್ದಾರೆ. ವೀವರ್‌ರಸ ಕಾಲೋನಿ ನಿವಾಸಿ, ಕಾರು ಚಾಲಕ ಗುರುಮೂರ್ತಿ (25) ಮತ್ತು ತಾವರೆಕೆರೆ ನಿವಾಸಿ ಗೋಪಾಲ (27) ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊಲೆ ಆರೋಪಿಗಳು.
ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಕೃತ್ಯ ನಡೆದ 48 ಗಂಟೆ ಯೊಳಗೆ ಇಬ್ಬರು ಕೊಲೆ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಘಟನೆ ವಿವರ:ಅರಕೆರೆಯ ವಿಜಯಾಬ್ಯಾಂಕ್ ಕಾಲೋನಿ ನಿವಾಸಿ, ಬನ್ನೇರುಘಟ್ಟ ರಸ್ತೆ ಸಮೀಪದ ಖಾಸಗಿ ಎಂಜಿನಿಯರಿಂಗ್ ಕಾಲೇಜ್‌ವೊಂದರ ಉಪನ್ಯಾಸಕರಾದ ಅಚ್ಯುತ್ ಅವರ ಪುತ್ರ ನಿಶ್ಚಿತ್ (13) ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಸಂಜೆ 5 ಗಂಟೆಗೆ ಅರಕೆರೆಯ 80 ಅಡಿ ರಸ್ತೆಯಲ್ಲಿರುವ ಟ್ಯೂಷನ್‌ಗೆ ಹೋಗಿ ಸಂಜೆ 7.30 ರ ಸುಮಾರಿಗೆ ಮನೆಗೆ ಹಿಂದಿರುಗುತ್ತಿದ್ದನು.
ಅದರಂತೆ ಮೊನ್ನೆ ಟ್ಯೂಷನ್‌ಗೆ ಹೋಗಿ ರಾತ್ರಿಯಾದರೂ ಮಗ ಮನೆಗೆ ಬಾರದಿದ್ದಾಗ ಆತಂಕಗೊಂಡ ಪೋಷಕರು ಟ್ಯೂಷನ್ ಟೀಚರ್‌ಗೆ ಮೊಬೈಲ್ ಕರೆ ಮಾಡಿ ವಿಚಾರಿಸಿದಾಗ ಟ್ಯೂಷನ್ ಮುಗಿಸಿಕೊಂಡು ಆತ ಮನೆಗೆ ಹೋದನೆಂದು ತಿಳಿಸಿದ್ದರಿಂದ ಗಾಬರಿಯಾಗಿ ಎಲ್ಲಾಕಡೆ ಹುಡುಕಾಡಿದರೂ ಮಗನ ಸುಳಿವು ಸಿಕ್ಕಿಲ್ಲ.
ತಕ್ಷಣ ಹುಳಿಮಾವು ಠಾಣೆ ಪೊಲೀಸರಿಗೆ ತಂದೆ ದೂರು ನೀಡಿದ್ದಾರೆ. ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು.ಪ್ರಕರಣ ದಾಖಲಾಗುತ್ತಿದ್ದಂತೆ ಬಾಲಕನ ಭಾವಚಿತ್ರವನ್ನು ಎಲ್ಲಾ ಠಾಣೆಗಳಿಗೆ ಇ-ಮೇಲ್ ಮೂಲಕ ಕಳುಹಿಸಿ ನಾಕಾಬಂದಿ ಮಾಡಿ ಕರ್ತವ್ಯನಿರತ ಸಿಬ್ಬಂದಿಗಳಿಗೆ ವಾಹನಗಳ ತಪಾಸಣೆಯ ಮೂಲಕ ಬಾಲಕನ ಪತ್ತೆಗೆ ಸೂಚಿಸಲಾಗಿತ್ತು.
ಅಲ್ಲದೇ ಕಂಟ್ರೋಲ್ ರೂಂ ಗೂ ಸಹ ಬಾಲಕನ ಚಹರೆಯ ವಿವರಗಳನ್ನು ನೀಡಿ ಎಲ್ಲಾ ಠಾಣೆಗಳಿಗೆ ಮಾಹಿತಿಯನ್ನು ರವಾನೆ ಮಾಡಿದ್ದರು.ಬಾಲಕನು ಸೈಕಲ್ ನಿಲ್ಲಿಸಿದ್ದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಬಾಲಕನ ಪತ್ತೆ ಕಾರ್ಯಾಕೈಗೊಂಡಿದ್ದರು.
