ಬೆಂಗಳೂರು,ಸೆ.8- ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿ ಗಣಪತಿ ವಿಸರ್ಜನೆ ವೇಳೆ ಅನ್ಯಕೋಮಿನವರು ಕಲ್ಲು ಎಸೆದು ಹಲ್ಲೆ ನಡೆಸಿದ್ದರೂ ಪೊಲೀಸರು ಮಾತ್ರ ಹಿಂದೂಗಳ ಮೇಲೆ ಲಾಠಿಚಾರ್ಜ್ ನಡೆಸಿ ಪೌರುಷ ತೋರಿದ್ದಾರೆ ಎಂದು ಮಾಜಿ ಸಚಿವ ಅಶ್ವತ್ಥ ನಾರಾಯಣ ಸರ್ಕಾರದ ವಿರುದ್ಧ ಕೆಂಡ ಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಜವಾಗಿಯೂ ನಿಮಗೆ ಅಷ್ಟೊಂದು ಆಕ್ರೋಶವಿದ್ದರೆ ಗಣಪತಿ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ಎಸೆದ ಮತಾಂಧರರ ಮೇಲೆ ಲಾಠಿಚಾರ್ಜ್ ನಡೆಸಿ ಪೌರುಷ ತೋರಿಸಿ, ಶಾಂತಿಯುತವಾಗಿ ಮೆರವಣಿಗೆ ನಡೆಸುತ್ತಿದ್ದವರ ಮೇಲೆ ಮಹಿಳೆಯರು ಮತ್ತು ಮಕ್ಕಳ ಮೇಲೆ ಒಣ ಪೌರುಷ ತೋರಿಸಿರುವುದು ಬೇಡ ಎಂದು ಎಚ್ಚರಿಕೆ ಕೊಟ್ಟರು.
ನಾವು ಏನು ಬೇಕಾದರೂ ಮಾಡಬಹುದೆಂಬ ಮನಸ್ಥಿತಿಯಲ್ಲಿರುವ ಒಂದು ಸಮುದಾಯ ಮಚ್ಚು, ಲಾಂಗು ಹಿಡಿದು ಅಟ್ಟಹಾಸ ಮೆರೆಯುತ್ತಿದ್ದಾರೆ. ಶಾಂತಿಯುತವಾಗಿ ನಡೆಯುತ್ತಿದ್ದ ಮೆರವಣಿಗೆ ಮೇಲೆ ಕಲ್ಲು ಎಸೆಯುವ ಅಗತ್ಯವಾದರೂ ಏನಿತ್ತು? ಪೊಲೀಸ್ ಇಲಾಖೆ ಸರ್ಕಾರದ ಓಲೈಕೆಗೆ ಸೀಮಿತವಾಗಿದೆ. ಪೋಸ್ಟಿಂಗ್‌ಗೋಸ್ಕರ ಇಲಾಖೆ ಓಲೈಕೆಗಿಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಉದ್ದೇಶಪೂರಕವಾಗಿ ಕಲ್ಲು ಎಸೆದವರ ಮೇಲೆ ಕಾನೂನು ಕ್ರಮ ಜರುಗಿಸದ ಪೊಲೀಸರು ಹಿಂದೂಗಳ ಮೇಲೆ ಲಾಠಿಚಾರ್ಜ್ ನಡೆಸಿ ಸರ್ಕಾರದಿಂದ ಶಹಬ್ಬಾಸ್‌ಗಿರಿ ಪಡೆಯುವ ಯತ್ನದಲ್ಲಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಭದ್ರತಾಪಡೆಗಳನ್ನು ಏಕೆ ನಿಯೋಜಿಸಲಿಲ್ಲ. ಈ ವ್ಯವಸ್ಥೆ ಮೇಲೆ ಜನರು ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಅದರಲ್ಲೂ ಪೊಲೀಸರ ಮೇಲಂತೂ ಮೊದಲೇ ವಿಶ್ವಾಸವಿಲ್ಲ. ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಸಂಪೂರ್ಣವಾಗಿ ಸತ್ತು ಹೋಗಿದೆ. ಅಮಾಯಕರು ಬಲಿಯಾಗುತ್ತಿದ್ದಾರೆ. ಇದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದರು.
ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧವೂ ವಾಗ್ದಾಳಿ ನಡೆಸಿದ ಅಶ್ವತ್ಥ ನಾರಾಯಣ, ಗಲಭೆಗೆ ಬಿಜೆಪಿ, ಜೆಡಿಎಸ್ ಕಾರಣವೆಂದು ಯಾವ ಆಧಾರದ ಮೇಲೆ ಹೇಳಿದ್ದಾರೆ. ನಾವು ಗಲಭೆ ನಡೆಸಿ ಎಂದು ಕುಮಕ್ಕು ಕೊಟ್ಟಿದ್ದೇವೆಯೇ?, ನಿಮಗೆ ಬುದ್ಧಿ ಸರಿ ಇದ್ದಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ. ಯಾವ ಆಧಾರದಲ್ಲಿ ಮಾತನ್ನಾಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಗಣೇಶ ಹಬ್ಬ ಹಿಂದೂಗಳ ಹಬ್ಬ. ಇದನ್ನು ನಾವು ಶ್ರದ್ಧೆ, ಭಕ್ತಿಯಿಂದ ಆಚರಣೆ ಮಾಡುತ್ತೇವೆ. ಈ ಹಬ್ಬಕ್ಕೆ ಕುಮಕ್ಕು ಕೊಡುವುದರಲ್ಲಿ ಅರ್ಥವಿದೆಯೇ?, ಚಲುವರಾಯಸ್ವಾಮಿ ಮೊದಲು ದುರಹಂಕಾರದ ಮಾತುಗಳನ್ನಾಡುವುದನ್ನು ನಿಲ್ಲಿಸಬೇಕು. ಈ ಹಿಂದೆ ಮೂಲೆಗೆ ಸೇರಿದ್ದಿರಿ. ಈಗ ಇದೇ ರೀತಿ ಮಾತನಾಡಿದರೆ ಮತ್ತೆ ಮೂಲೆಗುಂಪಾಗಲಿದ್ದೀರಿ ಎಂದು ಎಚ್ಚರಿಕೆ ಕೊಟ್ಟರು.
ನೀವು ಜಿಲ್ಲಾ ಸಚಿವರಾಗಿ ಪರಿಸ್ಥಿತಿಯನ್ನು ನಿಭಾಯಿಸಲು ಮಾತನಾಡಬೇಕು. ಎಲ್ಲರನ್ನೂ ಕರೆಸಿ ಮಾತನಾಡುವುದನ್ನು ಬಿಟ್ಟು ಬೇರೆ ಪಕ್ಷಗಳ ಮೇಲೆ ಗೂಬೆ ಕೂರಿಸುವುದು, ದುರಹಂಕಾರದ ಮಾತುಗಳನ್ನಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಬೇರೆ ಜಿಲ್ಲೆಗಳಿಂದ ಕಿಡಿಗೇಡಿಗಳು ಬಂದು ಕಲ್ಲೆಸೆದಿದ್ದಾರೆ ಎಂದರೆ ಗುಪ್ತಚರ ವಿಭಾಗ, ಪೊಲೀಸರು ಏನು ಮಾಡುತ್ತಿದ್ದರು. ಕಾಂಗ್ರೆಸ್ ಸರ್ಕಾರ ಬಂದರೆ ನಾವು ಏನು ಬೇಕಾದರೂ ಮಾಡಿ ಜಯಿಸಿಕೊಳ್ಳಬಹುದು ಎಂಬ ಮನಸ್ಥಿತಿಯವರೇ ಈ ಕೃತ್ಯ ನಡೆಸಿದ್ದಾರೆಂದು ದೂರಿದರು. ಪೊಲೀಸರ ಮೇಲೆ ಹಲ್ಲೆ ನಡೆಸುತ್ತಾರೆಂದರೆ ಇವರು ಏನು ಬೇಕಾದರೂ ಮಾಡುವುದಕ್ಕೆ ಹೇಸುವುದಿಲ್ಲ.
ಕಾಂಗ್ರೆಸ್ ಸರ್ಕಾರ ಇದ್ದಾಗ ಹೊರ ಜಿಲ್ಲೆಗಳಿಂದ ಇಂಥ ಮತಾಂಧರು ಬಂದು ಗಲಭೆ ಸೃಷ್ಟಿಸುತ್ತಾರೆ. ಇದಕ್ಕೆಲ್ಲಾ ಪೊಲೀಸ್ ವೈಫಲ್ಯವೇ ಕಾರಣ ಎಂದು ದೂರಿದರು.ಗಲಭೆಕೋರರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು. ಇದರಲ್ಲಿ ಲಾಭ, ನಷ್ಟದ ಲೆಕ್ಕ ಹಾಕದೇ ತಕ್ಷಣವೇ ತಪ್ಪಿತಸ್ಥ ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಿದರೆ ಮುಂದಿನ ದಿನಗಳಲ್ಲಿ ಗಲಭೆ ಸೃಷ್ಟಿಸುವವರಿಗೆ ಎಚ್ಚರಿಕೆ ಸಂದೇಶವಾಗುತ್ತದೆ ಎಂದು ಅಶ್ವತ್ಥನಾರಾಯಣ ಹೇಳಿದರು.