ಬೆಂಗಳೂರು,ಡಿ.4- ಕಳೆದ ಮೂರು ದಿನಗಳಿಂದ ನವದೆಹಲಿಯಲ್ಲಿ ಬಿಡು ಬಿಟ್ಟಿರುವ ಬಿಜೆಪಿ ಭಿನ್ನಮತೀಯ ನಾಯಕರು ರಾಜ್ಯ ಉಸ್ತುವಾರಿ ಡಾ.ಮೋಹನ್ ಅಗರ್ ವಾಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಕಳೆದ ತಡರಾತ್ರಿ ನವದೆಹಲಿಯಲ್ಲಿ ರಾಧಾ ಮೋಹನ್ ಅಗರ್ ವಾಲ್ ಅವರ ನಿವಾಸದಲ್ಲಿ ಭಿನ್ನಮತೀಯ ಬಣ ಭೇಟಿಯಾಗಿ ಪಕ್ಷದೊಳಗಿನ ಪ್ರಸಕ್ತ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದ್ದಾರೆ.ಶಾಸಕರಾದ ರಮೇಶ್ ಜಾರಕಿಹೊಳಿ, ಬಿ.ಪಿ.ಹರೀಶ್, ಮಾಜಿ ಸಂಸದರಾದ ಜಿ.ಎಂ.ಸಿದ್ದೇಶ್ವೇರ್, ಬಿ.ವಿ.ನಾಯಕ್, ಮಾಜಿ ಸಚಿವ ಕುಮಾರ್ ಬಂಗಾರಪ್ಪ ಮತ್ತಿತರ ಪ್ರಮುಖರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತಕತೆ ನಡೆಸಿದ್ದು, ಭೇಟಿಯ ಬಗ್ಗೆ ಮಾಧ್ಯಮಗಳಿಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲವಾದರೂ ರಾಜ್ಯ ಅಧ್ಯಕ್ಷರ ಬದಲಾವಣೆ ಮಾಡಲು ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಯಾವುದೇ ಸಂದರ್ಭದಲ್ಲಿ ಕರ್ನಾಟಕ ಬಿಜೆಪಿ ಘಟಕಕ್ಕೆ ದೆಹಲಿ ನಾಯಕರು ಅಧ್ಯಕ್ಷರನ್ನು ನೇಮಕ ಮಾಡಬಹುದೆಂಬ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಬಿ.ವೈ.ವಿಜಯೇಂದ್ರ ಅವರನ್ನು ನೇಮಕ ಮಾಡದಂತೆ ವಿರೋಧಿ ಬಣ ಉಸ್ತುವಾರಿ ಬಳಿ ಬೇಡಿಕೆ ಇಟ್ಟಿದೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟ ಭರವಸೆ ನೀಡದ ಅಗರ್ವಾಲ್ ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಬೇಕು. ನಾವು ಅವರನ್ನೇ ಮುಂದುವರಿಸುತ್ತೇವೆಂದು ಹೇಳಿಲ್ಲ. ಹಾಗಂತ ಅವರನ್ನು ಬದಲಾವಣೆ ಮಾಡಿದರೆ ಮಾಡಲೂಬಹುದು. ಅಂತಿಮವಾಗಿ ಪಕ್ಷ ಹಾಗೂ ಕಾರ್ಯಕರ್ತರ ಹಿತ ದೃಷ್ಟಿಯಿಂದ ತೆಗೆದುಕೊಳ್ಳುವ ನೀವು ನಿರ್ಧಾರವನ್ನು ಎಲ್ಲರೂ ಒಪ್ಪಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಬಗ್ಗದ ಭಿನ್ನಮತೀಯರು:
ರಾಜ್ಯ ಬಿಜೆಪಿ ಮನಯೊಂದು ಮೂರು ಬಾಗಿಲು ಎಂಬಂತಾಗಿದೆ. ಪಕ್ಷದಲ್ಲಿ ವಿಜಯೇಂದ್ರ ಪರವಾದ ಒಂದು ತಂಡ, ವಿರುದ್ಧವಾದ ಮತ್ತೊಂದು ತಂಡ ಹಾಗೂ ತಟಸ್ಥವಾದ ತಂಡವೊಂದು ಇದೆ. ಈ ಮೂರು ಬಣದಲ್ಲಿ ಒಂದಿಷ್ಟು ಜನರು ಗುರುತಿಸಿಕೊಂಡಿದ್ದಾರೆ. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆ ಶುರುವಾಗಿದೆ.ಹೈಕಮಾಂಡ್ ಒಗ್ಗಟ್ಟಿನ ಸೂತ್ರಕ್ಕೂ ರೆಬೆಲ್ ನಾಯಕರು ಕ್ಯಾರೆ ಎನ್ನದೇ ಭಿನ್ನ ಹಾದಿ ತುಳಿಯುತ್ತಿದ್ದಾರೆ. ನಾವು ಸರಿ ಹೋಗುವುದಿಲ್ಲ ಎನ್ನವುದನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಲೇ ಇದ್ದಾರೆ.
