Thursday, July 4, 2024
Homeರಾಜ್ಯಠಾಣೆಗೆ ನುಗ್ಗಿ ದಾಂಧಲೆ ಮಾಡಿ, ತಲೆ ಕತ್ತರಿಸುತ್ತೇವೆಂದು ಪೊಲೀಸರಿಗೆ ಬೆದರಿಕೆ ಹಾಕುವುದನ್ನು ಸಹಿಸಲ್ಲ : ಪರಮೇಶ್ವರ್‌

ಠಾಣೆಗೆ ನುಗ್ಗಿ ದಾಂಧಲೆ ಮಾಡಿ, ತಲೆ ಕತ್ತರಿಸುತ್ತೇವೆಂದು ಪೊಲೀಸರಿಗೆ ಬೆದರಿಕೆ ಹಾಕುವುದನ್ನು ಸಹಿಸಲ್ಲ : ಪರಮೇಶ್ವರ್‌

ಬೆಂಗಳೂರು, ಮೇ 25- ಪೊಲೀಸ್‌‍ ಠಾಣೆಗೆ ನುಗ್ಗಿ ದಾಂಧಲೆ ಮಾಡುವುದು, ತಲೆ ಕತ್ತರಿಸುತ್ತೇವೆ ಎಂದು ಪೊಲೀಸರಿಗೆ ಬೆದರಿಕೆ ಹಾಕುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ, ಅಂತವರ ವಿರುದ್ಧ ಕಾನೂನಿನ ಪ್ರಕಾರ ಅಗತ್ಯವಾದ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಎಚ್ಚರಿಸಿದ್ದಾರೆ.

ದಾವಣಗೆರೆ ಜಿಲ್ಲೆ ಚನ್ನಗಿರಿಯ ಪೊಲೀಸ್‌‍ ಠಾಣೆಗೆ ನುಗ್ಗಿ ಗಲಭೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು, ದೂರೊಂದರ ವಿಚಾರಣೆಗಾಗಿ ವ್ಯಕ್ತಿಯೊಬ್ಬನನ್ನು ಪೊಲೀಸ್‌‍ ಠಾಣೆ ಕರೆತರಲಾಗಿತ್ತು. ಆತ ಅಲ್ಲಿ 7 ನಿಮಿಷ ಮಾತ್ರ ಉಳಿದಿದ್ದು, ಸಾವನ್ನಪ್ಪಿದ್ದಾನೆ ಎಂದು ಹೇಳಿದರು.

ಪೊಲೀಸರ ಹಲ್ಲೆಯಿಂದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಭಾವಿಸಿ ಆತನ ಕಡೆಯವರು ಪ್ರತಿಭಟನೆ ಮಾಡಿ ಪೊಲೀಸ್‌‍ ಠಾಣೆಗೆ ನುಗ್ಗಿದ್ದಾರೆ. ಈ ವೇಳೆ ಟಿಯರ್‌ ಗ್ಯಾಸ್‌‍ ಬಳಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಕಲ್ಲು ತೂರಾಟದಿಂದ ಅಲ್ಲಿದ್ದವರಿಗೆ ಗಾಯಗಳಾಗಿವೆ ಎಂದು ವಿವರಿಸಿದರು.

ವ್ಯಕ್ತಿಯ ಸಾವಿಗೆ ನಿಖರ ಕಾರಣಗಳೇನು ಎಂದು ತಿಳಿಯಲು ಶವಪರೀಕ್ಷೆಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಅದರ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ ಅವರು, ಠಾಣೆಗೆ ಬಂದು ಧಮ್ಕಿ ಹಾಕುವುದನ್ನು ಸಹಿಸಲು ಸಾಧ್ಯವಿಲ್ಲ. ಕೆಜೆ ಹಳ್ಳಿ, ಡಿಜೆ ಹಳ್ಳಿ ಮಾದರಿಯಲ್ಲಿ ಗಲಭೆ ಮಾಡಲು ಚನ್ನಗಿರಿಯಲ್ಲೂ ಸಂಚು ನಡೆದಿತ್ತು ಎಂಬುದನ್ನು ನಾನು ಕೇಳಿಸಿಕೊಂಡಿದ್ದೇನೆ ಎಂದು ಹೇಳಿದರು.

