Friday, January 23, 2026
Homeರಾಜಕೀಯಅಧಿಕಾರ ಹಂಚಿಕೆ ಗೊಂದಲ ಬದಿಗಿಟ್ಟು ಅಧಿವೇಶನದಲ್ಲಿ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾದ ಕಾಂಗ್ರೆಸ್

ಅಧಿಕಾರ ಹಂಚಿಕೆ ಗೊಂದಲ ಬದಿಗಿಟ್ಟು ಅಧಿವೇಶನದಲ್ಲಿ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾದ ಕಾಂಗ್ರೆಸ್

Congress moves to show unity in session, putting power sharing confusion aside

ಬೆಂಗಳೂರು, ಡಿ.7- ಅಧಿಕಾರ ಹಂಚಿಕೆಯ ಗೊಂದಲಗಳನ್ನು ಕೆಲಕಾಲ ಬದಿಗಿಟ್ಟು, ಒಮತದಿಂದ ವಿಧಾನ ಮಂಡಲದ ಅಧಿವೇಶನವನ್ನು ನಿಭಾಯಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌‍ ಶಾಸಕಾಂಗ ವಲಯದಲ್ಲಿ ಗಂಭೀರ ಚರ್ಚೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅಧಿಕಾರ ಕಸಿದುಕೊಳ್ಳುವ ಪ್ರಯತ್ನವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಿರಂತರವಾಗಿ ಮುಂದುವರಿಸಿದ್ದಾರೆ. ಅಧಿಕಾರ ಉಳಿಸಿಕೊಳ್ಳಲು ಸಿದ್ದರಾಮಯ್ಯ ಮತ್ತು ಅವರ ಬಣ ನಾನಾ ರೀತಿಯ ತಂತ್ರಗಾರಿಕೆಗಳನ್ನು ಅನುಸರಿಸುತ್ತಿದೆ.

ಕೊಡುವುದಿಲ್ಲ… ಬಿಡುವುದಿಲ್ಲ… ಎಂಬ ಆಟ-ಹಠಗಳ ನಡುವೆ ಹೊಂದಾಣಿಕೆ ಅನಿವಾರ್ಯ ಎಂಬ ಪರಿಸ್ಥಿತಿಯನ್ನು ಚಳಿಗಾಲದ ಅಧಿವೇಶನ ತಂದಿಟ್ಟಿದೆ. ವಿರೋಧ ಪಕ್ಷಗಳಿಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಡುವಿನ ಅಧಿಕಾರ ಹಂಚಿಕೆಯ ಹಗ್ಗ ಜಗ್ಗಾಟವೇ ಪ್ರಮುಖ ಅಸ್ತ್ರವಾಗಿದೆ.

ಇದನ್ನು ಆಧಾರವಾಗಿಟ್ಟುಕೊಂಡು ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ ಎಂದು ಬಿಂಬಿಸುವ ಪ್ರಯತ್ನವನ್ನು ವಿರೋಧ ಪಕ್ಷಗಳು ಗಂಭೀರವಾಗಿ ನಡೆಸಿವೆ.ಪಂಚಖಾತ್ರಿ ಯೋಜನೆಗಳಿಂದಾಗಿ ರಾಜ್ಯದ ಜನ ಸುಭಿಕ್ಷವಾಗಿದ್ದಾರೆ ಎಂದು ಆಡಳಿತ ಪಕ್ಷ ಪ್ರತಿಪಾದಿಸುತ್ತಿದೆ. ಪಂಚಖಾತ್ರಿಗಳಿಗೆ ಹೆಚ್ಚು ಹಣ ಖರ್ಚು ಮಾಡಿ ಅಭಿವೃದ್ಧಿ ಕಾರ್ಯಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಆಡಳಿತ ಪಕ್ಷದ ಶಾಸಕರೇ ಬಹಿರಂಗ ಟೀಕೆಗಳನ್ನು ಮಾಡಿದ್ದಾರೆ. ಕಳೆದ ಎರಡೂವರೆ ವರ್ಷಗಳಲ್ಲಿ ಅಭಿವೃದ್ಧಿಯೇ ಆಗಿಲ್ಲ ಎಂದು ವಿರೋಧ ಪಕ್ಷ ಪ್ರತಿ ಬಾರಿ ಟೀಕಿಸುತ್ತಿದೆ. ಚಳಿಗಾಲದ ಅಧಿವೇಶನದಲ್ಲೂ ಇದೆ ಟೀಕೆಗಳು ಮುಂದುವರೆಯಲಿವೆ.

