Friday, December 26, 2025
Homeರಾಜಕೀಯಕಾಂಗ್ರೆಸ್ಸಿನಲ್ಲಿ ಜಿಲ್ಲೆಗೊಬ್ಬ ಸಿಎಂ ಆಕಾಂಕ್ಷಿ

ಕಾಂಗ್ರೆಸ್ಸಿನಲ್ಲಿ ಜಿಲ್ಲೆಗೊಬ್ಬ ಸಿಎಂ ಆಕಾಂಕ್ಷಿ

A CM aspirant from each district in Congress

ಬೆಂಗಳೂರು, ಡಿ.26- ಕಾಂಗ್ರೆಸ್ಸಿನಲ್ಲಿ ಅಧಿಕಾರ ಹಂಚಿಕೆಗೆ ಸಂಬಂಧಪಟ್ಟಂತೆ ಗೊಂದಲಗಳು ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಜಿಲ್ಲಾವಾರು ಮುಖ್ಯಮಂತ್ರಿ ಆಕಾಂಕ್ಷಿಗಳ ಅಬ್ಬರ ಜೋರಾಗಿದೆ. ಇದರ ನಡುವೆ ದಾವಣಗೆರೆಯಲ್ಲಿ ಇಂದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರು ಹೈಕಮಾಂಡ್‌ ನಾಯಕರ ಜೊತೆ ಚರ್ಚೆ ನಡೆಸುವ ಸಾಧ್ಯತೆಗಳಿವೆ.

ಇಂದು ದಾವಣಗೆರೆಯಲ್ಲಿ ನಡೆಯುವ ಮಾಜಿ ಸಚಿವ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ನುಡಿ ನಮನ ಕಾರ್ಯಕ್ರಮಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್‌ ಮತ್ತು ರಣದೀಪ್‌ ಸಿಂಗ್‌ ಸುರ್ಜೆವಾಲ ಆಗಮಿಸುತ್ತಿದ್ದಾರೆ. ಅಧಿಕಾರ ಹಂಚಿಕೆಯ ಗೊಂದಲಗಳು ತೀವ್ರ ಸ್ವರೂಪಕ್ಕೆ ತಿರುಗಿದ ನಂತರ, ಈ ಇಬ್ಬರು ನಾಯಕರು ರಾಜ್ಯಕ್ಕೆ ಆಗಮಿಸುತ್ತಿರುವುದು ಇದೇ ಮೊದಲು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೂಡ ಭಾಗವಹಿಸುತ್ತಿದ್ದಾರೆ.

ನಾಲ್ವರು ಪ್ರಮುಖ ನಾಯಕರು ಒಂದೆಡೆ ಸೇರುತ್ತಿರುವುದರಿಂದ ಸಹಜವಾಗಿಯೇ ಅಧಿಕಾರ ಹಂಚಿಕೆಯ ಗೊಂದಲಗಳ ಬಗ್ಗೆ ಚರ್ಚೆಯಾಗಬಹುದು ಎಂಬ ನಿರೀಕ್ಷೆಗಳಿವೆ. ಒಂದು ವೇಳೆ ದಾವಣಗೆರೆಯಲ್ಲಿಯೇ ಇದು ಚರ್ಚೆಯಾಗಿ ಇತ್ಯರ್ಥವಾದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸೂಚನೆಯಂತೆ ಸ್ಥಳೀಯ ಮಟ್ಟದಲ್ಲೇ ಗೊಂದಲಗಳು ನಿವಾರಣೆಯಾಗಬಹುದು.

ಮೂಲಗಳ ಪ್ರಕಾರ ಕೆ.ಸಿ.ವೇಣುಗೋಪಾಲ್‌ ಅವರು ಕರ್ನಾಟಕಕ್ಕೆ ಬರುವ ಮುನ್ನ ಪಕ್ಷದ ವರಿಷ್ಠ ನಾಯಕರ ಜೊತೆ ಸಮಾಲೋಚನೆ ನಡೆಸಿ ಮಾರ್ಗದರ್ಶನ ಪಡೆದಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ ಶಾಮನೂರು ಶಿವಶಂಕರಪ್ಪ ಅವರ ನುಡಿ ನಮನ ಕಾರ್ಯಕ್ರಮ ರಾಜ್ಯ ರಾಜಕೀಯದಲ್ಲಿ ಪ್ರಮುಖ ಬೆಳವಣಿಗೆಯ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.

ಪೋಸ್ಟರ್‌ ಗಳ ಅಬ್ಬರ:
ಬೆಂಗಳೂರಿನ ಚಾಮರಾಜಪೇಟೆ ಯಲ್ಲಿ ವಸತಿ ಸಚಿವ ಜಮೀರ್‌ ಅಹದ್‌ ಖಾನ್‌ ಅವರ ಪೋಸ್ಟರ್‌ಗಳು ರಾರಾಜಿಸುತ್ತಿದ್ದು, ಮುಂದಿನ ಮುಖ್ಯಮಂತ್ರಿ ಎಂದು ಅದರಲ್ಲಿ ಬಿಂಬಿಸಲಾಗಿದೆ. ಅದೇ ರೀತಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ ಅವರ ಪೋಸ್ಟರ್‌ಗಳು ಕೋಲಾರದಲ್ಲಿ ಅಬ್ಬರಿಸುತ್ತಿದ್ದು ಅವರನ್ನು ಕೂಡ ಮುಂದಿನ ಮುಖ್ಯಮಂತ್ರಿ ಎಂದು ಉಲ್ಲೇಖಿಸಲಾಗಿದೆ. ಇತ್ತೀಚಿಗೆ ತುಮಕೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಆಗ್ರಹಿಸಿದ್ದರು. ಸುಮಾರು ಮೂವತ್ತಕ್ಕೂ ಹೆಚ್ಚು ಮಠಾಧೀಶರು ಪ್ರತ್ಯೇಕ ಸಭೆ ಮಾಡಿ ಪರಮೇಶ್ವರ್‌ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಹಕ್ಕೊತ್ತಾಯ ಮಾಡಿದ್ದರು.

ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿ ಎಂದು ಬಿಂಬಿಸಲಾಗಿತ್ತು. ಡಿ.ಕೆ.ಶಿವಕುಮಾರ್‌ ಹೋದ ಕಡೆಯಲ್ಲೆಲ್ಲಾ ಮುಂದಿನ ಮುಖ್ಯಮಂತ್ರಿ ಎಂಬ ಘೋಷಣೆಗಳು ಮೊಳಗುತ್ತಿವೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದಾರೆ, ಅವರೇ ಮುಂದುವರೆಯುತ್ತಾರೆ ಎಂದು ಬೆಂಬಲಿಗರು ಹೇಳುತ್ತಿರುವ ನಡುವೆಯೇ ಜಿಲ್ಲಾವಾರು ವಿವಿಧ ನಾಯಕರುಗಳು ಮುಖ್ಯಮಂತ್ರಿ ಅಭ್ಯರ್ಥಿಗಳೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಬೆಳಗಾವಿಯಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಮುಂದುವರಿಯುತ್ತಾರೆ ಎಂಬ ಖಚಿತವಾದ ಸಂದೇಶ ರವಾನೆಯಾಗದ ಹಿನ್ನೆಲೆಯಲ್ಲಿ ದಿನೇ ದಿನೇ ಗೊಂದಲಗಳು ಹೆಚ್ಚುತ್ತಿವೆ. ಆಕಾಂಕ್ಷಿಗಳ ಪಟ್ಟಿಯು ಬೆಳೆಯುತ್ತಿದೆ.

RELATED ARTICLES

Latest News