ಬೆಂಗಳೂರು,ಜೂ.27- ಸಾರ್ವಜನಿಕರ ಸುರಕ್ಷಿತವಾಗಿ ಮನೆ -ಮನೆಗೆ ಪೊಲೀಸ್ ಎಂಬ ವಿನೂತನ ಉಪಕ್ರಮವನ್ನು ಪೊಲೀಸ್ ಇಲಾಖೆ ಇಂದಿನಿಂದ ಜಾರಿಗೆ ತಂದಿದೆ. ಈ ಉಪಕ್ರಮವು ಸಮಾಜದಲ್ಲಿ ಅಪರಾಧ ತಡೆಗೆ ಸಹಕಾರಿಯಾಗುವುದಲ್ಲದೇ ಶಾಂತಿ ಮತ್ತು ಭದ್ರತೆಯ ಸ್ಥಿರತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಸರ್ವರನ್ನು ಸಮಾನವಾಗಿ ಒಳಗೊಂಡು ಸಾರ್ವಜನಿಕರು ಈ ಕಾರ್ಯದಲ್ಲಿ ನೇರವಾಗಿ ಪಾಲ್ಗೊಳ್ಳುವಿಕೆಯನ್ನು ಖಾತರಿ ಪಡಿಸಿ, ಸಾಮಾಜಿಕ ಪಿಡುಗುಗಳ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಈ ವ್ಯವಸ್ಥೆಯು ಒಂದು ಆಶಾಕಿರಣವಾಗಿದೆ.
ಈ ಉಪಕ್ರಮದ ಮೂಲಕ ಪೊಲೀಸರ ಬಗ್ಗೆ ಇರುವ ಭಯದ ಭಾವದ ಬದಲು ವಿಶ್ವಾಸದ ಚಿಹ್ನೆಯಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಂದು ನಡೆದ ಹಿರಿಯ ಪೊಲೀಸ್ ಅಽಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯು ಜಾರಿಗೆ ತಂದಿರುವ ಮನೆ-ಮನೆಗೆ ಪೊಲೀಸ್ ಉಪಕ್ರಮದ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು.
ಆಧುನಿಕ ಯುಗದಲ್ಲಿ ಪೊಲೀಸರ ಪಾತ್ರವು ಬಹುಮುಖ್ಯವಾಗಿದೆ. ಕೇವಲ ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳುವವರಾಗಿ ಮಾತ್ರವಲ್ಲದೇ, ಸಮಾಜದ ಶಾಂತಿ ಮತ್ತು ಭದ್ರತೆಯ ರೂವಾರಿಗಳಾಗಿದ್ದಾರೆ.
ಅಪರಾಧಗಳ ತಡೆ, ಅಪರಾಧ ಪ್ರಕರಣಗಳ ತನಿಖೆ, ಸಾರ್ವಜನಿಕ ಸಮಾರಂಭಗಳಲ್ಲಿ ಭದ್ರತೆ ಏರ್ಪಡಿಸುವುದು, ಪ್ರವಾಹ, ಭೂಕಂಪ, ಮಹಾಮಾರಿ ಮುಂತಾದ ವಿಪತ್ತು ಸಂದರ್ಭಗಳಲ್ಲಿ ರಕ್ಷಣಾತ್ಮಕ ಕಾರ್ಯಗಳಲ್ಲಿ ತೊಡಗುವುದು ಪೊಲೀಸ್ ಇಲಾಖೆಯ ಪ್ರಮುಖ ಕರ್ತವ್ಯಗಳಾಗಿವೆ. ಕ್ಲಿಷ್ಟ ಪರಿಸ್ಥಿತಿಗಳಲ್ಲಿ ಶಾಂತಿಯುತವಾಗಿ ನಿಭಾಯಿಸುವ ಮೂಲಕ ಪೊಲೀಸರು ಸಾರ್ವಜನಿಕರಲ್ಲಿ ಭದ್ರತೆ ಮತ್ತು ವಿಶ್ವಾಸವನ್ನು ಉಂಟುಮಾಡುವುದು ಇಲಾಖೆಯ ಆಧ್ಯತೆಯಾಗಿದೆ.
