ಬೆಂಗಳೂರು, ಜ.12- ದೆಹಲಿಯಲ್ಲಿ ನಡೆದ ಒಪ್ಪಂದದಂತೆ ತಮಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಲೇಬೇಕು ಎಂದು ಪಟ್ಟು ಹಿಡಿದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಕ್ರಾಂತಿಯ ಬಳಿಕ ಸಿಡಿದೇಳುವ ಸಾಧ್ಯತೆ ಕಂಡು ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಲೇಬಾರದು ಎಂದು ಅಡ್ಡಿ ಪಡಿಸುತ್ತಿರುವುದು ಮತ್ತೊಂದು ರೀತಿಯ ಸಂಘರ್ಷಕ್ಕೆ ನಾಂದಿಯಾಗಿದೆ.
ಅಧಿಕಾರ ಹಂಚಿಕೆಯ ಗೊಂದಲ ಸೌಹಾರ್ದಯುತವಾಗಿ ಬಗೆ ಹರಿಯಲಿ. ಪಕ್ಷಕ್ಕೆ ಹಾನಿಯಾಗದಂತೆ ಸುಸೂತ್ರವಾಗಿ ಎಲ್ಲವೂ ಮುಗಿಯಲಿ ಎಂದು ಸಹನೆಯಿಂದ ಕಾದು ಕುಳಿತಿದ್ದ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಸಹನೆ ಕಳೆದುಕೊಳ್ಳುತ್ತಿದ್ದು, ಬಹಿರಂಗವಾಗಿ ಸಂಘರ್ಷದ ಹಾದಿ ಹಿಡಿಯಲು ಮುಂದಾಗಿದ್ದಾರೆ.
ಸಂಕ್ರಾಂತಿ ಹಬ್ಬದವರೆಗೂ ಕಾದು ನೋಡುವ ನಿರ್ಧಾರ ಮಾಡಿರುವ ಡಿ.ಕೆ.ಶಿವಕುಮಾರ್ ಅನಂತರ ಬಹಿರಂಗವಾಗಿಯೇ ಮಾತನಾಡಲಿದ್ದಾರೆ ಎನ್ನಲಾಗುತ್ತಿದೆ. ಡಿ.ಕೆ.ಶಿವಕುಮಾರ್ ಬಣದ ಶಾಸಕರು ಕೂಡ ಸಂಘರ್ಷದ ಹಾದಿಗೆ ಕೈ ಜೋಡಿಸಲಿದ್ದು, ಅಗತ್ಯ ಬಿದ್ದರೆ ದೆಹಲಿಗೆ ತೆರಳಲು ತಯಾರಿ ಮಾಡಿಕೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ದಾಖಲೆಯನ್ನು ಮುರಿಯಬೇಕು.ಆವರೆಗೂ ಸಹನೆಯಿಂದ ಇರಿ ಎಂದು ಸಿದ್ದರಾಮಯ್ಯ ಕೇಳಿಕೊಂಡಿದ್ದರು ಎನ್ನಲಾಗಿದೆ. ಅದಕ್ಕಾಗಿ ಕಾಂಗ್ರೆಸ್‌ನ ಎಲ್ಲ ನಾಯಕರು ಸಹಮತದಿಂದ ಇದ್ದರೂ ಕಳೆದ ಜನವರಿ 6ಕ್ಕೆ ಸಿದ್ದರಾಮಯ್ಯ ಹೊಸ ದಾಖಲೆ ಬರೆದಿದ್ದಾರೆ. ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಅದರ ಬೆನ್ನಲ್ಲೇ ಸಿದ್ದರಾಮಯ್ಯ ಬೆಂಬಲಿಗ ಶಾಸಕರು, ಸಚಿವರು ಈ ಅವಧಿ ಪೂರ್ಣ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದು ಹೇಳಲಾರಂಭಿಸಿರುವುದು ಡಿ.ಕೆ.ಶಿವಕುಮಾರ್ ಬಣವನ್ನು ಕೆರಳಿಸಿದೆ.