ಉಡುಪಿಯಲ್ಲಿನ ಗುಂಪು ಗಲಭೆ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಅವರು, ಅಲ್ಲಲ್ಲಿ ಗಲ್ಲಿಗಳಲ್ಲಿ ಸಣ್ಣಪುಟ್ಟ ಗಲಭೆಗಳಾದರೆ ಅದನ್ನು ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಪರಿಗಣಿಸಲಾಗುವುದಿಲ್ಲ. ಕ್ರಿಕೆಟ್‌ ಆಟದ ವೇಳೆ ಗಲಭೆಗಳಾಗುತ್ತವೆ ಎಂದು ಮೊದಲೇ ಮಾಹಿತಿ ಇರುವುದಿಲ್ಲ. ಗಲಾಟೆ ನಡೆದಾಗ ಅದನ್ನು ನಿಯಂತ್ರಣಕ್ಕೆ ತರಲಾಗುವುದು. ಗಲಭೆಕೋರರನ್ನು ಮುಕ್ತವಾಗಿ ಓಡಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ದಕ್ಷಿಣ ಕನ್ನಡದಲ್ಲಿ ಬಿಜೆಪಿ ಶಾಸಕ ಹರೀಶ್‌ ಪೂಂಜಾ ಪೊಲೀಸ್‌‍ ಠಾಣೆಗೆ ಹೋಗಿ ಗಲಾಟೆ ಮಾಡಿದ್ದರು. ಅವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಮುಂದಿನ ವಿಚಾರಣೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಡೆಯಲಿದೆ ಎಂದರು.

ಪೆನ್‌ಡ್ರೈವ್‌ ಪ್ರಕರಣದ ಆರೋಪಿ ಪ್ರಜ್ವಲ್‌ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌‍ಪೋರ್ಟ್‌ ರದ್ದುಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬರೆದಿರುವ ಪತ್ರ ವಿದೇಶಾಂಗ ಸಚಿವಾಲಯಕ್ಕೆ ತಲುಪಿಲ್ಲ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. ಹಾಗಾದರೆ ಕೇಂದ್ರ ಸರ್ಕಾರ ಯಾವ ರೀತಿ ಕೆಲಸ ಮಾಡುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ. ಕೇಂದ್ರ ವಿದೇಶಾಂಗ ಸಚಿವಾಲಯ ಮೇ 21 ರಂದು ಮುಖ್ಯಮಂತ್ರಿಗಳ ಪತ್ರ ತಲುಪಿದೆ ಎಂದು ಹೇಳಿದೆ. ಇದಕ್ಕೂ ಮೊದಲು ಬರೆದ ಪತ್ರ ಎಲ್ಲಿ ಹೋಗಿದೆ? ಎಂದು ಪರಮೇಶ್ವರ್‌ ಪ್ರಶ್ನಿಸಿದರು.

ರಾಜತಾಂತ್ರಿಕ ಪಾಸ್‌‍ಪೋರ್ಟ್‌ ರದ್ದುಗೊಂಡರೆ ಪ್ರಜ್ವಲ್‌ ರೇವಣ್ಣ ವಿದೇಶದಲ್ಲಿ ಉಳಿಯಲು ಅವಕಾಶವಾಗುವುದಿಲ್ಲ. ಅನಂತರ ನಾವು ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ ಎಂದರು.

ಬೆಂಗಳೂರಿಗೆ ಅಪಕೀರ್ತಿ ಸಲ್ಲ :
ಬೆಂಗಳೂರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟ ಹೆಸರು ತರಲು ವಿರೋಧಪಕ್ಷಗಳು ಯತ್ನಿಸುತ್ತಿವೆ ಎಂದು ಗೃಹಸಚಿವರು ಆಕ್ಷೇಪಿಸಿದರು.ಮಳೆ ಬಂದಾಗ ರಸ್ತೆ ಹದಗೆಡುವುದು ಸಾಮಾನ್ಯ. ಅದನ್ನು ಸರಿಪಡಿಸಲಾಗುತ್ತದೆ. ಬೆಂಗಳೂರಿನ ನಿರ್ವಹಣೆ ನಿಟ್ಟಿನಲ್ಲಿ ಲೋಪಗಳಾಗಿದ್ದರೆ ಅದನ್ನು ಸರ್ಕಾರದ ಗಮನಕ್ಕೆ ತರಬಹುದು. ಅಥವಾ ಟೀಕೆ ಮಾಡಬಹುದು. ನಾವು ಸರಿಪಡಿಸಿಕೊಳ್ಳುತ್ತೇವೆ. ಅದನ್ನು ಬಿಟ್ಟು ಉಡ್ತಾ ಬೆಂಗಳೂರು, ಗುಂಡಿಗಳ ನಗರ ಎಂದೆಲ್ಲಾ ವಿರೋಧಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಇದರಿಂದ ಬೆಂಗಳೂರಿನ ವರ್ಚಸ್ಸಿಗೆ ಧಕ್ಕೆಯಾಗಲಿದೆ. ಬಂಡವಾಳ ಹೂಡಿಕೆಗೂ ಸಮಸ್ಯೆಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

RELATED ARTICLES

Latest News