ಸಾರ್ವಜನಿಕರಲ್ಲಿ ಕಾನೂನುಗಳ ಬಗ್ಗೆ ತಿಳುವಳಿಕೆ ಬೆಳೆಸುವುದು ಮತ್ತು ಪೌರ ಸಹಭಾಗಿತ್ವದ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಇಲಾಖೆಯು ಪ್ರಗತಿಪರ ನಿಲುವುಗಳನ್ನು ತೆಗೆದುಕೊಳ್ಳುತ್ತಿದೆ.ಆಧುನಿಕ ತಂತ್ರಜ್ಞಾನಗಳ ಬಳಕೆಯಿಂದ ಪೊಲೀಸ್ ಇಲಾಖೆಯು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕ ಸೇವಾ ದಿಟ್ಟ ನೋಟದೊಂದಿಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುತ್ತಿದೆ.
ಕಾನೂನು ಜಾಗೃತಿ:ಶಾಲಾ-ಕಾಲೇಜುಗಳಲ್ಲಿ ಕಾನೂನು ಜಾಗೃತಿ ಕಾರ್ಯಕ್ರಮಗಳು, ಮಹಿಳಾ ಭದ್ರತೆ ಕುರಿತ ಕಾರ್ಯಾಗಾರಗಳು ಮತ್ತು ಯುವ ಜನರಿಗೆ ಪೊಲೀಸ್ ಸೇವೆಗಳ ಬಗ್ಗೆ ಅರಿವು ಮೂಡಿಸುವ ಸಭೆಗಳನ್ನು ಏರ್ಪಡಿಸಲಾಗುತ್ತದೆ.
ಉಪಕ್ರಮದ ಪ್ರಯೋಜನ: ಅಪರಾಧ ತಡೆಗೆ ಸಹಕಾರಿ -ಸಾರ್ವಜನಿಕರ ಸಹಕಾರದಿಂದ ಪೊಲೀಸರು ಶಂಕಾಸ್ಪದ ಚಟುವಟಿಕೆಗಳನ್ನು ಬೇಗ ಗರುತಿಸಿ ತಡೆಗಟ್ಟುವುದು. ಜನರಲ್ಲಿ ನಂಬಿಕೆ ಬೆಳೆಸುವುದು-ಸಮುದಾಯ ಪೊಲೀಸ್ ವ್ಯವಸ್ಥೆಯು ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ವಿಶ್ವಾಸದ ಸಂಬಂಧವನ್ನು ನಿರ್ಮಿಸುವುದು.
ಯುವಜನತೆಗೆ ಮಾರ್ಗದರ್ಶನ- ಯುವ ಜನರನ್ನು ಸಕಾರಾತ್ಮಕ ಚಟುವಟಿಗಳತ್ತ ತೊಡಗಿಸಲು ಇದು ಸಹಾಯ ಮಾಡುತ್ತದೆ. ಒಟ್ಟಾರೆ ಸಮಾಜದಲ್ಲಿ ಗಂಭೀರ ಸಮಸ್ಯೆ ಉದ್ಭವಿಸುವ ಮೊದಲೇ ಪರಿಹಾರೋಪಾಯಗೊಂದಿಗೆ ಸನ್ನದ್ಧರಾಗಿರುವಂತಹ ವಾತಾವರಣ ರೂಪುಗೊಂಡಿರುತ್ತದೆ.
ಸೈಬರ್ ಅಪರಾಧದಲ್ಲಿ ಅಕ್ರಮ ಹಣ ವರ್ಗಾವಣೆಗೆ ನಕಲಿ ಬ್ಯಾಂಕ್ ಖಾತೆಗಳ ಬಳಕೆ : ರಾಜ್ಯ ಪೊಲೀಸ್ ಇಲಾಖೆಯಿಂದ ಅಧ್ಯಯನ ವರದಿ ಬಿಡುಗಡೆ
ಸೈಬರ್ ಅಪರಾಧಗಳಲ್ಲಿ ಅಕ್ರಮ ಹಣ ವರ್ಗಾವಣೆಗೆ ನಕಲಿ ಬ್ಯಾಂಕ್ ಖಾತೆಗಳ ಬಳಕೆಯ ಬಗ್ಗೆ ರಾಜ್ಯ ಪೊಲೀಸ್ ಇಲಾಖೆ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿದೆ.ಸೈಬರ್ ಅಪರಾಧ ಪ್ರಕರಣಗಳಲ್ಲಿ ಅಕ್ರಮ ಹಣದ ವರ್ಗಾವಣೆಗೆ ವ್ಯಾಪಕವಾಗಿ ನಕಲಿ ಬ್ಯಾಂಕ್ ಖಾತೆಗಳ ಬಳಕೆಯ ಬಗ್ಗೆ ಅಧ್ಯಯನ ಮಾಡಿ ಅವುಗಳನ್ನು ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳನ್ನು ಶಿಾರಸ್ಸು ಮಾಡಲು ಸಿಐಡಿಯ ಸೈಬರ್ ಅಪರಾಧ ತನಿಖಾ ತರಭೇತಿ ಮತ್ತು ಸಂಶೋಧನಾ ಕೇಂದ್ರ (ಸಿಸಿಐಆರ್‌ಟಿ) ವತಿಯಿಂದ ವಿಶೇಷ ತಂಡವನ್ನು ರಚಿಸಲಾಯಿತು.
