Saturday, March 15, 2025
Homeಇದೀಗ ಬಂದ ಸುದ್ದಿಬೆಳ್ಳಂ ಬೆಳಗ್ಗೆ ಗರ್ಜಿಸಿದ ಪೊಲೀಸರ ರಿವಾಲ್ವರ್‌, ದರೋಡೆಕೋರರಿಗೆ ಗುಂಡೇಟು

ಬೆಳ್ಳಂ ಬೆಳಗ್ಗೆ ಗರ್ಜಿಸಿದ ಪೊಲೀಸರ ರಿವಾಲ್ವರ್‌, ದರೋಡೆಕೋರರಿಗೆ ಗುಂಡೇಟು

Police shoot at robbers in Hubballi

ಹುಬ್ಬಳ್ಳಿ,ಮಾ.15- ಬೆಳ್ಳಂಬೆಳಿಗ್ಗೆ ಪೊಲೀಸರ ರಿವಾಲ್ವರ್‌ ಸದ್ದು ಮಾಡಿದ್ದು ಇಬ್ಬರು ನಟೋರಿಯಸ್‌‍ ದರೋಡೆಕೋರರ ಮೇಲೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿರುವ ಅಂತಾರಾಜ್ಯ ದರೋಡೆಕೋರರಾದ ಇರ್ಷಾದ್‌ ಹಾಗೂ ಅಕ್ಬರ್‌ ಕಿಮ್ಸೌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ ಯವರ ಇಲ್ಲಿನ ನಿವಾಸದ ಬಳಿಯ ಮನೆಯೊಂದಕ್ಕೆ ನುಗ್ಗಿದ ದರೋಡೆಕೋರರು ಹಣ, ಆಭರಣ ದರೋಡೆ ಮಾಡಿ ಪರಾರಿಯಾಗಿದ್ದರು.

ಈ ದರೋಡೆ ಗ್ಯಾಂಗ್‌ ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಆಕ್ಟೀವ್‌ ಆಗಿರುವುದು ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಈ ದರೋಡೆಕೋರರ ನ್ನು ಟ್ರ್ಯಾಕ್‌ ಮಾಡಿದಾಗ ಶಿವಮೊಗ್ಗದಲ್ಲಿ ಇರುವುದು ಗೊತ್ತಾಗಿದೆ.ನಂತರ ಹುಬ್ಬಳ್ಳಿಯತ್ತ ಬರುತ್ತಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಯಿತು. ಅದರಂತೆ ಖಾಕಿ ಪಡೆ ಈ ದರೋಡೆಕೋರಿಗೆ ಬಲೆ ಬೀಸಿ ಕಾದು ಕುಳಿತಿತ್ತು.

ಅದರಂತೆ ಹುಬ್ಬಳ್ಳಿಯಲ್ಲಿ ಮಾರುತಿ ಎನ್ನುವವರ ಮೇಲೆ ಹಲ್ಲೆ ಮಾಡಿದ ಈ ತಂಡ ಬೈಕ್‌ ಕಸಿದುಕೊಂಡು ಪರಾರಿಯಾಗಿದ್ದರು. ದರೋಡೆಕೋರರು ಹುಬ್ಬಳ್ಳಿ ಹೊರವಲಯದ ದೇವರಗುಡಿಹಾಳ ಸಮೀಪದಲ್ಲಿ ಅಡಗಿಕುಳಿತಿರುವುದರ ಖಚಿತ ಮಾಹಿತಿ ಪಡೆದ ಸಬ್‌ ಅರ್ಬನ್‌ ಪೊಲೀಸ್‌‍ ಠಾಣೆ ಪಿಎಸ್‌‍ಐ ದೇವೀಂದ್ರ ಮಾವಿನಂಡಿ, ಸಿಬ್ಬಂದಿಗಳಾದ ಆನಂದ್‌ ಜಾವೋರ ಹಾಗೂ ಜ್ಞಾನೇಶ್ವರ ಮಾಂಗ ಅವರೊಂದಿಗೆ ಆರೋಪಿಗಳನ್ನು ಬಂಧಿಸಲು ತೆರಳಿದ್ದಾರೆ.

ನಗರದ ಹೊರವಲಯದ ತಾರಿಹಾಳ ಸಮೀಪದ ಗಾಮನಗಟ್ಟಿ ಬಳಿ ಇರುವುದನ್ನು ಪತ್ತೆಹಚ್ಚಿ ಇಂದು ಬೆಳಗಿನ ಜಾವ ಸುಮಾರು 3.30ರ ಸಂದರ್ಭದಲ್ಲಿ ಬಂಧಿಸಲು ತೆರಳಿದ್ದ ವೇಳೆ ಪೊಲೀಸರನ್ನು ಕಂಡು ಸಿಬ್ಬಂದಿ ಮೇಲೆ ಕಾರದಪುಡಿ ಎರಚಿ, ಆಯುಧಗಳಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ.

