ಬೆಳಗಾವಿ,ಅ.18- ಪ್ರೀತಿಸಿ ಮದುವೆಯಾಗಿದ್ದ 13 ವರ್ಷದ ಬಳಿಕ ವಿಚ್ಛೇದನ ನೀಡಿದ್ದರಿಂದ ಕೋಪಗೊಂಡು ಪತ್ನಿಯನ್ನು ಕೊಂದು ಪರಾರಿಯಾಗಿದ್ದ ಪೊಲೀಸಪ್ಪ ಖಾಕಿ ಬಲಿಗೆ ಬಿದ್ದಿದ್ದಾನೆ.
ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಕಾಶಮ ನೆಲ್ಲಿಗಣಿ (34) ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ. ಈಕೆ ಕೆಎಸ್‌ಆರ್‌ಟಿಸಿಯಲ್ಲಿ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದರು.
ಕಾಗವಾಡ ತಾಲೂಕಿನ ಬನಜವಾಡ ಗ್ರಾಮದ ಸಂತೋಷ ಕಾಂಬಳೆ ಬಂಧಿತ
ಆರೋಪಿಯಾಗಿದ್ದಾನೆ. ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಈತ ಹೆಡ್ ಕಾನ್ಸ್ ಸ್ಟೇಬಲ್ ಆಗಿದ್ದು, ಪೊಲೀಸ್ ಕ್ವಾಟ್ರರ್ಸ್‌ನಲ್ಲಿ ನೆಲೆಸಿದ್ದಾರೆ.ಕಾಶಮ ನೆಲ್ಲಿಗಣಿ ಅವರು ಅನ್ಯ ಜಾತಿಯಾಗಿದ್ದರೂ ಕಳೆದ 13 ವರ್ಷಗಳ ಹಿಂದೆ ಸಂತೋಷ ಕಾಂಬಳೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಹಿರಿಯರ ಸಮುಖದಲ್ಲಿ ಸಂಪ್ರದಾಯದಂತೆ ಇವರಿಬ್ಬರ ಮದುವೆ ನಡೆದಿತ್ತು.
ಮದುವೆಯಾಗಿ ಕೆಲವೇ ದಿನಗಳಲ್ಲಿ ಕಾಶಮಳಿಗೆ ಪತಿ ಸಂತೋಷ ನಿರಂತರ ಕಿರುಕುಳ ನೀಡುತ್ತಿದ್ದರೆಂಬ ಆರೋಪ ಕೇಳಿ ಬಂದಿದ್ದು ಗಂಡನ ಕಿರುಕುಳ ಹೆಚ್ಚಾದಂತೆ ಆತನನ್ನು ಬಿಟ್ಟು ಸವದತ್ತಿಗೆ ಬಂದು ಬಾಡಿಗೆ ಮನೆ ಮಾಡಿಕೊಂಡು ಒಬ್ಬರೇ ವಾಸವಾಗಿದ್ದರು. ಬಳಿಕ ಪತಿಯ ಸಂತೋಷನ ಕಾಟ ಹೆಚ್ಚಾದಂತೆ ವಿಚ್ಛೇದನ ಪಡೆಯಲು ಮುಂದಾದರು. ಕಳೆದ ಐದು ತಿಂಗಳ ಹಿಂದಷ್ಟೇ ಬೈಲಹೊಂಗಲ ಕೌಟುಂಬಿಕ ನ್ಯಾಯಾಲಯದಿಂದ ಅವರು ವಿಚ್ಛೇದನ ಪಡೆದಿದ್ದರು.
ಇದರಿಂದ ಸಂತೋಷ ಕೋಪಗೊಂಡು ಆಕೆ ಮೇಲೆ ದ್ವೇಷ ಸಾಧಿಸುತ್ತಿದ್ದನು. ಅ.13ರಂದು ಕರ್ತವ್ಯ ಮುಗಿಸಿ ಕಾಶಮ ಮನೆಗೆ ಹೋಗಿದ್ದಾರೆ.ಅಂದು ರಾತ್ರಿ 8ಗಂಟೆ ಸುಮಾರಿಗೆ ಸಂತೋಷ ಕೊಡ ಅಲ್ಲಿಗೆ ಬಂದಿದ್ದಾನೆ.
ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದ್ದು ಪೂರ್ವ ತಯಾರಿ ಮಾಡಿಕೊಂಡು ಬಂದಿದ್ದ ಸಂತೋಷ ಹರಿತವಾದ ಆಯುಧ ಬಳಸಿ ಕಾಶಮಳ ಕತ್ತು, ಹೊಟ್ಟೆಗೆ ಚುಚ್ಚಿದ್ದಾನೆ.ಆಕೆ ಸತ್ತಿರುವುದನ್ನು ದೃಢಪಡಿಸಿಕೊಂಡು ನಂತರ ಮನೆಗೆ ಬೀಗ ಹಾಕಿಕೊಂಡು ಅಲ್ಲಿಂದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಶಮ ಅವರ ಮನೆಯಿಂದ ಕೆಟ್ಟವಾಸನೆ ಬರುತ್ತಿದ್ದಂತೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಗಿಲು ಒಡೆದು ಒಳಗೆ ಹೋಗಿ ಪರಿಶೀಲಿಸಿದಾಗ ಕೊಳೆತ ಸ್ಥಿತಿಯಲ್ಲಿ ಲೇಡಿ ಕಂಡಕ್ಟರ್ ಕಾಶಮ ಶವ ಪತ್ತೆಯಾಗಿತ್ತು.
ಘಟನೆ ಸಂಬಂಧ ತನಿಖೆ ನಡೆಸಿ ಮೃತಳ ಕುಟುಂಬಸ್ಥರಿಂದ ಮಾಹಿತಿ ಪಡೆದು ಸಂತೋಷನಿಗಾಗಿ ಹುಡುಕಾಟ ನಡೆಸಿ ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸವದತ್ತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.