ಬೆಂಗಳೂರು, ಜ.13- ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಅವರನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭೇಟಿ ಮಾಡಲಿದ್ದು, ಮಹತ್ವದ ಮಾತುಕತೆ ನಡೆಸಲಿದ್ದಾರೆ.ತಮಿಳುನಾಡಿನ ಊಟಿಯಲ್ಲಿ ನಡೆಯಲಿರುವ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದಾರೆ. ಮಾರ್ಗ ಮಧ್ಯೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರನ್ನು ಸ್ವಾಗತಿಸಲು ಡಿ.ಕೆ.ಶಿವಕುಮಾರ್ ಮಾತು ಸಿದ್ದರಾಮಯ್ಯ ಹಾಜರಿರಲಿದ್ದಾರೆ.
ಬೆಂಗಳೂರಿನ ಎಚ್ ಎ ಎಲ್ ವಿಮಾನ ನಿಲ್ದಾಣದ ಮೂಲಕ ವಿಶೇಷ ವಿಮಾನದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಒಟ್ಟಿಗೆ ಮೈಸೂರಿಗೆ ಪ್ರಯಾಣಿಸಿದ್ದಾರೆ. ಬೆಂಗಳೂರಿನಲ್ಲಿ ಇಬ್ಬರೂ ನಾಯಕರಿಗೆ ಬಹು ಮುಖ್ಯವಾದ ಕಾರ್ಯಕ್ರಮಗಳಿದ್ದ ಹೊರತಾಗಿಯೂ ಅವುಗಳನ್ನು ಬದಿಗಿಟ್ಟು, ರಾಹುಲ್ ಗಾಂಧಿಯವರನ್ನು ಭೇಟಿ ಮಾಡಲು ತೆರಳಲಿದ್ದಾರೆ.
ಈ ಭೇಟಿ ಕೇವಲ ಔಪಚಾರಿಕ ಆಹ್ವಾನವಾಗಿರದೇ ರಾಜ್ಯ ರಾಜಕೀಯದ ಮಹತ್ವದ ಚರ್ಚೆಯ ವೇದಿಕೆಯಾಗಲಿದೆ ಎಂದು ಹೇಳಲಾಗಿದೆ.ಅಧಿಕಾರ ಹಂಚಿಕೆ ಸಂಬಂಧಪಟ್ಟಂತೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನಡುವೆ ಹಗ್ಗ ಜಗ್ಗಾಟ ನಡೆಯುತ್ತಲೇ ಇದೆ. ಮುಂದಿನ ಮುಖ್ಯಮಂತ್ರಿಯಾಗಿ ರಾಜ್ಯ ಬಜೆಟ್ ಅನ್ನು ತಾವೇ ಮಂಡಿಸಬೇಕು ಎಂದು ಪಟ್ಟು ಹಿಡಿದಿರುವ ಡಿ.ಕೆ.ಶಿವಕುಮಾರ್ ಅವರು, ಸಿದ್ದರಾಮಯ್ಯ ಅವರಿಗೆ ಬಜೆಟ್ ಪೂರ್ವ ಭಾವಿ ಸಭೆ ನಡೆಸಲು ಅಡ್ಡಿ ಪಡಿಸುತ್ತಿದ್ದಾರೆ ಎನ್ನಲಾಗಿದೆ.
ತಮಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟು ಕೊಡಲೇಬೇಕು ಎಂದು ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದಾರೆ. ಸಿದ್ದರಾಮಯ್ಯ ಅವರು ಅವಧಿ ಪೂರ್ಣಗೊಳಿಸುವ ಪ್ರಯತ್ನದಲ್ಲಿದ್ದಾರೆ. ಅಧಿಕಾರ ಹಂಚಿಕೆ ಸಂಬಂಧಪಟ್ಟಂತೆ ಇಬ್ಬರು ನಾಯಕರು ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇವೆ ಎನ್ನುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹಲವು ಭಾರಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಸಿದ್ದರಾಮಯ್ಯ ತಾವು ರಾಹುಲ್ ಗಾಂಧಿ ಹೇಳಿದಂತೆ ಕೇಳುವುದಾಗಿ ಪದೇ ಪದೇ ಹೇಳುತ್ತಿದ್ದಾರೆ.
ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಸಿದ್ದರಾಮಯ್ಯ ಅವರಿಗೆ ನಿರ್ದೇಶನ ಕೊಡಿಸಲು ಪ್ರಯತ್ನ ನಡೆಸಿದ್ದರು. ಆದರೆ ಅದು ಫಲ ನೀಡಿಲ್ಲ. ಕಳೆದ ತಿಂಗಳು ಡಿ.ಕೆ.ಶಿವಕುಮಾರ್ ನಾಲ್ಕು ಬಾರಿ ದೆಹಲಿಗೆ ಭೇಟಿ ನೀಡಿದ್ದರೂ ರಾಹುಲ್ ಗಾಂಧಿ ತಮ ಭೇಟಿಗೆ ಸಮಯ ನೀಡಿರಲಿಲ್ಲ. ನಿನ್ನೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ವೇಳೆಯಲ್ಲೂ ಡಿ.ಕೆ.ಶಿವಕುಮಾರ್ ತಮಗೆ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಭೇಟಿಗೆ ಸಮಯ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದರು ಎನ್ನಲಾಗಿದೆ.
ರಾಹುಲ್ ಗಾಂಧಿ ಮೈಸೂರಿಗೆ ಆಗಮಿಸುತ್ತಿರುವುದರಿಂದ ಈ ಅವಕಾಶವನ್ನು ಬಳಸಿಕೊಳ್ಳಲು ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ. ಸಿದ್ದರಾಮಯ್ಯ ಅವರ ಜೊತೆಯಲ್ಲೇ ರಾಹುಲ್ ಗಾಂಧಿಯವರನ್ನು ಭೇಟಿ ಮಾಡುತ್ತಿದ್ದಾರೆ. 2023ರ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಆಯ್ಕೆಗಾಗಿ ನಡೆದ ಪ್ರಕ್ರಿಯೆಯಲ್ಲಿ ಒಪ್ಪಂದವಾಗಿತ್ತು. ಅದರಂತೆ ತಮಗೆ ಅಧಿಕಾರ ಬಿಟ್ಟು ಕೊಡಬೇಕು ಎಂದು ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದಾರೆ. ರಾಹುಲ್ ಗಾಂಧಿಯವರ ಜೊತೆಗಿನ ಸಭೆಯಲ್ಲೂ ಇದೇ ವಿಚಾರವಾಗಿ ತಮ ಹಕ್ಕು ಪ್ರತಿಪಾದಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