ಆ ವೇಳೆ ಪಿಎಸ್‌‍ಐರವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಸಿದ್ದಾರೆ. ಪೊಲೀಸರ ಮಾತಿಗೆ ಕಿವಿಗೊಡದೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದಾಗ ಆತ ರಕ್ಷಣೆಗಾಗಿ ಪೊಲೀಸರು ನಾಲ್ಕು ಬಾರಿ ಗುಂಡು ಹಾರಿಸಿದಾಗ ಇಬ್ಬರು ದರೋಡೆಕೋರರ ಕಾಲುಗಳಿಗೂ ತಾಗಿ ಕುಸಿದು ಬಿದ್ದಾಗ ತಕ್ಷಣ ಅವರನ್ನು ಸುತ್ತುವರಿದು, ವಶಕ್ಕೆ ಪಡೆದು ಚಿಕಿತ್ಸೆಗಾಗಿ ಕಿಮ್ಸೌ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಾರ್ಯಾಚರಣೆ ವೇಳೆ ಮೂವರು ಪೊಲೀಸ್‌‍ ಸಿಬ್ಬಂದಿಗೂ ಗಾಯವಾಗಿದ್ದು, ಅವರನ್ನೂ ಸಹ ಕಿಮ್ಸ್‌‍ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸುದ್ದಿ ತಿಳಿದು ಕಿಮ್ಸೌ ಆಸ್ಪತ್ರೆಗೆ ಪೊಲೀಸ್‌‍ ಕಮೀಷನರ್‌ ಎನ್‌.ಶಶಿಕುಮಾರ್‌ರವರು ಭೇಟಿ ನೀಡಿ ಪೊಲೀಸ್‌‍ ಸಿಬ್ಬಂದಿಯ ಆರೋಗ್ಯ ವಿಚಾರಿಸಿದ್ದಾರೆ.

ಇದೇ ತಿಂಗಳ 1 ರಂದು ಅಪಾರ್ಟೆಂಟ್‌ವೊಂದರಲ್ಲಿ ಸುಮಾರು 20 ಲಕ್ಷ ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿದ್ದವು. ಕಳ್ಳತನ ಮಾಡಿದ ದರೋಡೆಕೋರರ ಬಂಧನ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾದಾಗ ಗುಂಡು ಹಾರಿಸಲಾಯಿತು ಎಂದು ಪೊಲೀಸ್‌‍ ಕಮಿಷನರ್‌ ಎನ್‌.ಶಶಿಕುಮಾರ್‌ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಹಿಂದೆ ವಿದ್ಯಾಗಿರಿ, ಧಾರವಾಡ ಶಹರ, ಕೇಶ್ವಾಪುರ ಠಾಣೆ ವ್ಯಾಪ್ತಿಯಲ್ಲಿ ಇದೇ ಮಾದರಿಯಲ್ಲಿ ದರೋಡೆ ಪ್ರಕರಣ ನಡೆದಿರುವುದು ಕಂಡು ಬಂದಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಮುಂದಾದಾಗ ಈ ಗ್ಯಾಂಗ್‌ ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಆಕ್ಟೀವ್‌ ಆಗಿರುವುದು ಗೊತ್ತಾಯಿತು.

ಐಷಾರಾಮಿ ಕಾರಿನಲ್ಲಿ ದರೋಡೆಕೋರರು ಸುತ್ತಾಡಿ, ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಪ್ರಮುಖ ನಗರದಲ್ಲಿನ ಶ್ರೀಮಂತರು ಹೆಚ್ಚಾಗಿರುವ ಏರಿಯಾಗಳಲ್ಲಿ ಓಡಾಟ ಮಾಡಿ, ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಬಳಿಕ ಸಂಚು ರೂಪಿಸಿ ಮನೆಗಳ್ಳತನ ಮಾಡುತ್ತಿದ್ದರು ಎಂದು ಆಯುಕ್ತರು ಹೇಳಿದರು.ದರೋಡೆಕೋರರು ಕರ್ನಾಟಕವಲ್ಲದೆ ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ದರೋಡೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಚಾಲಾಕಿ ದರೋಡೆಕೋರರು :
ದರೋಡೆಕೋರರು ಯಾವುದೇ ಸಾಕ್ಷ್ಯ ಸಿಗಬಾರದು ಎಂದು ಕೃತ್ಯಕ್ಕೆ ಬಳಸಿದ್ದ ಹೈಫೈ ಕಾರುಗಳನ್ನೇ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.ಈ ದರೋಡೆಕೋರರು ಐಷಾರಾಮಿ ಜೀವನ ನಡೆಸುತ್ತಿದ್ದರಲ್ಲದೆ, ಉಳಿದುಕೊಳ್ಳಲು ಫೈವ್‌ಸ್ಟಾರ್‌ ಹೋಟೆಲ್‌ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದುದರಿಂದ ಇವರ ಬಂಧನ ಕಷ್ಟವಾಗಿತ್ತು.