ಅಧಿಕಾರದ ಹಂಚಿಕೆಯ ಪ್ರಹಸನದ ವೇಳೆ ಕಾಂಗ್ರೆಸ್‌‍ನಲ್ಲಿ ಎರಡು ಗುಂಪುಗಳಾಗಿ ಶಾಸಕರು ವಿಭಜನೆಯಾಗಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರು ಹೈಕಮಾಂಡ್‌ ಸೂಚನೆಯ ಮೇರೆಗೆ ಎರಡು ಉಪಹಾರಕೂಟಗಳನ್ನು ನಡೆಸಿ ಪರಸ್ಪರ ಭಾಯೀ ಭಾಯೀ ಎಂದು ಜೊತೆಗೋಡಿದ್ದಾರೆ.

ಆದರೆ ತಂತ್ರ-ರಣತಂತ್ರದ ಭಾಗವಾಗಿ ವಿಭಜನೆಗೊಂಡಿದ್ದ ಶಾಸಕರುಗಳ ನಡುವೆ ಹೊಂದಾಣಿಕೆ ಕಂಡು ಬಂದಿಲ್ಲ. ವಿಧಾನ ಮಂಡಲದ ಚರ್ಚೆಯಲ್ಲಿ ಶಾಸಕರುಗಳ ನಡುವೆ ಬಣ ಬಡಿದಾಟದ ಕುರಿತು ಹೇಳಿಕೆಗಳು, ಅಭಿಪ್ರಾಯಗಳು ವ್ಯಕ್ತವಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ನಾಯಕತ್ವದ ವಿಚಾರವಾಗಿ ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರಗಳಿಗೆ ನಾನು ಮತ್ತು ಉಪಮುಖ್ಯಮಂತ್ರಿಯವರು ಬದ್ಧರಾಗಿರುತ್ತೇವೆ. ಈ ವಿಚಾರದಲ್ಲಿ ವಿಧಾನಸಭೆ ಅಥವಾ ವಿಧಾನ ಪರಿಷತ್‌ ಅಧಿವೇಶನದ ಸಂದರ್ಭದಲ್ಲಿ ಶಾಸಕರಾಗಲಿ, ಸಚಿವರಾಗಲಿ, ಪ್ರಮುಖ ನಾಯಕರಾಗಲಿ ಹೇಳಿಕೆಗಳನ್ನು ನೀಡಬಾರದು ಎಂದು ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಡಿ.ಕೆ.ಶಿವಕುಮಾರ್‌ ಕೂಡ ಇದಕ್ಕೆ ಧ್ವನಿಗೂಡಿಸಿದ್ದು ವಿರೋಧ ಪಕ್ಷಗಳಿಗೆ ಟೀಕೆ ಮಾಡಲು ನಾವಾಗಿಯೇ ಅಸ್ತ್ರ ನೀಡುವುದು ಬೇಡ ಎಂದು ತಮ ಬೆಂಬಲಿಗರಿಗೆ ಸಲಹೆ ನೀಡಿದ್ದು, ಮುಖ್ಯಮಂತ್ರಿ ಹುದ್ದೆಯ ಬಗ್ಗೆಯಾಗಲಿ ನಾಯಕತ್ವದ ಬದಲಾವಣೆಯ ಕುರಿತಾಗಲಿ ಚರ್ಚೆ ಮಾಡಿದರೆ ಅಂತಹವರಿಗೆ ನೋಟಿಸ್‌‍ ನೀಡುವುದಾಗಿಯೂ ಎಚ್ಚರಿಕೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಧಾನ ಮಂಡಲದಲ್ಲಿ ವಿರೋಧ ಪಕ್ಷಗಳ ಟೀಕೆಗಳಿಗೆ ಆಡಳಿತ ಪಕ್ಷದ ಶಾಸಕರು ಸಚಿವರು ಒಗ್ಗಟ್ಟಿನಿಂದ ಪ್ರತಿಕ್ರಿಯಿಸಬೇಕು. ಬಿಜೆಪಿ ಮತ್ತು ಜೆಡಿಎಸ್‌‍ ಬಳಿ ಟೀಕೆ ಮಾಡಲು ಯಾವುದೇ ಪ್ರಮುಖ ವಿಚಾರಗಳಿಲ್ಲ. ಹೀಗಾಗಿ ಅಧಿಕಾರ ಹಂಚಿಕೆಯ ಗೊಂದಲಗಳನ್ನೇ ಪ್ರಮುಖ ಅಸ್ತ್ರಗಳನ್ನಾಗಿ ಮಾಡಿಕೊಳ್ಳುವ ಸಾಧ್ಯತೆಯಿದೆ. ಅದಕ್ಕೆ ಆಡಳಿತ ಪಕ್ಷದ ಶಾಸಕರು ವಿವಾದಿತ ಹೇಳಿಕೆಗಳನ್ನು ನೀಡಿ, ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಮಾಡಬಾರದೆಂಬ ಸಂದೇಶವನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ರವಾನಿಸಿದ್ದಾರೆ.