ಈ ನಡುವೆಯೇ ನಿನ್ನೆ ಬೆಳಿಗ್ಗೆ 8 ಗಂಟೆ ಸುಮಾರಿನಲ್ಲಿ ತನ್ನ ಮಗನನ್ನು ಯಾರೋ ಅಪಹರಿಸಿರುವ ಬಗ್ಗೆ ವಾಟ್‌್ಸಅಪ್‌ಗೆ ಸಂದೇಶ ಕಳುಹಿಸಿ ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ಪೊಲೀಸರಿಗೆ ಬಾಲಕನ ತಂದೆ ತಿಳಿಸಿದ್ದಾರೆ.ನಾಲ್ಕು ತಂಡ ರಚನೆ: ಈ ಪ್ರಕರಣವನ್ನು ಅತೀ ಸೂಕ್ಷ್ಮ ಮತ್ತು ಗಂಭೀರವಾಗಿ ಪರಿಗಣಿಸಿದ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ನಾರಾಯಣ್ ಅವರು ವಾಟ್‌್ಸಅಪ್ ಸಂದೇಶ ಕಳುಹಿಸಿದ್ದ ಆರೋಪಿಗಳ ಮೊಬೈಲ್ ವಿವರಗಳನ್ನು ಪಡೆದುಕೊಂಡು ಆರೋಪಿಗಳ ಬಂಧನಕ್ಕೆ ನಾಲ್ಕು ತಂಡ ರಚಿಸಿ ತನಿಖೆ ಮುಂದುವರೆಸಿದ್ದರು.
ಆರೋಪಿಯ ಮೊಬೈಲ್‌ನ ಸಿಡಿಆರ್, ಐಪಿಡಿಆರ್ ಹಾಗೂ ಟವರ್ ಲೊಕೇಷನ್‌ಗಳನ್ನು ಪಡೆದುಕೊಂಡು ಈ ತಂಡಗಳು ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾಗ ನಿನ್ನೆ ಸಂಜೆ 5 ಗಂಟೆ ಸುಮಾರಿನಲ್ಲಿ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಬಿಲ್ವಾರದಹಳ್ಳಿಯ ದಟ್ಟ ಅರಣ್ಯದಲ್ಲಿ ಬಾಲಕನ ಶವ ಅರೆಬೆಂದ ಸ್ಥಿತಿಯಲ್ಲಿ ಬಿದ್ದಿರುವುದಾಗಿ ಮಾಹಿತಿ ದೊರೆತಿದೆ.ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ನಾರಾಯಣ್ ಸೇರಿದಂತೆ ಹಿರಿಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ನಾಪತ್ತೆಯಾಗಿರುವ ಬಾಲಕನ ಮೃತದೇಹವಿರಬಹುದೆಂದು ಅನುಮಾನ ವ್ಯಕ್ತಪಡಿಸಿ, ದೂರು ನೀಡಿದ್ದ ಬಾಲಕನ ಕುಟುಂಬದವರನ್ನು ಕರೆಸಿಕೊಂಡಿದ್ದಾರೆ.ಸ್ಥಳಕ್ಕೆ ಬಂದ ಕುಟುಂದವರು ಮೃತದೇಹದ ಮೈ ಮೇಲೆ ಇದ್ದ ಅರ್ಧ ಸುಟ್ಟ ಬಟ್ಟೆಗಳು, ಸೊಂಟದಲ್ಲಿರುವ ಬೆಳ್ಳಿಯ ದಾರವನ್ನು ನೋಡಿ ತಮ ಮಗ ನಿಶ್ಚಿತ್ ಎಂದು ಗುರುತಿಸಿ ಗೋಳಾಡಿದ್ದಾರೆ.
ದುಷ್ಕರ್ಮಿಗಳು ಬಾಲಕನ ತಾಯಿಗೆ ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟು, ನಂತರ ಚಾಕುವಿನಿಂದ ಬಾಲಕನ ಕುತ್ತಿಗೆ ಕುಯ್ದು ಕೊಲೆ ಮಾಡಿ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಬಾಲಕನ ಮೃತ ದೇಹಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಲು ಪ್ರಯತ್ನಿಸಿರುವುದಾಗಿ ತಿಳಿದು ಬಂದಿದೆ.
