ಬೆಂಗಳೂರು,ಜ.7- ಭ್ರಷ್ಟಾಚಾರವೇ ತುಂಬಿತುಳುಕುತ್ತಿರುವ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಾಜಿ ಸಿಎಂ ದೇವರಾಜ ಅರಸು ಅವರಿಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಮಾಜಿ ಸಿಎಂ ಬಿ.ಎಸ್ .ಯಡಿಯೂರಪ್ಪ ಆಕ್ಷೇಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿತುಳುಕುತ್ತಿದೆ ಎಲ್ಲಾ ರಂಗಗಳಲ್ಲಿ ಈ ಸರ್ಕಾರ ಸಂಪೂರ್ಣವಾಗಿ ಬಲವಾಗಿದೆ. ಸಿದ್ದರಾಮಯ್ಯ ಸರ್ಕಾರವನ್ನು ಅರಸು ಅವರ ಕಾಲಕ್ಕೆ ಹೋಲಿಕೆ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.
ದೇವರಾಜ ಅರಸು ಅವರು ತಮ ಅಧಿಕಾರಾವಧಿಯಲ್ಲಿ ಪ್ರತಿಯೊಂದು ಸಮುದಾಯಕ್ಕೂ ಸಾಕಷ್ಟು ಉತ್ತಮವಾದ ಕೆಲಸ ಮಾಡಿದ್ದರು. ಆದರೆ ಸಿದ್ದರಾಮಯ್ಯ ತಮ ಅವಧಿಯಲ್ಲಿ ಯಾರಿಗಾದರೂ ಒಂದು ಒಳ್ಳೆಯ ಕೆಲಸ ಮಾಡಿದ್ದಾರಾ? ಅರಸು ಎಲ್ಲಿ? ಇವರೆಲ್ಲಿ? ಎಂದು ಪ್ರಶ್ನಿಸಿದರು.
ನನ್ನ ಪ್ರಕಾರ ಸಿದ್ದರಾಮಯ್ಯ ಅವರು ಹೆಚ್ಚು ಕಾಲ ಆಡಳಿತ ನಡೆಸಿದ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರ ಆಗಿರಬಹುದು. ಆದರೆ ಸಿಕ್ಕಿರುವ ಅಧಿಕಾರ ಅವಧಿಯಲ್ಲಿ ಜನರಿಗೆ ಒಂದು ಒಳ್ಳೆಯ ಕೆಲಸವನ್ನೂ ಮಾಡಿಲ್ಲ. ಅರಸು ಅವರು ತಮ ಅಧಿಕಾರ ಅವಧಿಯನ್ನು ಜನರಿಗೆ ಮುಡುಪಾಗಿಟ್ಟಿದ್ದರು. ಭ್ರಷ್ಟಾಚಾರವನ್ನು ತಾಂಡವ ಮಾಡುತ್ತಿರುವ ಈ ಸರ್ಕಾರದಲ್ಲಿ ಅಂತಹ ದಿಗ್ಗಜರ ಸಾಲಿಗೆ ಹೋಲಿಕೆ ಮಾಡುವುದು ಸರಿಯೇ ಎಂದು ಕಿಡಿಕಾರಿದರು.
ಸರ್ಕಾರ ಯಾವ ಸಾಧನೆಯನ್ನು ಮಾಡದಿದ್ದರೂ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಹೊರಟಿದ್ದಾರೆ. ಯಾವ ಪುರುಷಾರ್ಥಕ್ಕೆ ಇವರು ಸಮಾವೇಶ ನಡೆಸುತ್ತಾರೆಯೋ ಗೊತ್ತಿಲ್ಲ. ಜನರ ಹಣವನ್ನು ಖರ್ಚು ಮಾಡಿ ಸಮಾವೇಶ ನಡೆಸುವ ಅಗತ್ಯವಾದರೂ ಏನಿದೆ ಎಂದು ಆಕ್ಷೇಪಿಸಿದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಒಂದಾಗಿ ಕೆಲಸ ಮಾಡಿ ರಾಜ್ಯದಲ್ಲಿ ಸುಮಾರು 140 ರಿಂದ 150 ಸ್ಥಾನಗಳನ್ನು ಗೆಲ್ಲಲು ಶ್ರಮ ಹಾಕುತ್ತೇವೆ. ಎರಡೂ ಪಕ್ಷಗಳು ಒಟ್ಟಾಗಿ ಕೆಲಸ ಮಾಡಿದರೆ ಗೆಲ್ಲುವುದು ಅಸಾಧ್ಯವಲ್ಲ ಎಂದರು.ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎರಡೂ ಪಕ್ಷಗಳೂ ಒಂದಾಗಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಅಗತ್ಯವಿದೆ ಅದನ್ನು ಗೆದ್ದು ತೋರಿಸುತ್ತೇವೆ. ಹೀಗಾಗಿ ಇಂದಿನಿಂದಲೇ ಪಕ್ಷ ಸಂಘಟನೆಗೆ ಒತ್ತು ಕೊಡುತ್ತಿದ್ದೇವೆ ಎಂದು ಹೇಳಿದರು.
ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ-ಜೆಡಿಎಸ್ ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ. ಸಣ್ಣಪುಟ್ಟ ವ್ಯತ್ಯಾಸಗಳಿದ್ದರೂ ಕಾಂಗ್ರೆಸ್ ವಿರುದ್ಧ ಒಂದಾಗಬೇಕಾದ ಅಗತ್ಯವಿದೆ. ನಾವು ಹೆಚ್ಚು ಸ್ಥಾನ ಗೆದ್ದರೆ ಅದು ವಿಧಾನಸಭೆ ಚುನಾವಣೆಗೆ ಅನುಕೂಲವಾಗಲಿದೆ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
