Tuesday, October 28, 2025
Homeರಾಜ್ಯರಾಜಕಾರಣಿಗಳನ್ನು ಓಲೈಸಲು ಪೊಲೀಸರು ವ್ಯಕ್ತಿತ್ವವನ್ನು ಬದಲಿಸಿಕೊಳ್ಳಬಾರದು : ಡಿಕೆಶಿ ಕಿವಿಮಾತು

ರಾಜಕಾರಣಿಗಳನ್ನು ಓಲೈಸಲು ಪೊಲೀಸರು ವ್ಯಕ್ತಿತ್ವವನ್ನು ಬದಲಿಸಿಕೊಳ್ಳಬಾರದು : ಡಿಕೆಶಿ ಕಿವಿಮಾತು

Police should not change their personalities to please politicians: DK Shivakumar's advice

ಬೆಂಗಳೂರು, ಅ.28- ಪೊಲೀಸ್‌‍ ಇಲಾಖೆ ತನ್ನ ಇತಿಹಾಸ ಮರೆತು ರಾಜಕಾರಣಿಗಳನ್ನು ಓಲೈಸಲು ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಬಾರದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೂಚನೆ ನೀಡಿದರು.

ವಿಧಾನಸೌಧದ ಬ್ಯಾಕ್ವೆಂಟ್‌ ಹಾಲ್‌ನಲ್ಲಿ ನಡೆದ ಪೀಕ್‌ ಕ್ಯಾಪ್‌ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪೊಲೀಸರಿಗೆ ಕೇಸರಿ ಬಟ್ಟೆ ಹಾಕಿಸಲಾಗಿತ್ತು. ಆ ಸಂದರ್ಭದಲ್ಲಿ ಯಾವ ಅಧಿಕಾರಿ ಇದ್ದರೋ ಗೊತ್ತಿಲ್ಲ. ಆದರೆ ರಾಜಕಾರಣಿಗಳನ್ನು ಓಲೈಸಲು ಪೊಲೀಸರು ತಮನ್ನು ತಾವು ಮಾರಿಕೊಂಡಂತೆ ವೇಷ ಬದಲಾಯಿಸಬಾರದು. ಪೊಲೀಸರು ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಜನರ ನಂಬಿಕೆ ಕಳೆದುಕೊಳ್ಳುತ್ತಾರೆ. ರಾಜ್ಯದಲ್ಲಿ ಅದಕ್ಕೆ ಅವಕಾಶವಿಲ್ಲ ಎಂದರು.

- Advertisement -

ಮನೆ ಮನೆಗೆ ಪೊಲೀಸ್‌‍ ವ್ಯವಸ್ಥೆ ಉತ್ತಮವಾಗಿದೆ. ಇದರಿಂದ ಅಪರಾಧ ತಡೆಯಲು ಅನುಕೂಲವಾಗುತ್ತದೆ. ತಮ ಮನೆಯ ಪಕ್ಕದಲ್ಲೇ ವಾಸವಿದ್ದ ಉದ್ಯಮಿ ಆದಿಕೇಶವಲು ಮನೆಯಲ್ಲಿ ಕಳ್ಳತನ ಮಾಡಿ, ಮಾರಾಟ ಮಾಡಿದ ಚಿನ್ನ 3 ವರ್ಷದ ಬಳಿಕ ಪತ್ತೆಯಾಗಿತ್ತು, ಆ ವರೆಗೂ ಆದಿಕೇಶವಲು ಅವರಿಗೆ ತಮ ಮನೆಯಲ್ಲಿ ಕಳ್ಳತನವಾಗಿರುವುದೇ ಗೊತ್ತಿರಲಿಲ್ಲ. ಪೊಲೀಸರು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವುದರಿಂದ ಇಂತಹ ಅಪರಾಧಗಳ ನಿಯಂತ್ರಣಕ್ಕೆ ಸಹಾಯವಾಗುತ್ತದೆ ಎಂದರು.

