ಬೆಂಗಳೂರು, ಜು. 11– ಪೊಲೀಸರು ಇಲಾಖೆಯ ಕೆಲಸವನ್ನು ಮಾತ್ರ ಮಾಡಬೇಕು ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ತಾಕೀತು ಮಾಡಿದರು. ನಗರದ ಆಡುಗೋಡಿಯ ಸಿಎಆರ್ ಕವಾಯತು ಮೈದಾನದಲ್ಲಿಂದು ಹಮಿಕೊಂಡಿದ್ದ ಮಾಸಿಕ ಕವಾಯತಿನಲ್ಲಿ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಪೊಲೀಸರು ಬೇರೆ ಇಲಾಖೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಒಂದು ವೇಳೆ ಸಿಕ್ಕಿಕೊಂಡರೆ ನಿಮ ಕೆಲಸಕ್ಕೆ ತೊಂದರೆಯಾಗುತ್ತದೆಂದು ಅವರು ಎಚ್ಚರಿಕೆ ನೀಡಿದರು. ಯಾವ ಉದ್ದೇಶಕ್ಕೆ ಪೊಲೀಸ್ ವೃತ್ತಿಗೆ ಬಂದಿದ್ದೀರಾ ಎಂಬುವುದನ್ನು ಮೊದಲು ಅರಿತುಕೊಂಡು ಉತ್ತಮವಾಗಿ ಕೆಲಸ ನಿರ್ವಹಿಸಬೇಕು. ನಿಮಗೇನಾದರೂ ತೊಂದರೆ ಇದ್ದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದು ಸಲಹೆ ನೀಡಿದರು.
ಕೇವಲ ವರ್ಗಾವಣೆ ಸಮಸ್ಯೆ ಹೊತ್ತು ತರಬೇಡಿ, ನಗರದಲ್ಲಿ ಒಂದು ಠಾಣೆಯಿಂದ ಮತ್ತೊಂದು ಠಾಣೆಗೆ ವರ್ಗಾವಣೆಯಾದರೆ ಅಲ್ಲೇ ಕೆಲಸ ಮಾಡಿ. ದೂರದ ಊರುಗಳಿಂದ ಬಂದಿರುವ ಹಲವಾರು ಪೊಲೀಸರು ನಗರದಲ್ಲಿ ಕೆಲಸ ಮಾಡುತ್ತಿದ್ದಾರೆ. ನಗರದಲ್ಲೇ ಕೆಲಸ ಮಾಡುತ್ತಿರುವವರು ವರ್ಗಾವಣೆ ಏಕೆ ಬಯಸುತ್ತೀರಿ ಎಂದರು.
ನಗರ ಪೊಲೀಸರು ದಕ್ಷತೆ, ಪ್ರಮಾಣಿಕತೆ, ನಿಷ್ಠೆ, ಸಮಗ್ರತೆ, ರಕ್ಷಣೆ,ಧೈರ್ಯ ಸಂವೇದನೆ, ನ್ಯಾಯ ನೀತಿಯ ಪ್ರತೀಕ ಎಂದು ಆಯುಕ್ತರು ಪ್ರಶಂಸೆ ವ್ಯಕ್ತಪಡಿಸಿದರು.ಪೊಲೀಸ್ ಇಲಾಖೆಗೆ ಸೇರಿದ ನಂತರ ತರಬೇತಿ ಸಮಯದಲ್ಲಿ ನೀಡಲಾಗಿರುವ ಸಲಹೆಗಳನ್ನು ಪಾಲಿಸಿ, ಒಳ್ಳೆ ವಾತಾವರಣದಲ್ಲಿದ್ದೀರ. ದಿನದ ಒತ್ತಡದ ಕೆಲಸದಲ್ಲಿ ನೀವು ಎಲ್ಲೇ ಇರಲಿ ಪರೇಡ್ ಬಗ್ಗೆ ಗಮನ ಹರಿಸಬೇಕು, ಎಲ್ಲಾ ಹಂತದಲ್ಲೂ ಪರೇಡ್ ಮಾಡುವುದರಿಂದ ಶಿಸ್ತು ಮೂಡಲಿದೆ ಎಂದು ಅವರು ಹೇಳಿದರು.
