ಬೆಂಗಳೂರು,ಡಿ.26- ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಸ್ವಂತ ಬಲದ ಮೇಲೆಯೇ ಅಧಿಕಾರ ಗದ್ದುಗೆ ಹಿಡಿಯಲಿದೆ ಎಂದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ. ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಭಾರೀ ಬಹುಮತ ಪಡೆದು ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ರಾಜ್ಯದ ಮತದಾರರು ಕಾಂಗ್ರೆಸ್ ಪಕ್ಷವನ್ನು ಮನೆಗೆ ಕಳುಹಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಈಗಿನ ಪರಿಸ್ಥಿತಿಯನ್ನು ನೋಡಿದರೆ ಬಿಜೆಪಿ 140 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಜನವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಧಿಕ್ಕರಿಸಲು ಜನ ಸಿದ್ಧವಾಗುತ್ತಿದ್ದಾರೆ. ನಾಡಿನ ಜನರ ಅಪೇಕ್ಷೆಗೆ ತಕ್ಕಂತೆ ನಾವು ಒಟ್ಟಾಗಿ ಪಕ್ಷ ಸಂಘಟಿಸಬೇಕು. ಈ ನಿಟ್ಟಿನಲ್ಲಿ ನಮ ವೈಯಕ್ತಿಕ ಹಿತಾಸಕ್ತಿಗಳನ್ನು ಮರೆತು ಪಕ್ಷದ ಹಿತಾಸಕ್ತಿ ಕಡೆ ಗಮನ ಕೊಡಬೇಕು. ಕಾರ್ಯಕರ್ತರು ಸಿದ್ಧರಾಗಬೇಕೆಂದು ಕರೆ ಕೊಟ್ಟರು.
ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಒಳಜಗಳವನ್ನು ಗಮನಿಸಿದರೆ ರಾಜ್ಯದಲ್ಲಿ ಯಾವುದೇ ವೇಳೆ ಮಧ್ಯಂತರ ಚುನಾವಣೆ ಬಂದರೂ ಬರಬಹುದು. ಹಾಗೊಂದು ವೇಳೆ ಅಂಥ ಪರಿಸ್ಥಿತಿ ಬಂದರೆ ನಾವು ಎಲ್ಲದಕ್ಕೂ ಸಿದ್ಧರಾಗಿ ಚಳಿ ಬಿಟ್ಟು ಕೆಲಸ ಮಾಡಬೇಕು. ಸ್ವಂತ ಶ್ರಮದ ಮೇಲೆ ಪಕ್ಷ ಅಧಿಕಾರಕ್ಕೆ ಬರಬೇಕು.
ಅಷ್ಟರ ಮಟ್ಟಿಗೆ ಕಾರ್ಯಕರ್ತರು ಕೆಲಸ ಮಾಡಬೇಕೆಂದು ಕಿವಿಮಾತು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದ ಮದವೇರಿದೆ. ಬೆಳಗಾವಿ ಅಧಿವೇಶನದಲ್ಲಿ ಗೃಹಲಕ್ಷ್ಮಿ ಹಣದ ಕುರಿತಾಗಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ನಾವು ಇದರ ಬಗ್ಗೆ ಹೋರಾಟ ನಡೆಸಿದಾಗ ಕ್ಷಮೆ ಕೇಳಿದರು. ಈಗಲೂ ಎರಡು ತಿಂಗಳ ಹಣ ಎಲ್ಲಿಗೆ ಹೋಗಿದೆ ಎಂಬುದು ಗೊತ್ತಿಲ್ಲ. ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು.
ಬಿಜೆಪಿ ಅಂದರೆ ಮುಂದುವರೆದ ಸಮುದಾಯದ ಪಕ್ಷ ಎಂದು ಕಾಂಗ್ರೆಸ್‌ನವರು ಟೀಕೆ ಮಾಡುತ್ತಿದ್ದರು. ಪಟ್ಟಣ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಇದನ್ನು ಸುಳ್ಳು ಮಾಡಿದೆ. ಬಿಜೆಪಿ ಬಡವರ ದಲಿತರ ಹಾಗೂ ಎಲ್ಲ ಸಮುದಾಯದ ಪಕ್ಷ ಎಂಬುದನ್ನು ತೋರಿಸಿದೆ. ಈ ಫಲಿತಾಂಶ ಮುಂಬರುವ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದರು.