ಸಂಚಾರ ನಿರ್ವಹಣೆಗೆ ಕೃತಕ ಬುದ್ಧಿಮತ್ತೆ ಅಳವಡಿಸುತ್ತಿರುವುದು ಸ್ವಾಗತಾರ್ಹ. ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸ್ವಂತ ವಾಹನಗಳನ್ನು ಖರೀದಿಸಬೇಡಿ ಎಂದು ಹೇಳಲಾಗುವುದಿಲ್ಲ. ಸರ್ಕಾರ ಫೆರಿಫರಲ್‌ ರಿಂಗ್‌ ರಸ್ತೆ, ಸುರಂಗ ರಸ್ತೆಗಳನ್ನು ನಿರ್ಮಿಸುತ್ತಿದೆ. ಪೊಲೀಸರು ಸಂಚಾರ ನಿರ್ವಹಣೆಗೆ ಸಮರ್ಪಕವಾದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ನೀಡಬೇಕೆಂದು ಸೂಚಿಸಿದರು.

ಕರ್ನಾಟಕ ಮತ್ತು ತಮಿಳುನಾಡು ಪೊಲೀಸರಿಗೆ ರಾಷ್ಟ್ರಮಟ್ಟದಲ್ಲಿ ಉತ್ತಮ ಗೌರವವಿದೆ. ಇತ್ತೀಚೆಗೆ ತಾವು ದೆಹಲಿಯಲ್ಲಿ ಹಿರಿಯ ವಕೀಲರು ಹಾಗೂ ನ್ಯಾಯಾಂಗದ ಅಧಿಕಾರಿಗಳನ್ನು ಭೇಟಿ ಮಾಡಿದ ವೇಳೆ ಕರ್ನಾಟಕದಲ್ಲಿ ಕೆಳ ಪ್ರಕರಣಗಳ ತನಿಖೆಗೆ ಎಸ್‌‍ಐಟಿ ರಚಿಸಿದ ಕ್ರಮವನ್ನು ಪ್ರಶಂಸಿದ್ದಾರೆ. ಪೊಲೀಸರು ಉತ್ತಮ ಸಾಮರ್ಥ್ಯದಿಂದ ಕೆಲಸ ಮಾಡುತ್ತಿದ್ದಾರೆ. ನಮ ಪೊಲೀಸ್‌‍ ವ್ಯವಸ್ಥೆ ದಿನೇ ದಿನೇ ಉತ್ತಮಗೊಳ್ಳುತ್ತಿದೆ ಎಂದರು.

ಪೊಲೀಸರು ಸಮಾಜ ರಕ್ಷಕರು. ಇತ್ತೀಚೆಗೆ ಸೈಬರ್‌ ಕ್ರೈಂನಂತಹ ಹೊಸ ಹೊಸ ಅಪರಾಧಗಳು ಘಟಿಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಅಪರಾಧಗಳ ಬಗ್ಗೆಯೂ ಹೆಚ್ಚಿನ ಮಾಹಿತಿ ದೊರೆಯುತ್ತಿವೆ. ಪೊಲೀಸರ ಸವಾಲುಗಳು ಹೆಚ್ಚುತ್ತಿವೆ. ಇದಕ್ಕೆ ಪೂರಕವಾಗಿ ಕೆಳ ಹಂತದ ಸಿಬ್ಬಂದಿಗಳ ಸಾಮರ್ಥ್ಯ ಸುಧಾರಣೆಯಾಗಬೇಕೆಂದು ಹೇಳಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಮಾತನಾಡಿ, ರಾಜ್ಯದಲ್ಲಿ 16 ಸಾವಿರ ಪೊಲೀಸ್‌‍ ಕಾನ್ಸ್ ಟೆಬಲ್‌ಗಳ ಹುದ್ದೆ ಖಾಲಿ ಇದ್ದು, ಅವುಗಳಲ್ಲಿ 8500 ಹುದ್ದೆಗಳ ನೇಮಕಕ್ಕೆ ಒಂದು ವಾರದಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದರು.