ವಿರೋಧ ಪಕ್ಷಗಳು ಈ ಬಾರಿಯ ಅಧಿವೇಶನದಲ್ಲಿ ಕೋಮುವಾದದ ವಿಚಾರಗಳನ್ನು ಪ್ರಸ್ತಾಪಿಸಿ ಗದ್ದಲ ಉಂಟು ಮಾಡಲು ಯತ್ನಿಸಿದರೆ ಅದಕ್ಕೆ ಚಿಕ್ಕಮಗಳೂರಿನ ಸಖರಾಯಪಟ್ಟಣದಲ್ಲಿ ನಡೆದಿರುವ ಕಾಂಗ್ರೆಸ್‌‍ ಕಾರ್ಯಕರ್ತ ಗಣೇಶ ಅವರ ಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ತಿರುಗೇಟು ನೀಡಲು ತಯಾರಿಗಳಾಗಿವೆ. ಗಣೇಶ್‌ ಹತ್ಯೆ ಪ್ರಕರಣದಲ್ಲಿ ಬಜರಂಗದಳದ ಕಾರ್ಯಕರ್ತ ಭಾಗಿಯಾಗಿರುವ ಆರೋಪವಿದೆ. ಇದನ್ನೇ ಮುಂದಿಟ್ಟುಕೊಂಡು ವಿರೋಧಪಕ್ಷಗಳ ಟೀಕೆಗಳಿಗೆ ಪ್ರತ್ಯುತ್ತರಿಸಲು ಕಾಂಗ್ರೆಸ್‌‍ ಪಡೆ ಸಜ್ಜಾಗಿದೆ.

ಉಪಹಾರಕೂಟ ನಡೆಯದೇ ಇದ್ದರೆ ಮೊದಲಿನಂತೆ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರ ನಡುವೆ ಮುಸುಕಿನ ಗುದ್ದಾಟ ತೀವ್ರವಾಗಿ ಮುಂದುವರೆದಿದ್ದರೆ ವಿಧಾನ ಮಂಡಲದ ಸ್ವರೂಪವೇ ಬದಲಾಗುತ್ತಿತ್ತು. ಆದರೆ ವಾತಾವರಣ ತಿಳಿಗೊಳಿಸಿ ವಿರೋಧ ಪಕ್ಷಗಳನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್‌‍ ಸಜ್ಜುಗೊಳ್ಳುತ್ತಿದೆ. ಒಟ್ಟಿನಲ್ಲಿ ಈ ಬಾರಿ ಅಧಿವೇಶನ ಜಿದ್ದಾಜಿದ್ದಿನ ಕಣವಾಗಿ ಮಾರ್ಪಡಲಿದೆ.

RELATED ARTICLES

Latest News