ತಾಳೆ ಕಳೆದುಕೊಳ್ಳುತ್ತಿರುವ ಡಿ.ಕೆ.ಬಣ:
ಹೈಕಮಾಂಡ್ ತಮಗೆ ಅವಕಾಶ ಕಲ್ಪಿಸಲಿದೆ ಎಂದು ಪ್ರತಿಬಾರಿಯೂ ಹೇಳುತ್ತಲೇ ತಮನ್ನು ತಾವು ಸಮಧಾನ ಪಡಿಸಿಕೊಳ್ಳುತ್ತಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಪಕ್ಷದ ವರಿಷ್ಠ ಮಂಡಲಿಯಿಂದ ಕೃಪಾಶೀರ್ವಾದ ದೊರೆಯುವ ಸಾಧ್ಯತೆಗಳು ಕ್ಷೀಣವಾಗಿವೆ. ದೆಹಲಿ ನಾಯಕರಲ್ಲಿ ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಡಿ.ಕೆ.ಶಿವಕುಮಾರ್ ಪರವಾಗಿದ್ದರೂ, ಸದ್ಯಕ್ಕೆ ಮುಂಚೂಣಿ ನಾಯಕರಾಗಿರುವ ರಾಹುಲ್ ಗಾಂಧಿ ಭಿನ್ನ ನಿಲುವು ತಳೆದಿದ್ದಾರೆ. ಸಿದ್ದರಾಮಯ್ಯ ಅವರೇ ಮುಂದುವರೆಯಲಿ ಎಂಬ ಒಲವು ಹೊಂದಿರುವುದಾಗಿ ಹೇಳಲಾಗುತ್ತಿದೆ. ರಾಹುಲ್ ಗಾಂಧಿ ಅವರ ಆಪ್ತ ಕೆ.ಸಿ.ವೇಣುಗೋಪಾಲ್ ಕೂಡ ಸಿದ್ದರಾಮಯ್ಯ ಅವರ ಪರವಾಗಿದ್ದಾರೆ ಎಂಬ ಮಾತುಗಳಿವೆ.
ಯಾರು ಎಷ್ಟೇ ಹೇಳಿದರೂ ತಾವಂತೂ ಕೇಳುವುದಿಲ್ಲ ಎಂದು ಜಿದ್ದಿಗೆ ಬಿದ್ದಿರುವ ಡಿ.ಕೆ.ಶಿವಕುಮಾರ್ ಬಲವಂತವಾಗಿಯಾದರೂ ಅಧಿಕಾರ ಪಡೆದೇ ಪಡೆದುಕೊಳ್ಳುವುದಾಗಿ ಹೇಳಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆ ಒದ್ದು ಅಧಿಕಾರ ಕಿತ್ತುಕೊಳ್ಳಬೇಕು ಎಂದು ತಮ ಗುರುಗಳು ಹೇಳಿದ್ದರು ಎಂದು ಡಿ.ಕೆ.ಶಿವಕುಮಾರ್ ಬೆಳಗಾವಿ ಅಧಿವೇಶನದಲ್ಲಿ ಹೇಳಿದ್ದರು. ಅದರಂತೆ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದುಕೊಂಡಿದ್ದನ್ನು ಸರಿಸಿಕೊಂಡಿದ್ದರು.
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದ ಡಿ.ಕೆ.ಶಿವಕುಮಾರ್ ಹೈಕಮಾಂಡ್ ನಾಯಕರ ಮಾತಿಗೆ ಕಟ್ಟು ಬಿದ್ದು ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಟ್ಟಿದ್ದರು. ಉಪಮುಖ್ಯಮಂತ್ರಿ ಸ್ಥಾನ ಒಪ್ಪಿಕೊಂಡಿದ್ದರು. ಜೊತೆಗೆ ಪಕ್ಷದ ಅಧ್ಯಕ್ಷ ನಿಭಾಯಿಸಿ ಲೋಕಸಭೆ ಚುನಾವಣೆಯನ್ನು ನಡೆಸಿದ್ದರು. ಸಿದ್ದರಾಮಯ್ಯ ಕಾಂಗ್ರೆಸ್ ಗೆ ಬಂದಾಗಿನಿಂದಲೂ ಅಧಿಕಾರ ಪಡೆಯುತ್ತಲೇ ಇದ್ದಾರೆ. ಪಕ್ಷ ಸಂಘಟನೆಯಲ್ಲಿ ಕೆಲಸ ಮಾಡಿದವರು ಬರಿಗೈನಲ್ಲಿ ಕುಳಿತುಕೊಳ್ಳುವಂತಾಗಿದೆ. ಮುಂದೆ ಇದೇ ಪರಿಸ್ಥಿತಿ ನಿರ್ಮಾಣವಾದರೆ ಸಂಘಟನೆಯಲ್ಲಿ ಕೆಲಸ ಮಾಡಲು ಕಾರ್ಯಕರ್ತರು ಉತ್ಸಾಹ ಕಳೆದುಕೊಳ್ಳುತ್ತಾರೆ. ಮಾಡಿದ ಕೆಲಸಕ್ಕೆ ಕೂಲಿ ಕೊಡಲೇ ಬೇಕು ಎಂಬ ವಾದ ಮಂಡಿಸುತ್ತಿರುವ ಡಿ.ಕೆ.ಶಿವಕುಮಾರ್ ಇದೇ ಅವಧಿಯಲ್ಲೇ ತಮಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಪಟ್ಟು ಹಿಡಿದಿರುವುದಾಗಿ ತಿಳಿದು ಬಂದಿದೆ.