ಪೊಲೀಸ್‌‍ ಸಿಬ್ಬಂದಿಗಳ ಪೀಕ್‌ಕ್ಯಾಪ್‌ ಬದಲಾವಣೆ ಐತಿಹಾಸಿಕ ನಿರ್ಧಾರವಾಗಿದ್ದು, ಇದು ತಮ ಅವಧಿಯಲ್ಲಿ ಕೈಗೊಂಡಿರುವುದು ಸಂತಸದ ವಿಚಾರ. ಲಂಡನ್‌, ಆಸ್ಟ್ರೇಲಿಯಾದಲ್ಲಿ ಸ್ಲೋಜ್‌ ಹ್ಯಾಟ್‌ ಧರಿಸಲಾಗುತ್ತಿತ್ತು. 1953ರಲ್ಲಿ ಭಾರತದ ಶಸಸ್ತ್ರ ಪಡೆಗಳಿಗೂ ಸ್ಲೋಜ್‌ ಹ್ಯಾಟ್‌ ನಿಗದಿಪಡಿಸಲಾಗಿತ್ತು.

ಸಾಮಾನ್ಯ ಸಿಂಬ್ಬಂದಿಗಳಿಗೆ ಟರ್ಬನ್‌ ಸುತ್ತಿಕೊಳ್ಳಲು ಅವಕಾಶ ನೀಡಲಾಗಿತ್ತು. 1973ರಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಸ್ಲೋಜ್‌ಕ್ಯಾಪ್‌ ಅನ್ನು ಜಾರಿಗೆ ತರಲಾಯಿತು. ಅಂದಿನಿಂದ ಇಂದಿನವರೆಗೂ ಯಾವುದೇ ಬದಲಾವಣೆಯಾಗಿಲ್ಲ ಎಂದರು.

ಸ್ಲೋಜ್‌ಕ್ಯಾಪ್‌ ಸುಂದರವಾಗಿಲ್ಲ, ಮಳೆ ಬಂದಾಗ ನೆಂದರೆ, ಅದರ ತೂಕ ಹೆಚ್ಚಾಗುತ್ತದೆ. ಧರಿಸಲು ಕಷ್ಟ ಎಂದು ಹೇಳಲಾಗುತ್ತಿದ್ದು, ಇಲಾಖೆಯಿಂದ ಸರ್ಕಾರಕ್ಕೆ ಹಲವಾರು ಬಾರಿ ಕ್ಯಾಪ್‌ ಬದಲಾವಣೆಗೆ ಪ್ರಸ್ತಾವನೆಯಿತ್ತು. ಇತ್ತೀಚೆಗೆ ನಡೆದ ಪೊಲೀಸ್‌‍ ಮಹಾ ಸಮಾವೇಶದಲ್ಲಿ ಬೇರೆ ಬೇರೆ ರಾಜ್ಯಗಳ ಟೋಪಿಗಳನ್ನು ಪ್ರದರ್ಶಿಸಲಾಗಿತ್ತು. ಅದರಲ್ಲಿ ಮುಖ್ಯಮಂತ್ರಿ ಅವರು ಪೀಕ್‌ ಕ್ಯಾಪ್‌ಗೆ ಅನುಮೋದನೆ ನೀಡಿದ್ದರು.