ದರೋಡೆಗೆ ದೊಡ್ಡ ದೊಡ್ಡ ಕಾರುಗಳನ್ನೇ ಬಳಸುತ್ತಿದ್ದ ಈ ದರೋಡೆಕೋರರು, ಒಂದು ವೇಳೆ ಪೊಲೀಸರಿಗೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇದ್ದರೆ ತಾವು ಬಳಸಿದ್ದ ಐಷಾರಾಮಿ ಕಾರುಗಳನ್ನೇ ಸುಟ್ಟು ಹಾಕುತ್ತಿದ್ದರು ಎಂದು ದರೋಡೆಕೋರರ ಭಯಾನಕತೆಯನ್ನು ಆಯುಕ್ತರು ಬಿಚ್ಚಿಟ್ಟಿದ್ದಾರೆ. ಮತ್ತೊಬ್ಬ ಆರೋಪಿ ಸೆರೆ: ಪೊಲೀಸ್‌‍ ದಾಳಿ ವೇಳೆಯಲ್ಲಿ ಪರಾರಿಯಾಗಿದ್ದ ದರೋಡೆಕೋರ ಶಂಷಾದ್‌ ಕುರೇಶಿ ಜಾಡು ಬೆನ್ನು ಹತ್ತಿಹೊರಟ ಪೊಲೀಸರಿಗೆ ಕೆಲ ಹೊತ್ತಿನ ಬಳಿಕ ಆತನೂ ಸಹ ಸಿಕ್ಕಿದ್ದಾನೆ.

ಈತನನ್ನು ವಿಚಾರಣೆ ಮಾಡಿದಾಗ ಭಯಾನಕ ಸತ್ಯ ಹೊರ ಬಿದ್ದಿದೆ. ಆರೋಪಿಗಳು ತಮ ದರೋಡೆಗೆ ಬಳಸುತ್ತಿದ್ದ ಐಷಾರಾಮಿ ಕಾರ್‌ಅನ್ನು ಹುಬ್ಬಳ್ಳಿ ಹೈವೆ ಪಕ್ಕದಲ್ಲಿ ಸುಟ್ಟುಹಾಕಿದ್ದಾರೆ. ಅಲ್ಲದೆ ಸುಮಾರು 10 ರಿಂದ 15 ಸದಸ್ಯರು ಇರುವ ಈ ತಂಡ ಶೋಕಿ ಜೀವನ ನಡೆಸುತ್ತಿದೆ ಎಂಬುದು ಗೊತ್ತಾಗಿದೆ.

5ರಾಜ್ಯಕ್ಕೆ ಬೇಕಾಗಿದ್ದ ದರೋಡೆ ಕೋರರು
ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ ಖಾಕಿ ಗುಂಡು ಮತ್ತೆ ಸದ್ದು ಮಾಡಿದ್ದು, ಈ ಬಾರಿ ಪೊಲೀಸರು ಕುಖ್ಯಾತ ದರೋಡೆಕೋರಿಗೆ ಟಾರ್ಗೆಟ್‌ ಮಾಡಿದ್ದಾರೆ.ಕಳ್ಳತನ, ದರೋಡೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಆರೋಪಿಗಳು, ಕರ್ನಾಟಕ, ಆಂಧ್ರಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯದ ಪೊಲೀಸರಿಗೂ ಸಹ ಬೇಕಾಗಿದ್ದಾರೆ.
ಒಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸರು ಅಂತರ್‌ ರಾಜ್ಯಗಳಿಗೆ ಬೇಕಾಗಿದ್ದ ನಟೋರಿಯಸ್‌‍ ದರೋಡೆಕೋರರಿಗೆ ಹೆಡೆಮುರಿ ಕಟ್ಟಿದ್ದಾರೆ.

RELATED ARTICLES

Latest News