Wednesday, December 3, 2025
Homeರಾಜಕೀಯವೇಣುಗೋಪಾಲ್‌ ಭೇಟಿಯಾದ ಸಿಎಂ ಸಿದ್ದರಾಮಯ್ಯ, ಮಹತ್ವದ ಮಾತುಕತೆ

ವೇಣುಗೋಪಾಲ್‌ ಭೇಟಿಯಾದ ಸಿಎಂ ಸಿದ್ದರಾಮಯ್ಯ, ಮಹತ್ವದ ಮಾತುಕತೆ

CM Siddaramaiah meets AICC General Secretary Venugopal

ಬೆಂಗಳೂರು, ಡಿ.3- ಶತಾಯಗತಾಯ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಬೇಕೆಂಬ ಅಭಿಲಾಷೆ ಹೊಂದಿರುವ ಸಿದ್ದರಾಮಯ್ಯ ಅವರಿಂದು ಮಂಗಳೂರಿನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಆಪ್ತರಾಗಿರುವ ವೇಣುಗೋಪಾಲ್‌ ಪ್ರಮುಖ ರಾಜಕೀಯ ನಿರ್ಧಾರಗಳಲ್ಲಿ ಬಾಧ್ಯಸ್ಥರಾಗಿದ್ದಾರೆ. ಹೀಗಾಗಿ ಮಂಗಳೂರಿಗೆ ಆಗಮಿಸಿದ ಅವರನ್ನು ಆಹ್ವಾನಿಸಲು ಎಂದೂ ಇಲ್ಲದಷ್ಟು ಸಂಖ್ಯೆಯಲ್ಲಿ ಕಾರ್ಯಕರ್ತರ ದಂಡು ಆಗಮಿಸಿತ್ತು.

ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಜೊತೆ ಎರಡು ಬಾರಿ ಉಪಾಹಾರಕೂಟ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಲ್ಲಿ ನಡೆದ ಚರ್ಚೆ ಮತ್ತು ಡಿ.ಕೆ.ಶಿವಕುಮಾರ್‌ ಅವರ ವಾದ ಹಾಗೂ ಅಭಿಪ್ರಾಯಗಳನ್ನು ಕೆ.ಸಿ.ವೇಣುಗೋಪಾಲ್‌ ಅವರಿಗೆ ವಿವರಿಸಿದ್ದಾರೆ ಎನ್ನಲಾಗಿದೆ.

ಇದೇ ತಿಂಗಳ 8ರಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಇಬ್ಬರೂ, ಸರ್ವಪಕ್ಷ ಸಭೆ ನಡೆಸುವ ಸಲುವಾಗಿ ದೆಹಲಿಗೆ ಭೇಟಿ ನೀಡುತ್ತಿದ್ದಾರೆ. ಆ ಸಂದರ್ಭದಲ್ಲಿ ದೆಹಲಿಯಲ್ಲಿ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಅದಕ್ಕೆ ಪೂರ್ವಭಾವಿಯಾಗಿ ರಾಜ್ಯ ರಾಜಕಾರಣದ ಬಗ್ಗೆ ಹೈಕಮಾಂಡ್‌ ಗೆ ಮಾಹಿತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆ.ಸಿ.ವೇಣುಗೋಪಾಲ್‌ ಅವರಿಗೆ ವಿನಂತಿಸಿದ್ದಾರೆ ಎನ್ನಲಾಗಿದೆ.

ಸಾಲದೆಂಬಂತೆ ಕಾಂಗ್ರೆಸ್‌‍ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್‌ ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ನಾಯಕರು ಕೆ.ಸಿ.ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡದಂತೆ ಒತ್ತಡ ಹೇರಿದ್ದಾರೆ.

ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಪ್ರಭಾವಿ ನಾಯಕರಾಗಿದ್ದಾರೆ. ಒಂದು ವೇಳೆ ನಾಯಕತ್ವ ಬದಲಾವಣೆ ಮಾಡಿದರೆ, ಕಾಂಗ್ರೆಸ್‌‍ ಪಕ್ಷದಿಂದ ಅಹಿಂದ ವರ್ಗ ದೂರ ಸರಿಯುತ್ತದೆ. ಈ ಮೂಲಕ ಪ್ರಮುಖವಾದ ವೋಟ್‌ ಬ್ಯಾಂಕ್‌ ಅನ್ನು ಕಾಂಗ್ರೆಸ್‌‍ ಕಳೆದುಕೊಂಡು ಮುಂದಿನ ಚುನಾವಣೆಯಲ್ಲಿ ಅಸ್ಥಿತ್ವಹೀನವಾಗಬಹುದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಹಿಂದೆ ಕೆ.ಸಿ.ವೇಣುಗೋಪಾಲ್‌ ಕರ್ನಾಟಕ ಕಾಂಗ್ರೆಸ್ಸಿನ ಉಸ್ತುವಾರಿ ನಾಯಕರಾಗಿದ್ದರು. ಪ್ರಸ್ತುತ ದೆಹಲಿಯಲ್ಲಿ ಎಐಸಿಸಿಯ ಆಡಳಿತಾತಕ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಬಹುತೇಕ ಪ್ರಮುಖ ರಾಜಕೀಯ ನಿರ್ಧಾರಗಳಲ್ಲಿ ವೇಣುಗೋಪಾಲ್‌ ಅವರ ಹಸ್ತಕ್ಷೇಪವಿದೆ.

ವೇಣುಗೋಪಾಲ್‌ ಮೂಲಕ ಸಿದ್ದರಾಮಯ್ಯ ತಮ ರಾಜಕೀಯ ನಿಲುವನ್ನು ಹೈಕಮಾಂಡ್‌ ಗೆ ರವಾನಿಸುವ ಪ್ರಯತ್ನ ಮಾಡಿದ್ದಾರೆ. ಮಂಗಳೂರಿನಲ್ಲಿಂದು ನಡೆದ ಸಿದ್ದರಾಮಯ್ಯ ಮತ್ತು ಕೆ.ಸಿ.ವೇಣುಗೋಪಾಲ್‌ ಅವರ ನಡುವಿನ ಸಮಾಲೋಚನೆ ರಾಜ್ಯ ರಾಜಕೀಯಕ್ಕೆ ಹೊಸ ತಿರುವು ನೀಡಲಿದೆಯೇ ಅಥವಾ ಗೊಂದಲಗಳನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲಿದೆಯೇ ಎಂಬ ಕುತೂಹಲ ಕೆರಳಿಸಿದೆ.

RELATED ARTICLES

Latest News