ಬೆಂಗಳೂರು, ಫೆ.20- ಗೂಗಲ್‌ನಲ್ಲಿ ವೈದ್ಯರೊಬ್ಬರ ಮೊಬೈಲ್ ನಂಬರ್ ಪತ್ತೆಹಚ್ಚಿ ಅತ್ತೆ ಸಾಯಿಸಲು ಮಾತ್ರೆ ಕೇಳಿದ್ದ ಮಹಿಳೆಯನ್ನು ಸಂಜಯನಗರ ಠಾಣೆ ಪೊಲೀಸರು ಪತ್ತೆಹಚ್ಚಿ ವಿಚಾರಣೆ ನಡೆಸಿದ್ದಾರೆ.
ಸಂಜಯನಗರದಲ್ಲಿ ಕ್ಲಿನಿಕ್ ನಡೆಸುವ ಡಾ. ಸುನೀಲ್‌ಕುಮಾರ್ ಅವರು ನೀಡಿದ ದೂರಿನ ಮೇರೆಗೆ ತಾಂತ್ರಿಕ ಆಧಾರಗಳಿಂದ ಚೌಟ್ರಿಪಾಳ್ಯದಲ್ಲಿ ವಾಸವಾಗಿದ್ದ ಮಹಿಳೆಯನ್ನು ಪೊಲೀಸರು ಪತ್ತೆಹಚ್ಚಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಮಾನಸಿಕ ಜಿಗುಪ್ಪೆ ಹಾಗೂ ವೈಯಕ್ತಿಕ ಸಮಸ್ಯೆಯಿಂದ ನಾನೇ ಸಾಯಲು ಅತ್ತೆ ಹೆಸರು ಹೇಳಿದ್ದಾಗಿ ತಿಳಿಸಿದ್ದಾಳೆ.
ಕೊಳ್ಳೇಗಾಲ ತಾಲೂಕಿನವರಾದ ಈ ಮಹಿಳೆ ನಾಲ್ಕುವರ್ಷದ ಹಿಂದೆ ತಮ್ಮ ತಾಲೂಕಿನವರೇ ಆದ ಕ್ಯಾಬ್ ಚಾಲಕನನ್ನು ಮದುವೆಯಾಗಿದ್ದು, ದಂಪತಿಗೆ ಒಂದುವರೆ ವರ್ಷದ ಹೆಣ್ಣುಮಗುವಿದೆ. ಈ ಕುಟುಂಬ ಚೌಟ್ರಿ ಪಾಳ್ಯದಲ್ಲಿ ವಾಸವಿದೆ. ಇವರ ಅತ್ತೆ ಬೇರ ವಾಸವಿದ್ದಾರೆ. ದಂಪತಿ ಅನ್ನೋನ್ಯವಾಗಿಯೇ ಇದ್ದಾರೆ. ಅಲ್ಲದೇ ಅತ್ತೆ-ಸೊಸೆ ಭಾಂದವ್ಯ ಚೆನ್ನಾಗಿದೆ.
ವೈದ್ಯ ಸುನೀಲ್‌ಕುಮಾರ್ ಎಂಬುವವರಿಗೆ ಎರಡು ದಿನಗಳ ಹಿಂದೆ ಮೊಬೈಲ್‌ನಲ್ಲಿ ವಾಟ್ಸಾಪ್ ಸಂದೇಶ ಕಳುಹಿಸಿದ ಈ ಮಹಿಳೆ, ನನ್ನ ಅತ್ತೆ ಹಿಂಸೆ ನೀಡುತ್ತಿದ್ದಾರೆ. ಅವರನ್ನು ಸಾಯಿಸಲು ಯಾವುದಾದರೂ ಮಾತ್ರೆ ಕೊಡಿ ಎಂದು ಮನವಿ ಮಾಡಿಕೊಂಡಿದ್ದರು.
ಈ ಸಂದೇಶ ನೋಡಿ ಶಾಕ್ ಆದ ವೈದ್ಯರು, ನನ್ನ ನಂಬರ್ ನಿಮಗೆ ಯಾರು ಕೊಟ್ಟವರು ಎಂದು ಕೇಳಿದಾಗ, ನಾನು ಗೂಗಲ್ ನಲ್ಲಿ ಹುಡುಕಿ ನಿಮ್ಮ ನಂಬರ್ ತೆಗೆದುಕೊಂಡಿದ್ದೇನೆ. ದಯವಿಟ್ಟು ನನಗೆ ಸಹಾಯಮಾಡಿ ಎಂದಾಗ ವೈದ್ಯರು ಗದರಿಸಿದಾಗ ಆಕೆ ಮೆಸೇಜ್ ಮಾಡುವುದನ್ನು ನಿಲ್ಲಿಸಿ ನಂಬರ್ ಬ್ಲಾಕ್ ಮಾಡಿದ್ದಾರೆ.
ಆ ಮಹಿಳೆ ಕಳುಹಿಸಿದ್ದ ಮೆಸೇಜ್‌ನ ಸ್ಟೀನ್‌ಶಾಟ್ ತೆಗೆದಿಟ್ಟುಕೊಂಡಿದ್ದು ವೈದ್ಯರು ನಂತರ ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಗಂಭೀರತೆ ಅರಿತ ಪೊಲೀಸರು ಆ ಮಹಿಳೆಯನ್ನು ಇದೀಗ ಪತ್ತೆಹಚ್ಚಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ನಾನೇ ಸಾಯಲು ನಿರ್ಧರಿಸಿ ಅತ್ತೆ ಹೆಸರನ್ನು ಬಳಸಿಕೊಂಡಿದ್ದಾಗಿ ಹೇಳಿದಾಗ ಪೊಲೀಸರು ಆ ಮಹಿಳೆಗೆ ಬುದ್ದಿವಾದ ಹೇಳಿ ಕಳುಹಿಸಿದ್ದಾರೆ. ಈ ಮಹಿಳೆಗೆ ಈ ಹಿಂದೆ ಎರಡು ಬಾರಿ ಕೌನ್ಸಿಲಿಂಗ್ ನಡೆದಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಇದೀಗ ಪೊಲೀಸರು ಮತ್ತೆ ಮಹಿಳೆಯನ್ನು ಕೌನ್ಸಿಲಿಂಗ್‌ಗೆ ಕಳುಹಿಸಿದ್ದಾರೆ.