ಪೊಲೀಸರಿಗೆ ಮೊದಲು ಶಿಸ್ತು ಮುಖ್ಯ. ಆ ಶಿಸ್ತನ್ನು ನಿವೃತ್ತಿಯಾಗುವವರೆಗೂ ಇರಬೇಕು. ಬೇರೆ ಇಲಾಖೆಯಂತೆ ಪೊಲೀಸ್ ಇಲಾಖೆ ಅಲ್ಲ. ಪೊಲೀಸ್ ಕೆಲಸ ಕಷ್ಟದ ಕೆಲಸ. ಅದರ ಜೊತೆಗೆ ನಿಮ ಆರೋಗ್ಯದ ಕಡೆಗೂ ಗಮನ ಹರಿಸಬೇಕು, ಇಲ್ಲದಿದ್ದರೇ ಬೇರೆ ಬೇರೆ ತೊಂದರೆಗಳಗಾಗುತ್ತದೆ. ನಿಮ ಕುಟುಂಬಕ್ಕೂ ಸಮಯ ನೀಡಬೇಕು ಎಂದರು.
ಪೊಲೀಸ್ ಇಲಾಖೆಗೆ ಸರ್ಕಾರ ಸಾಕಷ್ಟು ಸೌಲಭ್ಯ ನೀಡಿದೆ. ಮುಂದೆಯೂ ನೀಡಲಿದೆ. ಆಡುಗೋಡಿಯ ಮೈದಾನವನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು ಇಲ್ಲದಿದ್ದರೆ ಬೇರೆ ಇಲಾಖೆಯವರು ಈ ಜಾಗವನ್ನು ಬಳಸಿಕೊಳ್ಳುತ್ತಾರೆ. ಕೆಎಸ್‌ಆರ್‌ಪಿ ಮೈದಾನದಂತೆ ಈ ಮೈದಾನವನ್ನು ಸಹ ಇಟ್ಟುಕೊಳ್ಳಬೇಕು ಎಂದರು. ಕಾನ್‌ಸ್ಟೇಬಲ್‌ನಿಂದ ಆಯುಕ್ತರವರೆಗೂ ಎಲ್ಲರೂ ಒಂದೇ. ಎಲ್ಲರೂ ಒಗ್ಗಟ್ಟಾಗಿ ಒಂದು ಘಟಕವಾಗಿ ಉತ್ತಮವಾಗಿ ಕೆಲಸ ನಿರ್ವಹಿಸಬೇಕು ಎಂದು ಆಯುಕ್ತರು ತಿಳಿಸಿದರು.
- ದಾವಣಗೆರೆ : ಸಾಲ ತೀರಿಸಲಾಗದೆ ರೈಲಿಗೆ ತಲೆಕೊಟ್ಟ ತಾಯಿ -ಮಗಳು
- ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕನ ಹತ್ಯೆ
- ಸಿಎಂ-ಡಿಸಿಎಂ ಕುರ್ಚಿ ಕಿತ್ತಾಟದಲ್ಲಿ ಬಡವಾದ ಕಾರ್ಯಕರ್ತರು
- ಸಂಚಾರ ನಿಯಮ ಉಲ್ಲಂಘಿಸಿದ 10 ಶಾಲಾ ವಾಹನಗಳ ಜಪ್ತಿ
- ಮನಗೂಳಿ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣ : 15 ಮಂದಿ ಸೆರೆ, 39.26 ರೂ.ಕೋಟಿ ಮೌಲ್ಯದ ನಗದು, ಆಭರಣ ಜಪ್ತಿ