ಐದು ಉಪಮುಖ್ಯಮಂತ್ರಿಗಳು:
ಸರ್ಕಾರಕ್ಕೆ ಎರಡೂವರೆ ವರ್ಷವಾದ ಸಂದರ್ಭದಲ್ಲೇ ಡಿ.ಕೆ.ಶಿವಕುಮಾರ್ ತಮ ಸಂಪುಟದ ಸ್ವರೂಪವನ್ನು ಸಿದ್ಧಪಡಿಸಿಕೊಂಡಿದ್ದರು. ಜಾತಿ ಹಾಗೂ ಧರ್ಮವಾರು ಉಪಮುಖ್ಯಮಂತ್ರಿ ಹುದ್ದೆ ನೀಡುವುದು, ಭೌಗೋಳಿಕ ಹಾಗೂ ಸಾಮಾಜಿಕ ನ್ಯಾಯದ ಅನುಸಾರ ಕ್ರಿಯಾಶೀಲರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಯೋಜನೆಯಲ್ಲಿದ್ದರು ಎನ್ನಲಾಗಿದೆ. ಸಿದ್ದರಾಮಯ್ಯ ಅವರ ಬಣದಲ್ಲಿ ಹೆಚ್ಚು ಸಕ್ರಿಯರಾಗಿರುವವರಿಗೂ ತಮ ಸಂಪುಟದಲ್ಲಿ ಪ್ರಮುಖ ಸ್ಥಾನ ನೀಡುವ ಮುನ್ಸೂಚನೆ ನೀಡಿದ್ದರು ಎಂದು ತಿಳಿದು ಬಂದಿದೆ.
ಡಿ.ಕೆ.ಶಿವಕುಮಾರ್ ಅವರ ಪಟ್ಟಿಯ ಪ್ರಕಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರರೂ ಆಗಿರುವ ಸಚಿವ ಪ್ರಿಯಾಂಕ ಖರ್ಗೆ, ಲಿಂಗಾಯಿತ ಸಮುದಾಯದ ಎಂ.ಬಿ.ಪಾಟೀಲ್, ಪರಿಶಿಷ್ಟ ಪಂಗಡದ ಸತೀಶ್ ಜಾರಕಿಹೊಳಿ ಉಪಮುಖ್ಯಮಂತ್ರಿಗಳಾಗುವುದು ನಿರ್ಧರಿತವಾಗಿತ್ತು. ಅಲ್ಪಸಂಖ್ಯಾತ ಸಮುದಾಯ ಹಾಗೂ ಮಹಿಳಾ ಕೋಟಾದಲ್ಲಿ ಇನ್ನಿಬ್ಬರನ್ನು ಉಪಮುಖ್ಯಮಂತ್ರಿ ಮಾಡುವ ಆಲೋಚನೆ ಡಿ.ಕೆ.ಶಿವಕುಮಾರ್ ಅವರಲ್ಲಿತ್ತು ಎನ್ನಲಾಗಿದೆ.
ಬಜೆಟ್ ಮಂಡನೆ, ಸಂಪುಟ ಪುನರ್ ರಚನೆಗೆ ಅಡ್ಡಿ:
ಸಿದ್ದರಾಮಯ್ಯ 2026-27ನೇ ಸಾಲಿನ ಬಜೆಟ್ ಮಂಡಿಸಬಾರದು ಹಾಗೂ ಸಚಿವ ಸಂಪುಟವನ್ನು ವಿಸ್ತರಣೆ ಮಾಡಬಾರದು ಎಂದು ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದು, ಪದೇ ಪದೇ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಈ ನಿಟ್ಟಿನಲ್ಲಿ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಸಿದ್ದರಾಮಯ್ಯ ಜನವರಿ ಕಳೆದರೂ ಬಜೆಟ್ ತಯಾರಿಕೆ ಪೂರ್ವಭಾವಿ ಸಭೆಗಳನ್ನು ಆರಂಭಿಸಿ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ ಹೇಳಿದಂತೆ ಅದರಲ್ಲೂ, ರಾಹುಲ್ ಗಾಂಧಿ ಹೇಳಿದಂತೆ ಕೇಳುತ್ತೇನೆ ಎನ್ನುತ್ತಲಿದ್ದಾರೆ. ಡಿ.ಕೆ.ಶಿವಕುಮಾರ್ ಹೈಕಮಾಂಡ್ ತಮಗೆ ಅವಕಾಶ ನೀಡಲಿದೆ ಎಂದು ಪದೇ ಪದೇ ವಿಶ್ವಾಸ ವ್ಯಕ್ತ ಪಡಿಸುತ್ತಿದ್ದಾರೆ. ಜೊತೆಗೆ ಪದೇ ಪದೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುತ್ತಲೇ ಇದ್ದಾರೆ.
ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ಸಂಕ್ರಾಂತಿ ರಾಜ್ಯ ರಾಜಕೀಯದಲ್ಲಿ ಸಂ-ಕ್ರಾಂತಿಗೆ ನಾಂದಿಯಾಗುವ ಎಲ್ಲಾ ಮುನ್ಸೂಚನೆಗಳು ಇವೆ.