ಆರೋಪಿಗಳಿಗಾಗಿ ಶೋಧ:ಬಾಲಕನನ್ನು ಅಪಹರಿಸಿ ಕೊಲೆ ಮಾಡಿ ಬೆಂಕಿ ಹಚ್ಚಿ ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ಇನ್‌್ಸಪೆಕ್ಟರ್ ಕುಮಾರಸ್ವಾಮಿ, ಪಿಎಸ್‌ಐಗಳಾದ ಅರವಿಂದ ಕುಮಾರ್, ರವಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ.ಇಂದು ಬೆಳಗಿನ ಜಾವ ಆರೋಪಿಗಳು ಮೃತದೇಹ ದೊರೆತ ಬನ್ನೇರುಘಟ್ಟದ ಬಿಲ್ವಾರದಹಳ್ಳಿಯ ದಟ್ಟ ಅರಣ್ಯ ಪ್ರದೇಶದಲ್ಲಿಯೇ ಅಡಗಿ ಕುಳಿತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹುಳಿಮಾವು ಪೊಲೀಸ್ ಠಾಣೆ ಇನ್‌್ಸಪೆಕ್ಟರ್ ಕುಮಾರಸ್ವಾಮಿ ಮತ್ತು ಪಿಎಸ್‌ಐ ಅರವಿಂದ್ ಕುಮಾರ್ ಹಾಗೂ ಸಿಬ್ಬಂದಿಗಳು ಆರೋಪಿಗಳ ಬೆನ್ನಟ್ಟಿ ಸ್ಥಳಕ್ಕೆ ತೆರಳಿದ್ದಾರೆ.
ಪೊಲೀಸರನ್ನು ಕಂಡ ಇಬ್ಬರು ಆರೋಪಿಗಳು ಪೊಲೀಸರ ಮೇಲೆಯೇ ಮಾರಕಾಸ್ತ್ರಗಳಾದ ಚಾಕು ಮತ್ತು ಡ್ಯಾಗರ್‌ನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆ ಸಂದರ್ಭದಲ್ಲಿ ಪಿಎಸ್‌ಐ ಅರವಿಂದ್‌ಕುಮಾರ್ ಅವರು ತಮ ಸರ್ವಿಸ್ ಪಿಸ್ತೂಲಿನಿಂದ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಸಿದ್ದಾರೆ. ಪೊಲೀಸರ ಮಾತನ್ನು ಲೆಕ್ಕಿಸದೇ ಮತ್ತೆ ಹಲ್ಲೆಗೆ ಮುಂದಾದಾಗ ಪಿಎಸ್‌ಐ ಅವರು ಆತರಕ್ಷಣೆಗಾಗಿ ಹಾರಿಸಿದ ಗುಂಡುಗಳು ಆರೋಪಿ ಗುರುಮೂರ್ತಿಯ ಎಡ ಮತ್ತು ಬಲಗಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ.
ಅದೇ ರೀತಿ ಮತ್ತೊಬ್ಬ ಆರೋಪಿ ಗೋಪಾಲನನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾಗುತ್ತಿದ್ದಂತೆ ಆತನೂ ಸಹ ಡ್ಯಾಗರ್‌ನಿಂದ ಹಲ್ಲೆ ನಡೆಸಿದ್ದು ಆತ ರಕ್ಷಣೆಗಾಗಿ ಇನ್ಸ್ ಪೆಕ್ಟರ್ ಕುಮಾರಸ್ವಾಮಿ ಅವರು ಹಾರಿಸಿದ ಗುಂಡು ಆರೋಪಿ ಬಲಗಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ.
ತಕ್ಷಣ ಇಬ್ಬರು ಆರೋಪಿಗಳನ್ನು ಸುತ್ತುವರೆದು ವಶಕ್ಕೆ ಪಡೆದು ಜಯನಗರ ಜನರಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರ್ಯಾಚರಣೆ ವೇಳೆ ಗಾಯಗೊಂಡಿರುವ ಇನ್‌್ಸಪೆಕ್ಟರ್ ಕುಮಾರಸ್ವಾಮಿ ಹಾಗೂ ಪಿಎಸ್‌ಐ ಅರವಿಂದ್‌ಕುಮಾರ್ ಅವರೂ ಸಹ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿ ಗುರುಮೂರ್ತಿ ಸಹಾಯಕ ಪ್ರಾಧ್ಯಾಪಕರ ಮನೆಯಲ್ಲಿ ಈ ಹಿಂದೆ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಆ ವೇಳೆ ಬಾಲಕ ಹಾಗೂ ಆತನ ತಾಯಿಯನ್ನು ಪರಿಚಯಿಸಿಕೊಂಡು ಇವರ ಕುಟುಂಬದ ಹಿನ್ನೆಲೆಯನ್ನು ತಿಳಿದುಕೊಂಡಿದ್ದಾನೆ.