ಈ ತಂಡದಲ್ಲಿ ಹಿರಿಯ ಪೊಲೀಸ್ ಅಽಕಾರಿಗಳು, ತನಿಖಾಽಕಾರಿಗಳು, ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆ್ ಇಂಡಿಯಾ (ಡಿಎಸ್‌ಸಿಐ)ತಜ್ಞರು, ಬ್ಯಾಂಕಿಂಗ್ ವಲಯದ ಪ್ರತಿನಿಽಗಳು ಒಳಗೊಂಡಿದ್ದರು.
ಈ ಅಧ್ಯಯನದಲ್ಲಿ ಕಳೆದ ಸಾಲಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಎನ್‌ಸಿಆರ್‌ಪಿ ಪೋರ್ಟಲ್‌ನಲ್ಲಿ ಸ್ವೀಕರಿಸಲಾದ ದೂರುಗಳನ್ನು ಹಾಗೂ ನಗರದಲ್ಲಿ ದಾಖಲಾದ ಸೈಬರ್ ಅಪರಾಧ ಪ್ರಕರಣಗಳ ಮಾಹಿತಿಯನ್ನು ಕ್ರೋಡೀಕರಿಸಿ ವಿಶ್ಲೇಷಣೆ ಮಾಡಲಾಗಿದೆ.
ಅಲ್ಲದೇ ಪೊಲೀಸ್ ಅಽಕಾರಿಗಳು, ತಂತ್ರಜ್ಞರು, ಬ್ಯಾಂಕಿಂಗ್ ವಲಯದ ಪ್ರತಿನಿಽಗಳು ಹಾಗೂ ತನಿಖಾಽಕಾರಿಗಳೊಂದಿಗೆ ಹಲವು ಸುತ್ತಿನ ಚರ್ಚೆ ಮಾಡಲಾಗಿದೆ.ಈ ಅಧ್ಯಯನ ವರದಿಯಲ್ಲಿ, ಭಾರತದಲ್ಲಿ ನಕಲಿ ಖಾತೆಗಳ ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳನ್ನು ಶಿಾರಸ್ಸು ಮಾಡಿದ್ದು, ಈ ಕ್ರಮಗಳನ್ನು ಮೂರು ವರ್ಗಗಳಲ್ಲಿ ವಿವರಿಸಲಾಗಿದೆ.ಅವುಗಳೆಂದರೆ, ಬ್ಯಾಂಕ್‌ಗಳು ಹಾಗೂ ಇತರೆ ಹಣಕಾಸು ಸಂಸ್ಥೆಗಳು ಅನುಸರಿಸಬೇಕಾದ ಕ್ರಮಗಳು, ಪೊಲೀಸ್ ಮತ್ತು ಇತರೆ ಕಾನೂನು ಜಾರಿ ಸಂಸ್ಥೆಗಳು ಅನುಸರಿಸಬೇಕಾದ ಕ್ರಮಗಳು ಹಾಗೂ ಸರ್ಕಾರ ಮತ್ತು ನಿಯಂತ್ರಕರು ಕೈಗೊಳ್ಳಬಹುದಾದ ಕ್ರಮಗಳು.
ಈ ಅಧ್ಯಯನ ವರದಿಯನ್ನು ಕೇಂದ್ರ ಸರ್ಕಾರ , ಇತರ ಕಾನೂನು ಜಾರಿ ಸಂಸ್ಥೆಗಳು, ವಿವಿಧ ಬ್ಯಾಂಕ್‌ಗಳು ಹಾಗೂ ಇತರೆ ಹಣಕಾಸು ಸಂಸ್ಥೆಗಳೊಂದಿಗೆ ಹಂಚಿಕೊಳ್ಳುವ ಉದ್ದೇಶವಿದ್ದು, ಇದು ಸೈಬರ್ ಅಪರಾಧಗಳನ್ನು ರಾಷ್ಟ್ರಮಟ್ಟದಲ್ಲಿ ನಿಯಂತ್ರಿಸುವಲ್ಲಿ ಸಹಕಾರಿಯಾಗುವ ಆಶಯವಿದೆ.