ಬೆಳಗಾವಿ, ಡಿ.12- ಚಳಿಗಾಲದ ವಿಧಾನ ಮಂಡಲ ಅಧಿವೇಶನದ ಬಳಿಕ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂದು ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ನಿನ್ನೆ ಡಿ.ಕೆ.ಶಿವಕುಮಾರ್ ಬಣದ ಪ್ರತ್ಯೇಕ ಔತಣಕೂಟದ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರೀತಿ ವಿಶ್ವಾಸಕ್ಕಾಗಿ ಊಟಕ್ಕೆ ಸೇರುತ್ತೇವೆ. ಅದನ್ನು ಬಣ ರಾಜಕೀಯ ಎನ್ನುವುದು ಸರಿಯಲ್ಲ ಎಂದರು.
224 ಶಾಸಕರು ಡಿ.ಕೆ.ಶಿವಕುಮಾರ್ ಅವರ ಜೊತೆಯಲ್ಲಿದ್ದಾರೆ. ಊಟದ ವಿಷಯದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಂಬ ಪ್ರತ್ಯೇಕ ಬಣಗಳಿರುವುದಿಲ್ಲ. ನಾವೆಲ್ಲ ಒಟ್ಟಿಗೆ ಸೇರುವುದೇ ಅಪರೂಪ. ಅದನ್ನು ಶಕ್ತಿ ಪ್ರದರ್ಶನ ಎನ್ನುವುದು ಸರಿಯಲ್ಲ. ಒಟ್ಟಿಗೆ ಸೇರಿದ್ದೇವೆ ಊಟ ಮಾಡಿದ್ದೇವೆ. ಅದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಹೈಕಮಾಂಡ್ ಹೇಳಿದ ಮಾತನ್ನು ಧಿಕ್ಕರಿಸಿ ನಿಲ್ಲುವವರು ಯಾರು ಇಲ್ಲ. ನಮದು ಶಿಸ್ತಿನ ಪಕ್ಷ ವರಿಷ್ಠರು ಹೇಳಿದ ಮೇಲೆ ಮುಗಿಯಿತು ಎಂದು ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಭವಿಷ್ಯ ಕುರಿತು ಪ್ರತಿಕ್ರಿಯಿಸಿದರು.
ವಿಧಾನ ಮಂಡಳದ ಅಧಿವೇಶನದ ಬಳಿಕ ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ಸಿಗುತ್ತದೆ ಎಂಬ ವಿಶ್ವಾಸ ಇದೆ. ಎಲ್ಲದಕ್ಕೂ ಹಣೆಯ ಬರಹವೇ ಮುಖ್ಯ. ಅವಕಾಶ ಸಿಗದಿದ್ದರೆ ಹಣೆಯ ಬರಹಕ್ಕೆ ಹೊಣೆ ಯಾರು? ಭಗವಂತ ಏನು ಬರೆದಿದ್ದಾರೋ ಅದು ಆಗುತ್ತದೆ ಎಂದರು.
ಡಿಕೆ ಶಿವಕುಮಾರ್ ಅವರ ಹೋರಾಟ, ಶ್ರಮಕ್ಕೆ ಫಲ ಸಿಕ್ಕೇ ಸಿಗುತ್ತದೆ. ನಾವು ನಮ್ಮ ಅಭಿಪ್ರಾಯಗಳನ್ನು ಈಗಾಗಲೇ ಹೈಕಮಾಂಡ್ ನಾಯಕರ ಮುಂದೆ ಹೇಳಿದ್ದೇವೆ. ವರಿಷ್ಠರು ಕರೆದರೆ ನಾವು ಮತ್ತೊಮೆ ದೆಹಲಿಗೆ ಹೋಗುತ್ತೇವೆ ಎಂದಿದ್ದಾರೆ.