ಹೀಗಾಗಿ ಬಿಜೆಪಿಯಲ್ಲಿನ ಒಡಕು ದನಿ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಶಾಸಕ ಬಸನಗೌಡ ಪಾಟೀಲ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದ ಬಳಿಕವೂ ಕಮಲ ಪಾಳೆಯದ ಭಿನ್ನರು ತಮ ದನಿಯನ್ನು ತಗ್ಗಿಸುವ ಗೋಜಿಗೆ ಹೋಗಿಲ್ಲ. ಹಾಗೆಯೇ, ಭಿನ್ನ ದನಿಯನ್ನು ತಣ್ಣಗಾಗಿಸಲು ಸಂಘ ಪರಿವಾರದ ಪ್ರಮುಖರು ಪರಿಹಾರ ಸೂತ್ರ ರಚಿಸಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದ ಹಿರಿಯ ತಂಡಕ್ಕೆ ಜವಾಬ್ದಾರಿ ವಹಿಸಿದ್ದರು.
ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಸದಾನಂದ ಗೌಡ, ಸಂಸದ ಗೋವಿಂದ ಕಾರಜೋಳ ಅಭಿಪ್ರಾಯ ಸಂಗ್ರಹಿಸುವ ಶಾಸ್ತ್ರ ನಡೆಸಿ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಪ್ರಯತ್ನ ನಡೆಸಿದ್ದರು. ಈ ಸಮನ್ವಯ ಬೆಳವಣಿಗೆ ನಡೆದು ಒಂದು ವಾರ ಕಳೆಯುವುದರೊಳಗೆ ಪುನಃ ಭಿನ್ನರ ದನಿ ಸದ್ದು ಮಾಡಿದೆ. ಇದೆಲ್ಲವಕ್ಕೂ ಕಾರಣ ಒಂದೇ. ರಾಜ್ಯಾಧ್ಯಕ್ಷರ ಕುರ್ಚಿಯಲ್ಲಿ ಕೂತಿರುವ ಬಿ.ವೈ.ವಿಜಯೇಂದ್ರ. ಇವರನ್ನು ಬದಲಾಯಿಸುವರೆಗೂ ನಾವು ಸರಿ ಹೋಗಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.
ಮೂರು ಬಣವಾದ ಬಜೆಪಿ :
ರಾಜ್ಯ ಬಿಜೆಪಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಪಕ್ಷದಲ್ಲಿ ವಿಜಯೇಂದ್ರ ಪರವಾದ ಒಂದು ತಂಡ, ವಿರುದ್ಧವಾದ ಮತ್ತೊಂದು ತಂಡ ಹಾಗೂ ತಟಸ್ಥವಾದ ತಂಡವೊಂದು ಇದೆ. ಈ ಮೂರು ಬಣದಲ್ಲಿ ಒಂದಿಷ್ಟು ಜನರು ಗುರುತಿಸಿಕೊಂಡಿದ್ದಾರೆ. ಒಂದು ಬಣ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರೆ, ಮತ್ತೊಂದು ಬಣ ವಿಜಯೇಂದ್ರ ಪರವಾಗಿ ಗಟ್ಟಿಯಾಗಿ ನಿಂತಿದೆ. ಇನ್ನು ಮೂರನೇ ಬಣ ಅತ್ತ ಪರವೂ ಅಲ್ಲ, ಇತ್ತ ನೇರವಾಗಿ ವಿರೋಧವೂ ಅಲ್ಲ ಎಂಬಂತಿದೆ. ವಿಜಯೇಂದ್ರ ಅವರ ಮುಂದಿನ ಪಯಣದಲ್ಲಿ ಮೂರನೇ ಬಣದ ಪಾತ್ರ ಬಹುಮುಖ್ಯವಾಗಿದೆ.
ವಿಜಯೇಂದ್ರ ವಿರೋಧಿ ಬಣವಂತೂ ನೇರವಾಗಿಯೇ ತನ್ನ ವಾಗ್ದಾಳಿಯನ್ನು ನಡೆಸುತ್ತಿದೆ. ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲೇಬಾರದು ಎಂದು ಈ ಬಣ ಪಟ್ಟು ಹಿಡಿದಿದೆ. ಯಾವ ಮನವಿಗೂ, ಒತ್ತಡಕ್ಕೂ ಈ ಬಣ ಬಗ್ಗುತ್ತಿಲ್ಲ.
ಕುತೂಹಲದ ಅಂಶ ಏನೆಂದರೆ ವಿರೋಧಿ ಬಣ ದಿನದಿಂದ ದಿನಕ್ಕೆ ಶಕ್ತಿ ವೃದ್ಧಿಸಿಕೊಳ್ಳುತ್ತಿದೆ. ಇದು ವಿಜಯೇಂದ್ರಗೆ ಬಹುದೊಡ್ಡ ಸವಾಲಾಗಿ ಮಾರ್ಪಟ್ಟಿದೆ. ಇದರ ಹೊರತಾಗಿಯೂ ಕೆಲವು ಶಾಸಕರು ಹಾಗೂ ಮುಖಂಡರು ಪೂರ್ತಿ ಸೈಲೆಂಟಾಗಿದ್ದಾರೆ. ಯಾರ ಪರ ಹಾಗೂ ವಿರೋಧವಾಗಿಯೂ ಈ ಗುಂಪು ಕಾಣಿಸಿಕೊಂಡಿಲ್ಲ. ಯಾರ ಪರ ಮತ್ತು ವಿರುದ್ಧವಾಗಿಯೂ ಹೇಳಿಕೆಗಳನ್ನು ನೀಡುತ್ತಿಲ್ಲ. ಈ ಗುಂಪಿನಲ್ಲಿ ಹಾಲಿ ಶಾಸಕರು ಮತ್ತು ಪಕ್ಷದಲ್ಲಿ ವಿವಿಧ ಜವಾಬ್ದಾರಿಯನ್ನು ನಿರ್ವಹಣೆ ಮಾಡುವವರು ಇದ್ದಾರೆ.