ಪೀಕ್‌ ಕ್ಯಾಪ್‌ ಧರಿಸುವುದರಿಂದ ಪೊಲೀಸರು ಸುಂದರವಾಗಿ ಕಾಣುತ್ತಾರೆ ಹಾಗೂ ಅವರ ಆತವಿಶ್ವಾಸವೂ ಹೆಚ್ಚಾಗುತ್ತದೆ ಎಂದರು.ಕರ್ನಾಟಕ ಪೊಲೀಸ್‌‍ ದೇಶದಲ್ಲೇ ಉತ್ತಮ ವ್ಯವಸ್ಥೆ ಎಂದು ಹೆಸರು ಗಳಿಸಿದೆ. ರಾಜ್ಯ ಸುರಕ್ಷಿತವಾಗಿದ್ದು, ಕಳೆದ ಎರಡೂವರೆ ವರ್ಷಗಳಲ್ಲಿ ಸಣ್ಣ-ಪುಟ್ಟ ಘಟನೆಗಳನ್ನು ಹೊರತು ಪಡಿಸಿ, ಕಾನೂನು ಸುವ್ಯವಸ್ಥೆ ಭಂಗವಾಗುವಂತಹ ಘಟನೆಯಾಗಿಲ್ಲ ಎಂದು ಸಮರ್ಥಿಸಿಕೊಂಡರು.

ಇನ್‌್ಸಪೆಕ್ಟರ್‌ ಮೇಲ್ಪಟ್ಟು ಎಸ್‌‍ಪಿಯವರೆಗಿನ ಹುದ್ದೆಗಳಿಗೆ ಕನಿಷ್ಠ ಎರಡು ವರ್ಷಗಳ ವರೆಗೂ ವರ್ಗಾವಣೆ ಮಾಡುವಂತ್ತಿಲ್ಲ ಎಂಬ ನಿಯಮ ರೂಪಿಸಿದ್ದೇವೆ.545 ಪಿಎಸ್‌‍ಐ ಹುದ್ದೆಗಳಿಗೆ ನೇಮಕಾತಿಯಾಗಿದ್ದು, ತರಬೇತಿ ನಡೆಯುತ್ತಿದೆ. 402 ಹುದ್ದೆಗಳಿಗೆ ನೇಮಕಾತಿ ಆದೇಶ ನೀಡಲಾಗುತ್ತಿದೆ ಎಂದು ವಿವರಿಸಿದರು.

ಪೊಲೀಸ್‌‍ ಗೃಹ ಯೋಜನೆಯಡಿ 15 ಸಾವಿರ ಕ್ವಾಟ್ರಸ್‌‍ಗಳನ್ನು ನಿರ್ಮಿಸಲಾಗಿದ್ದು, ಮುಂದಿನ 5 ವರ್ಷಗಳ ಕಾಲ ಈ ಯೋಜನೆಯನ್ನು ಮುಂದುವರೆಸಲಾಗಿದೆ. ಆರೋಗ್ಯ ತಪಾಸಣಾ ವೆಚ್ಚವವನ್ನು ಹೆಚ್ಚಿಸಲಾಗಿದೆ. ರಜೆ ಪಡೆಯುವ ನಿಯಮಗಳನ್ನು ಸರಳೀಕರಣಗೊಳಿಸಲಾಗಿದೆ ಎಂದರು.

ಮಾದಕ ವಸ್ತುಗಳ ನಿಗ್ರಹಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿದ್ದು, ಡ್ರಗ್‌ ಪೆಡ್ಲರ್‌ಗಳ ಮೇಲೆ ನಿಗಾ ಇಡಲು ಸನಿತ್ರ ಯೋಜನೆಯಡಿ ಕಾನ್‌್ಸಟೆಬಲ್‌ಗಳನ್ನು ನಿಯೋಜಿಸಲಾಗಿದೆ. ಪೊಲೀಸರು ರಾಜ್ಯದ ಕಣ್ಣುಗಳಿದ್ದಂತೆ. ಕಾನೂನು ಸುವ್ಯಸ್ಥೆ ಕಾಪಾಡುವಲ್ಲಿ ಮಹತ್ವದ ಜವಬ್ದಾರಿ ನಿರ್ವಹಿಸುತ್ತಿದ್ದಾರೆ ಎಂದರು.

- Advertisement -
RELATED ARTICLES

Latest News