ಬೆಂಗಳೂರು,ಅ.8- ನಗರದಲ್ಲಿರುವ ವಿದೇಶಿ ಅಂಚೆ ಕಚೇರಿಗೆ ನಿಷೇದಿತ ಮಾದಕ ವಸ್ತುಗಳ ಪಾರ್ಸೆಲ್ ಬರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿದೇಶಿ ಅಂಚೆ ಕಚೇರಿಯಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಜಾಲದಲ್ಲಿ ಸಿಲುಕಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.
ಕೆಂಪೇಗೌಡ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಈ ವಿದೇಶಿ ಅಂಚೆ ಕಚೇರಿಗೆ ನಿರಂತರವಾಗಿ ನಿಷೇದಿತ ಮಾದಕ ವಸ್ತುಗಳು ವಿದೇಶಗಳಿಂದ ಪಾರ್ಸೆಲ್ ಮೂಲಕ ಬರುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂಬ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.
ಈ ವಿದೇಶಿ ಅಂಚೆ ಕಚೇರಿ ದಕ್ಷಿಣ ವಿಭಾಗದಲ್ಲಿರುವುದರಿಂದ ಆ ವಿಭಾಗದ ಡಿಸಿಪಿ ಯವರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಅಧಿಕಾರಿಗಳ ಜೊತೆ ಡಿಸಿಪಿ ಅವರು ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆಂದು ಆಯುಕ್ತರು ಹೇಳಿದರು.
ಮುಂದಿನ ದಿನಗಳಲ್ಲಿ ನಾವು ವಿದೇಶಿ ಅಂಚೆ ಕಚೇರಿಗೆ ಬರುವಂತಹ ಪಾರ್ಸೆಲ್‌ಗಳ ಮೇಲೆ ಇನ್ನೂ ಹೆಚ್ಚಿನ ನಿಗಾ ವಹಿಸುತ್ತೇವೆ. ನಿರಂತರವಾಗಿ ಡ್ರಗ್ಸ್ ಸಾಗಾಟ ಮತ್ತು ಮಾರಾಟದ ಮೇಲೆ ಹದ್ದಿನ ಕಣ್ಣಿಟ್ಟಿದ್ದೇವೆ. ನಮಗೆ ಕೇಂದ್ರದ ಎಜೆನ್ಸಿಗಳು, ಹೊರ ರಾಜ್ಯಗಳ ಪೊಲೀಸ್ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ ಎಂದರು.
ಒಟ್ಟಾರೆ ನಗರದಲ್ಲಿ ಮಾದಕ ವಸ್ತು ಮಾರಾಟ ಮತ್ತು ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೇವೆಂದು ಸೀಮಂತ್‌ಕುಮಾರ್‌ಸಿಂಗ್ ಹೇಳಿದರು.