ಹೇಗಾದರೂ ಮಾಡಿ ಹಣ ಗಳಿಸುವ ದುರುದ್ದೇಶದಿಂದ ಮುಗ್ದ ಬಾಲಕನನ್ನು ಅಪಹರಣ ಮಾಡುವ ಸಂಚು ರೂಪಿಸಿ ಅದರಂತೆ ಮೊನ್ನೆ ಸಂಜೆ ಅಪಹರಿಸಿ ನಂತರ ಸಹಚರನೊಂದಿಗೆ ಸೇರಿಕೊಂಡು ಕೊಲೆ ಮಾಡಿದ್ದಾನೆ.
ಮಾಸ್ಟರ್ ಮೈಂಡ್ ಗುರುಮೂರ್ತಿ: ಬಾಲಕ ನಿಶ್ಚಿತ್ ಅಪಹರಣ ಮತ್ತು ಕೊಲೆ ಪ್ರಕರಣದ ಮಾಸ್ಟರ್ ಮೈಂಡ್ ಆರೋಪಿ ಗುರುಮೂರ್ತಿ ಎಂಬುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಗುರುಮೂರ್ತಿ ಬಾಲಕನ ಪೋಷಕರ ಸ್ಪೇರ್ ಕಾರು ಚಾಲಕನಾಗಿಯೂ ಕಾರ್ಯನಿರ್ವಹಿಸುತ್ತಿದ್ದನು.ಈ ಹಿಂದೆ ಬಾಲಕನ ಪೋಷಕರಿಗೆ ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ದುಷ್ಕರ್ಮಿಗಳು ನಂತರ ಹಣ ಪಡೆಯದೇ ಎರಡು -ಮೂರು ಭಾರಿ ಸತಾಯಿಸಿದ್ದರು.
ಬಾಲಕನ ಪೋಷಕರು ಹಣ ಸಂಗ್ರಹಿಸಿಟ್ಟುಕೊಂಡು ಪೊಲೀಸರ ತನಿಖೆಗೆ ಸಹಕರಿಸಿದ್ದರು. ಅಷ್ಟರಲ್ಲಾಗಲೇ ಬಾಲಕನ ಹತ್ಯೆ ನಡೆದಿರುವುದು ದುರ್ದೈವ.ಸೈಕೋ ಮನಸ್ಥಿತಿಯವರು: ಆರೋಪಿಗಳಿಬ್ಬರು ಸೈಕೋ ಮನಸ್ಥಿತಿ ಹೊಂದಿದ್ದರು ಎಂಬುವುದು ಗೊತ್ತಾಗಿದೆ. ಪ್ರಮುಖ ಆರೋಪಿ ಗುರುಮೂರ್ತಿ ವಿರುದ್ಧ ಪೋಕ್ಸೋ ಪ್ರಕರಣದ ಹಿನ್ನೆಲೆ ಇದೆ.
ನಿಖರ ಕಾರಣ ಸದ್ಯಕ್ಕೆ ನಿಗೂಢ:ಒಟ್ಟಾರೆ ಬಾಲಕ ನಿಶ್ಚಿತ್‌ನ ಅಪಹರಣ ಹಾಗೂ ಕೊಲೆಗೆ ನಿಖರ ಕಾರಣ ಏನೆಂಬುವುದು ಸಧ್ಯಕ್ಕೆ ನಿಗೂಢವಾಗಿದೆ. ಹಣಕ್ಕಾಗಿ ಬಾಲಕನನ್ನು ಕೊಲೆ ಮಾಡಲಾಗಿದೆಯೇ ಅಥವಾ ಬೇರೆ ಕಾರಣ ಇದೆಯೇ ಎಂಬ ಬಗ್ಗೆಯೂ ಪೊಲೀಸರು ಹಲವು ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.